ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನಕಲಿ ಚಿನ್ನ ನೀಡಿ ದರೋಡೆ- ಮೂವರ ವಶ

ಪೊಲೀಸರ ಕಂಡು ಅಳವಂಡಿ ಬಳಿ ₹17 ಲಕ್ಷ ಬಿಟ್ಟು ಪರಾರಿಯಾಗಿದ್ದ ವಂಚಕರು
Last Updated 11 ಆಗಸ್ಟ್ 2021, 5:38 IST
ಅಕ್ಷರ ಗಾತ್ರ

ಕೊಪ್ಪಳ: ಮನೆಯ ಬುನಾದಿ ತೆಗೆಯುವ ಸಂದರ್ಭದಲ್ಲಿ ಬೆಲೆ ಬಾಳುವ ಪುರಾತನ ಬಂಗಾರದ ನಾಣ್ಯಗಳು ದೊರೆತಿದ್ದು,ಕಡಿಮೆ ಬೆಲೆಗೆ ನೀಡುವುದಾಗಿ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡು ಅವರಿಗೆಮಾರಕಾಸ್ತ್ರ ತೋರಿಸಿ ಬೆದರಿಸಿ ₹17 ಲಕ್ಷ ದೋಚಿಕೊಂಡು ಹೋಗಿದ್ದ ಮೂವರು ವಂಚಕರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಬಂಗಾರದ ನಾಣ್ಯಗಳು ದೊರೆತಿದ್ದು, ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ ಬೀದರ್ ಮೂಲದ ವಿವೇಕ ಎಂಬವರನ್ನು ವಂಚಕರು ಬೂದಗುಂಪಾದ ಬಳಿ ಕರೆಸಿಕೊಂಡಿದ್ದರು. ವಿವೇಕ್‌ ಅವರು ₹ 17,10,000ಹಣದೊಂದಿಗೆ ಬಂದಿದ್ದರು. ಬಂಗಾರದ ನಾಣ್ಯ ನಕಲಿ ಎಂಬ ಸಂಶಯ ಬಂದಿದ್ದರಿಂದ ಗಲಾಟೆ ಮಾಡಿದ್ದರು. ವಂಚಕರು ಅವರನ್ನು ಬೆದರಿಸಿ ಮಚ್ಚು ತೋರಿಸಿ ಹಣ ಮತ್ತು ಮೊಬೈಲ್‌ ದೋಚಿಕೊಂಡು ಹೋಗಿದ್ದರು.

ಹಣ ದೋಚಿಕೊಂಡು ಅಳವಂಡಿ ಮೂಲಕ ಬೈಕ್‌ ಮೇಲೆ ತೆರಳುತ್ತಿದ್ದರು. ಅಪರಾಧ ನಿಯಂತ್ರಣಕ್ಕಾಗಿ ಎಂದಿನಂತೆ ಅಳವಂಡಿಯಲ್ಲಿ ಪ್ರೊಬೇಷನರಿ ಪಿಎಸ್ಐ ವಿರೇಶ ಹಾಗೂ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಎಲ್ಲಿ ಸಿಕ್ಕಿ ಬೀಳುತ್ತೇವೆ ಎಂಬ ಭಯದಲ್ಲಿ ಹಣದ ಬ್ಯಾಗ್‌ ಹಾಗೂ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೊಲದಲ್ಲಿ ತಪ್ಪಿಸಿಕೊಂಡು ಹೋಗಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ 150 ಪೊಲೀಸರು ಸತತ ಎರಡು ದಿನ ತಪಾಸಣೆ ನಡೆಸಿದರೂ ಕಳ್ಳರ ಸುಳಿವು ದೊರೆಯಲಿಲ್ಲ. ಹಣ ಕಳೆದುಕೊಂಡ ವ್ಯಕ್ತಿ ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆಗಾಗಿ ಗ್ರಾಮೀಣ ಠಾಣೆ ಸಿಪಿಐ ವಿಶ್ವನಾಥ ಹಿರೇಗೌಡರ ನೇತೃತ್ವದಲ್ಲಿ 3 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು.

ಮುನಿರಾಬಾದ್‌ ಪಿಎಸ್ಐ ಸುಪ್ರೀತ್ ಪಾಟೀಲ, ಯಲಬುರ್ಗಾ ಪಿಎಸ್ಐ ಶಿವಕುಮಾರ, ಅಳವಂಡಿ ಪಿಎಸ್ಐ ಮಾರ್ತಾಂಡಪ್ಪ, ಸಿಬ್ಬಂದಿ ಚಂದ್ರಪ್ಪ, ದೇವೇಂದ್ರಪ್ಪ, ವೀರಬಸಪ್ಪ ಬಣಕಾರ, ಸಂತೋಷ್ ನೇತೃತ್ವದ ತಂಡ ಎಲ್ಲ ತಪಾಸಣೆ ಮತ್ತು ತನಿಖೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ತಿಳಿಸಿದರು.

ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಈ ತಂಡದ ಎಲ್ಲ ಪೂರ್ವಾಪರ ಮಾಹಿತಿ ಕಲೆ ಹಾಕಬೇಕಿರುವ ಹಿನ್ನೆಲೆಯಲ್ಲಿ ಗುರುತು ಪತ್ತೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹಣ ದೋಚಿಕೊಂಡು ಹೋದ ಒಂದು ವಾರದಲ್ಲಿಯೇ ಮೂವರನ್ನು ಬಂಧಿಸಿದ ನಮ್ಮ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಎಸ್.ಪಿ. ಟಿ.ಶ್ರೀಧರ್ ಅವರು
ತಿಳಿಸಿದರು.

ಕಳ್ಳರ ಬಂಧನ: ಪೂಜಾ ಸಾಮಗ್ರಿ ಜಪ್ತಿ

ಕುಷ್ಟಗಿ: ಕುಷ್ಟಗಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿನ ದೇವಸ್ಥಾನಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಾವರಗೇರಾದ ವಿಠ್ಠಲ ಸಿಂಗ್‌, ಖಾಜಾಹುಸೇನ್ ಸಿಂಧನೂರು ಮತ್ತು ಮಂಜುನಾಥ ಚಳ್ಳೂರು. ನವಲಹಳ್ಳಿಯ ರಂಗಪ್ಪ ತಳವಾರ ಬಂಧಿತರು.

ತಾವರಗೇರಾದ ಶಾಮೀದಲಿ ದರ್ಗಾ, ಯರಡೋಣಾದ ಬಸವಣ್ಣನ ಗುಡಿ, ಕಾರಟಗಿಯ ತಾಯಮ್ಮ ದೇವಸ್ಥಾನಗಳಲ್ಲಿನ ಹುಂಡಿಗಳಲ್ಲಿನ ಹಣ, ಪುರ ದಲ್ಲಿನ ಬಸವಣ್ಣ ದೇವಸ್ಥಾನ, ಕನಕಗಿರಿಯ ಗಾಳೆಮ್ಮ ದೇವಿ ಗುಡಿ, ಅಮೃತೇಶ್ವರ ಗುಡಿ, ಬಂಕಾಪುರದ ಹುಲಿಗೆಮ್ಮ ದೇವಸ್ಥಾನ, ಆರಾಳ ಗ್ರಾಮದ ರುದ್ರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆಸಿ ಅಲ್ಲಿನ ಗಂಟೆಗಳು ಸೇರಿದಂತೆ ಬೆಳ್ಳಿ, ತಾಮ್ರ, ಹಿತ್ತಾಳೆ ಪೂಜಾ ಸಾಮಗ್ರಿಗಳನ್ನು ಕಳವು ಮಾಡಲಾಗಿತ್ತು.

ಈಚೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾಸ್ಪದ ರೀತಿಯಲ್ಲಿ ಬೈಕ್‌ ಮೇಲೆ ತಿರುಗಾಡುತ್ತಿದ್ದವರನ್ನು ಎಎಸ್‌ಐ ಈರಪ್ಪ ನಾಯಕ ವಿಚಾರಣೆ ನಡೆಸಿದಾಗ ಆರೋಪಿಗಳು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ನಂತರ ಅವರಿಂದ ನಗದು ಹಣ ಸೇರಿದಂತೆ ಒಟ್ಟು ₹1.58 ಲಕ್ಷ ಮೌಲ್ಯದ ದೇವಸ್ಥಾನದ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಬಳಸಿ ಎರಡು ಬೈಕ್‌ಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಸ್‌.ಆರ್‌.ನಿಂಗಪ್ಪ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT