ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳ ಹಾವಳಿ: ಎರಡು ವರ್ಷಗಳಿಂದ ನಡೆಯದ ಕಾರ್ಯಾಚರಣೆ

ದನ ಇರಿದು ಜೀವ ಹೋದ ಬಳಿಕ ಎಚ್ಚೆತ್ತ ನಗರಸಭೆ, ಜನಪ್ರತಿನಿಧಿಗಳಿಂದ ಒತ್ತಡದ ಆರೋಪ
Last Updated 23 ನವೆಂಬರ್ 2022, 6:10 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದ್ದರೂ ನಗರಸಭೆ ಹಿಂದಿನ ಎರಡು ವರ್ಷ ಗಳಿಂದ ಕಾರ್ಯಾಚರಣೆಯೇ ನಡೆಸಿಲ್ಲ. ಇದರಿಂದಾಗಿ ಒಬ್ಬ ಮಹಿಳೆ ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಈ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸಿಬ್ಬಂದಿ ಮತ್ತೆ ಈಗ ದನಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಬುಧವಾರ ಕಾರ್ಯಾಚರಣೆ ಆರಂಭವಾಗಲಿದೆ.

2018ರಿಂದ 2020ರ ಅವಧಿಯಲ್ಲಿ ಒಟ್ಟು73 ದನಗಳನ್ನು ಹಿಡಿಯಲಾಗಿದ್ದು 30 ದನಗಳನ್ನು ವಾಪಸ್‌ ಬಿಡಲಾಗಿದೆ. 24 ದನಗಳು ಮೃತಪಟ್ಟಿದ್ದು, 18 ಮಹಾವೀರ್ ಜೈನ್‌ ಗೋ ಶಾಲೆಯಲ್ಲಿ ಬಿಡಲಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಕಾರ್ಯಾಚರಣೆ ನಡೆಸದ ಕಾರಣಕ್ಕಾಗಿ ನಗರದಲ್ಲಿ ದನಗಳ ಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಬಿಡಾಡಿ ದನಗಳ ಸಂಖ್ಯೆ ಎಷ್ಟಿದೆ ಎನ್ನುವ ಮಾಹಿತಿ ಕೂಡ ನಗರಸಭೆ ಬಳಿ ಇಲ್ಲ.

ಅನೇಕ ಬಾರಿ ನಗರಸಭೆ ಮುಂಭಾಗ, ಹೆಚ್ಚು ಜನಸಂದಣಿ ಇರುವ ಕೇಂದ್ರೀಯ ಬಸ್‌ ನಿಲ್ದಾಣ, ಜವಾಹರ ರಸ್ತೆಯ ಮಾರುಕಟ್ಟೆ ಪ್ರದೇಶ, ರೈಲು ನಿಲ್ದಾಣ, ಲೇಬರ್‌ ಸರ್ಕಲ್‌, ಗವಿಸಿದ್ದೇಶ್ವರ ಮಠಕ್ಕೆ ಹೋಗುವ ರಸ್ತೆ, ಗಡಿಯಾರ ಕಂಬದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿ ವಾಹನಗಳ ಸವಾರರನ್ನು, ಪಾದಚಾರಿಗಳನ್ನು ದನಗಳು ಬೀಳಿಸಿದ, ಗಾಯಗೊಳಿಸಿದ ಉದಾಹರಣೆಗಳು ಇವೆ.

ಬಿಡಾಡಿ ದನಗಳಿಂದ ಜನ ತಾವು ಎದುರಿಸಿದ ಸಮಸ್ಯೆಯನ್ನು ನಗರಸಭೆ ಗಮನಕ್ಕೆ ತಂದರೂ, ಅನೇಕ ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ದೂರು. ದನಗಳು ರಸ್ತೆ ಮಧ್ಯದಲ್ಲಿ ಮಲಗುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ತಿನ್ನುವುದು, ಮಾರುಕಟ್ಟೆಗೆ ಬರುವ ಜನರಿಗೆ, ತರಕಾರಿ ಮಾರಾಟಗಾರರಿಗೆ ತೊಂದರೆ ಉಂಟು ಮಾಡುತ್ತಿವೆ.

ಒತ್ತಡದ ಆರೋಪ: ಹಿಂದೆ ಕರಾರುವಾಕ್ಕಾಗಿ ದನಗಳನ್ನು ಹಿಡಿದು ಕಟ್ಟಿ ಹಾಕಿದಾಗ ಅವುಗಳನ್ನು ಬಿಡುವಂತೆ ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರುತ್ತಾರೆ. ದನಗಳನ್ನು ಹಿಡಿಯಲು ಹಿಂಸೆ ಮಾಡುತ್ತೀರಿ ಎಂದು ಹೇಳಿ ಪ್ರಾಣಿ ದಯಾ ಸಂಘದವರು ವಿರೋಧ ವ್ಯಕ್ತಪಡಿಸುತ್ತಾರೆ. ಜನಪ್ರತಿನಿಧಿ ಗಳ ಮಾತಿಗೆ ಕಟಿಬಿದ್ದು ಬಿಟ್ಟು ಕಳುಹಿಸಿದರೂ ಮತ್ತೆ ರಸ್ತೆಗಳಲ್ಲಿಯೇ ದನಗಳು ಓಡಾಡುತ್ತವೆ. ಪ್ರತಿ ಸಲವೂ ಇದೇ ರೀತಿಯಾದರೆ ನಾವಾದರೂ ಏನು ಮಾಡಬೇಕು? ಎಂದು ನಗರಸಭೆ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎಚ್‌.ಎನ್‌ ಭಜಕ್ಕನವರ ’ಇದುವರೆಗೆ ನನಗೆ ಯಾವ ಜನಪ್ರತಿನಿಧಿ ಒತ್ತಡ ಹೇರಿಲ್ಲ. ಮುಂದೆ ಯಾರಾದರೂ ಹಾಗೆ ಕರೆ ಮಾಡಿದರೆ ಮಾಧ್ಯಮಗಳಿಗೆ ತಿಳಿಸುವೆ’ ಎಂದರು.

ಕೊಪ್ಪಳ ನಗರದಲ್ಲಿ ಬಿಡಾಡಿ ದನಗಳು ಸೇರಿದಂತೆ ಅನೇಕ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಗರದಿಂದ ಹೊರಹಾಕುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಎಸ್.ಎ.ಗಫಾರ್, ಜನಪರ ಸಂಘಟನೆ ಒಕ್ಕೂಟದ ಜಿಲ್ಲಾ ಸಂಚಾಲಕ

ಬಿಡಾಡಿ ದನಗಳ ಮಾಲೀಕರು ಮನೆಯಲ್ಲಿಯೇ ಕಟ್ಟಿಕೊಳ್ಳಬೇಕು. ಇಲ್ಲವಾದರೆ ವಶಕ್ಕೆ ಪಡೆದು ಗೋಶಾಲೆಗೆ ಹಸ್ತಾಂತರಿಸಲಾಗುವುದು. ದನಗಳ ವಿಚಾರವಾಗಿ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ

ಎಚ್‌.ಎನ್‌. ಭಜಕ್ಕನವರ, ನಗರಸಭೆ ಆಯುಕ್ತ

ಕೊಪ್ಪಳ ನಗರದಲ್ಲಿ ಬಿಡಾಡಿ ದನಗಳ ಕಾರ್ಯಾಚರಣೆ

ವರ್ಷ;ಹಿಡಿದ ಸಂಖ್ಯೆ;ಬಿಟ್ಟ ಸಂಖ್ಯೆ;ಮರಣ;ಉಳಿದವು

2018;25;21;0;4

2019;6;0;0;6

2020;42;9;24;9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT