ಕನಕಗಿರಿ (ಕೊಪ್ಪಳ ಜಿಲ್ಲೆ): ಇಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡು ಆರು ವರ್ಷಗಳಾದರೂ ಪೂರ್ಣಗೊಳ್ಳದ ಪರಿಣಾಮ ವಿದ್ಯಾರ್ಥಿಗಳು ಬಯಲಲ್ಲೇ ಕುಳಿತು ಪಾಠ ಕೇಳಬೇಕಾಗಿದೆ.
2018–19ರಲ್ಲಿ ಈ ಶಾಲೆ ಮಂಜೂರಾಗಿತ್ತು. ಆರಂಭದಲ್ಲಿ ತರಗತಿಗಳು ಶಾದಿಮಹಲ್ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ನಡೆಯುತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇಲಾಖೆಯು ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಳು ಬಿದ್ದಿದ್ದ ಕೊಠಡಿಗಳಿಗೆ ತರಗತಿಗಳನ್ನು ಸ್ಥಳಾಂತರಿಸಿದೆ.
ಶಾಲೆಗೆ ಹೊಸ ಕಟ್ಟಡಕ್ಕಾಗಿ 2020–21ರಲ್ಲಿ ಒಟ್ಟು ₹2.96 ಕೋಟಿ ಮಂಜೂರಾಗಿ ಹಂತ–ಹಂತವಾಗಿ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಜವಾಬ್ದಾರಿ ನೀಡಿದ್ದರೂ ಒಂದೂವರೆ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅರೆಬರೆಯಾಗಿರುವ ಹೊಸ ಕಟ್ಟಡದಲ್ಲಿ ಒಟ್ಟು ಹತ್ತು ಕೊಠಡಿಗಳ ಪೈಕಿ ಎಂಟು ಕೊಠಡಿಗಳಿಗೆ ಸುಣ್ಣಬಣ್ಣ ಹಚ್ಚಿಲ್ಲ. ಟೈಲ್ಸ್ ಜೋಡಿಸಿಲ್ಲ. ಬಾಕಿ ಉಳಿದ ಎರಡು ಕೊಠಡಿಗಳ ಗೋಡೆಗಳಿಗೆ ಪ್ಲಾಸ್ಟರ್ ಮಾಡಿಲ್ಲ. ಕಿಟಕಿ, ಬಾಗಿಲು ಜೋಡಿಸಿಲ್ಲ. ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿಲ್ಲ.
ಶಾಲೆಯಲ್ಲಿ ಓಡಾಟಕ್ಕೆ ಜಾಗ ಚಿಕ್ಕದಾಗಿವೆ. ಲೇ ಔಟ್ ಜಾಗದಲ್ಲಿ ಕಟ್ಟಡ ನಿರ್ಮಾಣ ಆಗುತ್ತಿರುವುದರಿಂದ ದಾರಿ ಯಾವುದು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಕ್ರೀಡಾಂಗಣದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
‘ಪ್ರಸ್ತುತ ಶಾಲೆ ನಡೆಯುತ್ತಿರುವ ಕಟ್ಟಡದ ಕೊಠಡಿಯೊಂದರ ಚಾವಣಿ ಹಾಳಾಗಿದೆ. ಕಟ್ಟಡವೂ ವಾಲಿದೆ. ಆದ್ದರಿಂದ ಮಕ್ಕಳಿಗೆ ಪ್ಲಾಸ್ಟಿಕ್ ಹಾಸು ಹಾಸಿ 6 ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬಯಲಲ್ಲಿ ಪಾಠ ಮಾಡಲಾಗುತ್ತಿದೆ’ ಎಂದು ಪಾಲಕ ಕನಕರೆಡ್ಡಿ ಕೆರಿ ತಿಳಿಸಿದರು.
ಶಾಲೆ ಆರಂಭವಾಗಿ ಆರು ವರ್ಷಗಳಾದರೂ ಪ್ರಭಾರ ಪ್ರಾಂಶುಪಾಲರು, ಕನ್ನಡ, ಇಂಗ್ಲಿಷ್ ವಿಷಯಗಳಿಗೆ ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ. ಸೌಲಭ್ಯದ ಕೊರತೆಯಿದ್ದರೂ ಫಲಿತಾಂಶದಲ್ಲಿ ಶಾಲೆ ಮುಂದೆ ಇದೆ. ಜಾಗದ ಅಭಾವವಿರುವ ಕಾರಣ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಬೇರೊಂದು ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಶಾಲಾ ಕಟ್ಟಡ ಪೂರ್ಣಗೊಳಿಸದೆ ನಿರ್ಲಕ್ಷ್ಯ ತೋರಿದೆ. ಕಾಮಗಾರಿಗೆ ಮಂಜೂರಾದ ಎಲ್ಲಾ ಹಣವನ್ನು ನಿಗಮಕ್ಕೆ ನೀಡಿದ್ದರೂ ಕೆಲಸ ಪೂರ್ಣಗೊಂಡಿಲ್ಲ. ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆದೇಶಿಸಿದರೂ ಕೆಲಸ ಪೂರ್ಣಗೊಂಡಿಲ್ಲ. ಇದುವರೆಗೆ ಕಾಮಗಾರಿ ನಿರ್ವಹಿಸಿದ ಕಟ್ಟಡ ಕಾರ್ಮಿಕರಿಗೆ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂಬ ದೂರು ಸಹ ಇದೆ’ ಎಂದು ಪೋಷಕರು ಆರೋಪಿಸುತ್ತಾರೆ.
ಕಾಮಗಾರಿ ಪೂರ್ಣಗೊಳಿಸುವಂತೆ ನಿಗಮಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಈ ವಿಷಯವನ್ನು ಜಿ.ಪಂ ಸಿಇಒ ಗಮನಕ್ಕೂ ತಂದಿದ್ದೇವೆಸುರೇಶ ಕೋಕರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.