ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳು ಬಿದ್ದಿದ್ದ ಕೆರೆಯಲ್ಲೀಗ ನೀರನರ್ತನ

ಗಿಣಗೇರಾ ಕೆರೆಯಲ್ಲಿ ಮಕ್ಕಳ ಉದ್ಯಾನ, ಜಲಕ್ರೀಡೆಗಳಿಗೆ ಸಂಭ್ರಮಕ್ಕೆ ಚಾಲನೆ
Last Updated 6 ಜನವರಿ 2023, 8:53 IST
ಅಕ್ಷರ ಗಾತ್ರ

ಕೊಪ್ಪಳ: ಹಲವು ವರ್ಷಗಳಿಂದ ಪಾಳು ಬಿದ್ದು ವ್ಯರ್ಥವಾಗಿದ್ದ ಕೆರೆಯಲ್ಲೀಗ ನೀರನರ್ತನ. ಉತ್ತಮ ಪ್ರವಾಸಿ ತಾಣವಾಗಿ, ಜಲಕ್ರೀಡೆಗೆ ಹೇಳಿ ಮಾಡಿಸಿದ ಜಾಗವಾಗಿ ತಾಲ್ಲೂಕಿನ ಗಿಣಗೇರಾ ಗ್ರಾಮದ ಕೆರೆ ಅಭಿವೃದ್ಧಿಗೊಂಡಿದೆ.

ಅಲ್ಲಿ ನಿರ್ಮಾಣ ಮಾಡಲಾಗಿರುವ ಮಕ್ಕಳ ಉದ್ಯಾನ ಮತ್ತು ಜಲಕ್ರೀಡೆಗಳಿಗೆ ’ಅಜ್ಜನ ಜಾತ್ರೆ’ಯ ಸಮಯದಲ್ಲಿಯೇ ಚಾಲನೆ ಲಭಿಸಿತು.

ಅದು ಕೋವಿಡ್‌ ಎರಡನೇ ಅಲೆಯ ಲಾಕ್‌ಡೌನ್‌ ಸಮಯ. ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ತಮ್ಮ ಸಂಕಲ್ಪದಂತೆ ಜನರ ಸಹಭಾಗಿತ್ವದಲ್ಲಿ ಗಿಣಗೇರಾ ಕೆರೆ ಅಭಿವೃದ್ಧಿ ಮಾಡಲು ಪಣ ತೊಟ್ಟರು. ಒಂದೂವರೆ ವರ್ಷದ ನಿರಂತರ ಶ್ರಮದಿಂದ ಕೆರೆ ಈಗ ಹೊಳೆಯುತ್ತಿದೆ. ಕಸ ಕಡ್ಡಿಯೇ ತುಂಬಿಕೊಂಡಿದ್ದ ಕೆರೆ ಜಿಲ್ಲೆಯ ಜನರಿಗೆ ಮನರಂಜನೆಯ ತಾಣವಾಗಿ ಮಾರ್ಪಟ್ಟಿದೆ. ರ್‍ಯಾಫ್ಟಿಂಗ್‌, ಕಯಾಕಿಂಗ್‌, ಸ್ಪೀಡ್ ಬೋಟ್, ಬೈಕ್ ರೈಡ್ ಸಾಹಸಗಳು ಕಂಡುಬರುತ್ತಿವೆ.

ಕೆರೆ ಉದ್ಘಾಟಿಸಿ ಮಾತನಾಡಿದ ಗವಿಸಿದ್ದೇಶ್ವರ ಸ್ವಾಮೀಜಿ ‘ಸ್ವಚ್ಛ ಮನಸ್ಸು ಮತ್ತು ಒಳ್ಳೆಯದನ್ನು ಮಾಡಬೇಕು ಎನ್ನುವ ಸಂಕಲ್ಪ ಇದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈಗಿನ ಕೆರೆ ಅಭಿವೃದ್ಧಿಯೇ ಸಾಕ್ಷಿ. ಮೊದಲು ಕರೆಯಲ್ಲಿ ನಡೆದುಕೊಂಡು ಹೋಗಲು ಆಗದ ಕೆಟ್ಟ ಸ್ಥಿತಿಯಿತ್ತು. ಈಗ ಬೋಟ್‌ನಲ್ಲಿ ಓಡಾಡುವಂತಾಗಿದೆ. ಇಂಥ ಸಂಭ್ರಮವನ್ನು ನೋಡುವುದೇ ಕಣ್ಣಿಗೆ ಹಬ್ಬ’ ಎಂದರು.

’ಮಕ್ಕಳು, ಮಹಿಳೆಯರು, ತಾಯಂದಿರು ಹಾಗೂ ಯುವಕರು ನೀವೆಲ್ಲರೂ ಶ್ರಮಪಟ್ಟು ಕೆರೆ ಅಭಿವೃದ್ಧಿ ಮಾಡಿದ್ದೀರಿ. ನಿಮ್ಮ ಬೆವರ ಹನಿಯ ಶ್ರಮಕ್ಕೆ ಪ್ರಕೃತಿ ಮಾತೆಯೂ ಆಶೀರ್ವದಿಸಿ ಕೆರೆ ತುಂಬಿಸಿದ್ದಾಳೆ. ಒಂದು ಜಾತ್ರೆಯ ಮುಂದೆ ಸಂಕಲ್ಪ ಮಾಡಿದ್ದು, ಇನ್ನೊಂದು ಜಾತ್ರೆಯ ವೇಳೆಗೆ ಈಡೇರಿತು. ಒಂದು ಕೆಲಸವನ್ನು ಮಾಡುವುದಕ್ಕಿಂತ ಅದು ನನ್ನದು ಎನ್ನುವ ಮನೋಭಾವನೆಯಿಂದ ಉಳಿಸಿಕೊಳ್ಳುವುದು ಬಹಳ ಮುಖ್ಯ. ಸುಂದರ ಕೆರೆಯನ್ನು ಹಾಳು ಮಾಡಲು ಅವಕಾಶ ಕೊಡಬೇಡಿ’ ಎಂದು ಕಿವಿಮಾತು ಹೇಳಿದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ಬಣಾಚಾರ್ಯ ವಿದ್ಯಾನಗರˌ ಮಾಜಿ ಶಾಸಕ ಬಸವರಾಜ ಹಿಟ್ನಾಳ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ. ಗೂಳಪ್ಪ ಹಲಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಡೊಳ್ಳಿನ, ಗಿಣಗೇರಾ ಗ್ರಾಮದ ಪ್ರಮುಖರಾದ ಕರಿಯಪ್ಪ ಮೇಟಿ, ಬಸವರಾಜ ಆಗೋಲಿ, ˌಶಿವಪ್ಪ ಕಾತರಕಿ, ˌಕೊಟ್ರುಬಸಯ್ಯ ಹಿರೇಮಠ,ˌಯಮನೂರಪ್ಪ ಕಟಗಿ ಶೇಖರ, ಕಲ್ಯಾಣಿ ಕಂಪನಿಯ ಸಿಇಒ ರತ್ನಪ್ರಸಾದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮೆರವಣಿಗೆ: ಜ. 8ರಂದು ಮಹಾರಥೋತ್ಸವ ಜರುಗಲಿದ್ದು, ಈ ದಿನ ಸಮೀಪಿಸುತ್ತಿರುವಂತೆ ಭಕ್ತರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಧಾನ್ಯಗಳು ಮತ್ತು ಜೋಳದ ರೊಟ್ಟಿಗಳನ್ನು ಚಕ್ಕಡಿ, ಟ್ರ್ಯಾಕ್ಟರ್‌ಗಳ ಮೂಲಕ ತಂದು ಕೊಡುತ್ತಿರುವ ಚಿತ್ರಣ ಗವಿಮಠದ ಆವರಣದಲ್ಲಿ ಸಾಮಾನ್ಯವಾಗಿದೆ.

ಜಿಲ್ಲೆಯ ವಿವಿಧ ಊರುಗಳಿಂದ ಚಕ್ಕಡಿಯಲ್ಲಿ ರೊಟ್ಟಿಗಳನ್ನಟ್ಟು ಮೆರವಣಿಗೆ ಮಾಡಿಕೊಂಡು ಬಂದು ಮಠಕ್ಕೆ ಸಲ್ಲಿಸಲಾಗುತ್ತಿದೆ.

ಗವಿಮಠ ಜಾತ್ರೆಯಲ್ಲಿ

* ದೇವಿಗೆ ಉಡಿ ತುಂಬುವ ಕಾರ್ಯಕ್ರಮ

ಕೊಪ್ಪಳ: ಶುಕ್ರವಾರ ಸಂಜೆ 5 ಗಂಟೆಗೆ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗುತ್ತದೆ.

ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿ ಅಲಂಕಾರ ಮಾಡಲಾಗುತ್ತದೆ. ಹೋಳಿಗೆ ಸಜ್ಜಕದ ನೈವೇದ್ಯವಾಗುತ್ತದೆ. ಎಲ್ಲ ತಾಯಂದಿರಿಗೂ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕ ಜರುಗಲಿದೆ.

‘ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪ ಇರುತ್ತದೆ’ ಎಂದು ಮಠದ ಪ್ರಕಟಣೆ ತಿಳಿಸಿದೆ.

ಕೊಪ್ಪಳದ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗ, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು ಪಾಲ್ಗೊಳ್ಳುವರು.

* ಕಲಾ ತಂಡಗಳಿಂದ ಕಾರ್ಯಕ್ರಮ

ಸಂಜೆ 5 ಗಂಟೆಗೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆ ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗಲಿದೆ. ನಂದಿಕೋಲು, ಡೊಳ್ಳು, ಭಜನೆ, ಬಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ಸಾಂಸ್ಕ್ರತಿಕ ವೈಭವವನ್ನು ಬಿಂಬಿಸುವ ಅನೇಕ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಚಂಡೆ ಮದ್ದಳೆ, ಡೊಳ್ಳು ಕುಣಿತ, ಐಸಿರಿ ಕಲಾ ಳ, ಐಸಿರಿ ಕಲಾ ಮೇಳ, ವೀರಗಾಸೆ, ಗವಿಸಿದ್ಧೇಶ್ವರ ಸಾಂಸ್ಕೃತಿಕ ಜಾನಪದ ಕಲಾ ಸಂಘ, ಹಗಲು ವೇಷ ಗವಿಸಿದ್ಧೇಶ್ವರ ಬುಡ್ಗಜಂಗಮ ಕಲಾವಿದರ ಸಂಘ, ಮಾರುತೇಶ್ವರ ಝಾಂಜಮೇಳ ಸೇರಿದಂತೆ ಅನೇಕ ಕಲಾತಂಡಗಳ ವೈಭವ ಅನಾವರಣಗೊಳ್ಳಲಿದೆ.

* ಸಂಜೆ 5 ಗಂಟೆಗೆ ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದ ಲಿಂ. ವೀರನಗೌಡ ಪಾಟೀಲ ಹಾಗೂ ಪತ್ನಿ ಗಿರಿಜಮ್ಮ ಪಾಟೀಲರ ಮನೆಯಿಂದ ಗವಿಸಿದ್ಧೇಶ್ವರ ರಥದ ಮೇಲಿನ ಕಳಸ ಮೆರವಣಿಗೆ ಮೂಲಕ ಗವಿಮಠಕ್ಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT