ಮುನಿರಾಬಾದ್: ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ರಲ್ಲಿ ಆದ ಅವಘಡ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ಇಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಗೇಟ್ ವಿಳಾಸವೇ ಇಲ್ಲದಂತೆ ಕೊಚ್ಚಿಕೊಂಡು ಹೋಗಿದೆ. ಇನ್ನುಳಿದ ಗೇಟ್ ಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆ ಇದಾಗಿದೆ. ಆದರೂ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ನೀರಿನ ಬೆಲೆ ಗೊತ್ತಿದ್ದವರಿಗೆ ಹಾಗೂ ರೈತರ ಬೆವರಿನ ಫಲ ತಿಳಿದವರಿಗೆ ಮಾತ್ರ ಕಷ್ಟ ಎನು ಎಂಬುದು ಗೊತ್ತಾಗುತ್ತದೆ. ಪ್ರತಿ ವರ್ಷ ಜಲಾಶಯ ನಿರ್ವಹಣೆ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ದೂರಿದರು.
ಜವಾಬ್ದಾರಿಯುತ ಯೋಜನೆಯನ್ನು ನಿರ್ವಹಣೆ ಮಾಡಲು ಆಗದಿದ್ದರೆ ಯಾಕೆ ಅಧಿಕಾರ ಮಾಡಬೇಕು. ಈ ಅವಘಡಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕು. ಅನುದಾನದ ಕೊರತೆ ಇಲ್ಲ ಎಂದರು.
ಚೈನ್ ಲಿಂಕ್ ಕಳಚಿ ಗೇಟ್ ಶನಿವಾರ ಮಧ್ಯರಾತ್ರಿಯೇ ಉರುಳಿ ಹೋಗಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇರುವ ಎಲ್ಲ ಕೆಲಸವನ್ನು ಬಿಟ್ಟು ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಯಾರನ್ನೂ ಹೊಣೆಗಾರರನ್ನಾಗಿ ಮಾಡಲ್ಲ: ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದೆ. ಬೇರೆ ಟೀಕೆ ಟಿಪ್ಪಣೆಗಿಂತ ಗೇಟ್ ಅಳವಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಗೇಟ್ ಪರಿಶೀಲಿಸಿ ಮಾಧ್ಯಮದವರ ಜೊತೆ ಮಾತನಾಡಿ ‘ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಬಿಡಲಾಗಿದೆ’ ಎಂದು ವಿವರಿಸಿದರು.
‘ಇದು ತಾಂತ್ರಿಕ ವಿಷಯವಾಗಿದ್ದು ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. 70 ವರ್ಷಗಳ ಜಲಾಶಯ ಇದಾಗಿದ್ದು ಎಲ್ಲ ಅಧಿಕಾರಿಗಳು ಚೆನ್ನಾಗಿಯೇ ಕೆಲಸ ಮಾಡಿದ್ದಾರೆ. ಇದಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ’ ಎಂದರು.
ಈ ಭಾಗದ ಜೀವನಾಡಿ ಇರುವ ತುಂಗಭದ್ರಾ ಜಲಾಶಯ ಈ ಘಟನೆಯಿಂದ ಈ ಭಾಗದ ರೈತರಿಗೆ ನಷ್ಟ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇಂತಹ ಘಟನೆಗಳಿಗೆ ಕಾರಣ.ನವೀನ್ ಗುಳಗಣ್ಣನವರ, ಬಿಜೆಪಿ ಜಿಲ್ಲಾಧ್ಯಕ್ಷ
ತುಂಗಭದ್ರಾ ಜಲಾಶಯವನ್ನು ನಿರ್ವಹಣೆ ಮಾಡುವವರು ಯಾರು? ಈ ಕೆಲಸ ಮಾಡುವ ಗುತ್ತಿಗೆದಾರನಿಗೆ ಎಷ್ಟು ಹಣ ಸಂದಾಯವಾಗಿದೆ. ಯಾರ ಬೇಜವಾಬ್ದಾರಿಯಿಂದ ಗೇಟ್ ಕೊಚ್ಚಿಕೊಂಡು ಹೋಗಿದೆ. ಈ ಕುರಿತು ಸಿಬಿಐ ತನಿಖೆ ನಡೆಯಬೇಕುಜನಾರ್ದನ ರೆಡ್ಡಿ, ಶಾಸಕ
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚು ಮಾಡುತ್ತಿರುವ ಹಣವನ್ನು ನವಲಿ ಸಮಾನಾಂತರ ಜಲಾಶಯ ಯೋಜನೆಗೆ ವಿನಿಯೋಜಿಸಿದ್ದರೆ ರೈತರಿಗಾದರೂ ಅನುಕೂಲವಾಗುತ್ತಿತ್ತು. ಯಾವ ಕೆಲಸವನ್ನು ಸರ್ಕಾರ ಮಾಡಿಲ್ಲ.ಜಗದೀಶ ಶೆಟ್ಟರ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.