ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,800 ಕಾರ್ಮಿಕರ 15 ವರ್ಷಗಳ ಹೋರಾಟದ ಫಲ

ಜಲಸಂಪನ್ಮೂಲ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು
Last Updated 18 ಜುಲೈ 2022, 14:38 IST
ಅಕ್ಷರ ಗಾತ್ರ

ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಇಲ್ಲಿನ ತುಂಗಭದ್ರಾ ನೀರಾವರಿ ಕೇಂದ್ರ ವಲಯ(ಐ.ಸಿ.ಜೆಡ್) ವ್ಯಾಪ್ತಿಯಲ್ಲಿ 15 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 1,800 ಸೇರಿದಂತೆ ಒಟ್ಟು 2,800 ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಯ ಸದಸ್ಯ ಹುಲಿಗಿಯ ಪಂಪಾಪತಿ ರಾಟಿ ಮಾಹಿತಿ ನೀಡಿದ್ದಾರೆ.

ಈಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 15-20 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಭವಿಷ್ಯ ಕತ್ತಲೆಯಲ್ಲಿದೆ. ಸೂಕ್ತ ವೇತನ, ಕಾನೂನುಬದ್ಧ ಸೌಲಭ್ಯಗಳು ಸಿಗದೇ ಅವರ ಕುಟುಂಬ ಸಂಕಷ್ಟದ ಸ್ಥಿತಿಯಲ್ಲಿವೆ. ನಿಗದಿತ ವೇತನವಿಲ್ಲದೆ ಅವರ ಮಕ್ಕಳ ಶಿಕ್ಷಣ ಕೂಡ ಕುಂಠಿತವಾಗುತ್ತಿದೆ ಎಂದು ಕಾರ್ಮಿಕರು ಹಲವು ಬಾರಿ ಹೋರಾಟ ನಡೆಸಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ (ಕಾರ್ಮಿಕ ಇಲಾಖೆ) ಮನೋಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.

ತುಂಗಭದ್ರಾ ಯೋಜನೆ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಒಟ್ಟು ನಾಲ್ಕು ನಿಗಮಗಳ ಅಡಿಯಲ್ಲಿ ಪ್ರಸ್ತುತ ರಾಜ್ಯದಾದ್ಯಂತ 2,800 ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಒಟ್ಟು 4 ನಿಗಮಗಳ ಉನ್ನತ ಅಧಿಕಾರಿಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುವುದು. ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಿ ಗುತ್ತಿಗೆ ಪದ್ಧತಿ ರದ್ದು ಮಾಡಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಜೈನ್ ದೃಢಪಡಿಸಿದ್ದಾರೆ.

ಸಭೆಯಲ್ಲಿ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ. ಬಿ.ಎಸ್.ರವಿಕುಮಾರ, ಕಾರ್ಮಿಕ ಆಯುಕ್ತ ಅಕ್ರಮ್ ಪಾಷಾ, ಮಂಡಳಿಯ ಸದಸ್ಯರಾದ ಶರಣಗೌಡ ರಾಯಚೂರು, ಎಚ್.ಕೆ.ನಾಗಭೂಷಣ, ಉಮೇಶ್ ಮುಂಡಗೋಡ ಇದ್ದರು ಎಂದು ಪಂಪಾಪತಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT