ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಎಂಟು ಮಂದಿ ಸಾವು

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಧಾರಾಕಾರ ಮಳೆಯಾಗಿದೆ. ವಿವಿಧೆಡೆ ಸಿಡಿಲು ಬಡಿದು ಎಂಟು ಮಂದಿ ಸತ್ತು, ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ. ವಿದ್ಯುತ್‌ ಸ್ಪರ್ಶದಿಂದ ಒಬ್ಬರು ಮೃತಪಟ್ಟಿದ್ದಾರೆ.

ಗದಗ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ಕುರಿಗಾಹಿ ಮುತ್ತಪ್ಪ ಮಲ್ಲಜ್ಜ ಬುಳ್ಳಮ್ಮನವರ(16), ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಮಾಧವ ರಾಯನಹಳ್ಳಿಯಲ್ಲಿ ರಾಮಕೃಷ್ಣಪ್ಪ (48), ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಧರ್ಮಸಾಗರದ ಮಂಜಮ್ಮ (35), ಕುರುಗೋಡು ತಾಲ್ಲೂಕಿನ ಬಳ್ಳಾಪುರ ಗ್ರಾಮದ ಕುರಿಗಾಹಿ ಮಲ್ಲಿಕಾರ್ಜುನ (24), ಸಂಡೂರು ತಾಲ್ಲೂಕಿನ ತೋರಣಗಲ್ಲು ಸಮೀಪ ಬೈಕ್‌ ಸವಾರ ಸೋಮಶೇಖರ್‌ (28), ಯಲಬುರ್ಗಾ ತಾಲ್ಲೂಕಿನ ಗುತ್ತೂರಿನ ವಿರೂಪಾಕ್ಷ ಗುದ್ನೆಪ್ಪ(25), ಕರಿಯಮ್ಮ ಹನಮಂತ (20) ಹಾಗೂ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹೊಸಳ್ಳಿ ಗ್ರಾಮದ ರೈತ ಶಿವಬಸಪ್ಪ ಕೂರಿ (32) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಮರಿಯಮ್ಮನ ಹಳ್ಳಿ ಸಮೀಪದ ಬ್ಯಾಲಕುಂದಿ ಗ್ರಾಮದ ಈಡಿಗರ ಮಂಜುನಾಥ (32) ಎಂಬುವವರು ಮಂಗಳವಾರ ತಡರಾತ್ರಿ ವಿದ್ಯುತ್‌ ಆಘಾತದಿಂದ ಸತ್ತಿದ್ದಾರೆ. ಕುರುಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮದಲ್ಲಿ ಕರೂರು ಮಲ್ಲಯ್ಯ ಎಂಬುವವರ ಏಳು ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದಾಗಿ 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಬಾಳೆ ಬೆಳೆ ನಷ್ಟ: ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ, ಹಂಪಿ, ಪ್ರಕಾಶ್‌ ನಗರದ ಸುತ್ತಮುತ್ತಲಿನಲ್ಲಿ ಬೆಳೆದಿದ್ದ ನೂರಾರು ಎಕರೆ ಬಾಳೆ ಗಿಡ ಬಿರುಗಾಳಿಯಿಂದಾಗಿ ಹಾನಿಗೀಡಾಗಿದೆ. ವಾರದ ಹಿಂದೆಯೂ ಇದೇ ರೀತಿ ಗಾಳಿ ಬೀಸಿದ್ದರಿಂದ ಹಲವೆಡೆ ಬಾಳೆ ತೋಟ ಹಾಳಾಗಿತ್ತು.

ಕೊಪ್ಪಳ ತಾಲ್ಲೂಕಿನ ಅಚಲಾಪುರ ತಾಂಡಾದಲ್ಲಿ ಮಂಗಳವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಬಿರುಗಾಳಿಗೆ ಮನೆಯಲ್ಲಿ ಜೋಳಿಗೆ ಕಟ್ಟಿ ಮಲಗಿಸಿದ್ದ ಎರಡು ವರ್ಷದ ಮಗು 20 ಅಡಿಗಳಷ್ಟು ದೂರ ಬಿದ್ದಿತ್ತು. ಸಣ್ಣಪುಟ್ಟ ಗಾಯಗಳಿಂದ ಜೀವಾಪಾಯದಿಂದ ಪಾರಾಗಿದೆ. ಮಗುವನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಶೀಟ್ ಹಾಗೂ ಪತ್ರಾಸುಗಳು, ದಿನಸಿ, ಬಟ್ಟೆ ಹಾರಿ ಹೋಗಿವೆ.

ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ, ಹನುಮನಹಳ್ಳಿಯಲ್ಲಿ ಮಾವು ಮತ್ತು ಬಾಳೆ ಹಾಳಾಗಿದೆ. ಆನೆಗೊಂದಿ, ಹನುಮನಹಳ್ಳಿ, ಚಿಕ್ಕ
ರಾಂಪುರ, ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ಮಲ್ಲಾಪುರ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಧಕ್ಕೆಯಾಗಿದೆ. ಗಂಗಾವತಿಯಲ್ಲಿ ಬುಧವಾರ ಮಧ್ಯಾಹ್ನ ಒಂದೂವರೆ ಗಂಟೆ ಮಳೆಯಾಗಿದೆ.

ಗಂಗಾವತಿ ನಗರದ ಹೊರವಲಯ ವಿದ್ಯಾನಗರದಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅಳವಡಿಸಲಾಗಿದ್ದ ಸ್ವಾಗತ ಕಮಾನು ಬುಧವಾರ ಧರೆಗುರುಳಿದೆ.

ಹಾಸನ, ಮೈಸೂರು ಜಿಲ್ಲೆಯಲ್ಲಿ ಮಳೆ: ಹಾಸನ ನಗರ ಹಾಗೂ ತಾಲ್ಲೂಕಿನಾದ್ಯಂತ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆಯಾಯಿತು. ಮಧ್ಯಾಹ್ನ 1ರ ಸುಮಾರಿಗೆ ಆರಂಭವಾದ ಮಳೆ 2 ಗಂಟೆಯವರೆಗೆ ಎಡೆಬಿಡದೆ ಸುರಿಯಿತು. ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದಲ್ಲಿ ಬಲವಾಗಿ ಬೀಸಿದ ಗಾಳಿಗೆ ಮೂರು ಮನೆಗಳಿಗೆ ಹಾನಿಯಾಗಿದೆ.ನಗರದಲ್ಲಿ ಸಂಜೆ 5ರ ಸುಮಾರಿಗೆ ಸಾಧಾರಣ ಮಳೆಯಾಯಿತು. ಪಿರಿಯಾಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಬಾಲಕಿಯರ ಪದವಿ ಪೂರ್ವಕಾಲೇಜಿನ ಆವರಣ ಮಳೆ ನೀರಿನಿಂದಾಗಿ ಕೆರೆಯಂತಾಗಿತ್ತು. ದೊಡ್ಡ ಬೀದಿಯಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ನಾಗರಹೊಳೆ, ತಿತಿಮತಿ, ಕೋಣನಕಟ್ಟೆ, ಸುಳುಗೋಡು, ದೇವರಪುರ, ಪೊನ್ನಂಪೇಟೆ ಹಾಗೂ ಸುತ್ತಮುತ್ತ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಆಲಿಕಲ್ಲು ಮಳೆ: ತುಮಕೂರು ನಗರ, ಕುಣಿಗಲ್ ಮತ್ತು ಗುಬ್ಬಿಯಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಪಾವಗಡ, ಶಿರಾದಲ್ಲಿ ಸಂಜೆಯಿಂದಲೇ ಭಾರಿ ಗಾಳಿ ಬೀಸುತ್ತಿತ್ತು. ಆದರೆ ಮಳೆ ಸುರಿಯಲಿಲ್ಲ. ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ಸುರಿಯಿತು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿನ ಕೆಲವು ಹೋಬಳಿಗಳಲ್ಲಿ ಬುಧವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ.

ಸಿಡಿಲಿಗೆ ಎರಡು ಎತ್ತು ಬಲಿ: ಮೊಳಕಾಲ್ಮುರು ತಾಲ್ಲೂಕಿನ ದೇವಸಮುದ್ರ ಹೋಬಳಿಯಾದ್ಯಂತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅರಂಭವಾದ ಮಳೆ ಒಂದು ಗಂಟೆ ಕಾಲ ಸುರಿಯಿತು. ಗ್ರಾಮದ ಪರಿಶಿಷ್ಟ ಕಾಲೊನಿಯ ಹನುಮಂತಪ್ಪ ಅವರಿಗೆ ಸೇರಿದ ಎರಡು ಎತ್ತುಗಳು ಸಿಡಿಲು ಬಡಿದು ಮೃತಪಟ್ಟಿವೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಲ್ಲಿ ಸಂಜೆ ಅರ್ಧ ಗಂಟೆ ಕಾಲ ಉತ್ತಮ ಮಳೆಯಾಗಿದೆ.

ದಾವಣಗೆರೆ ನಗರ ಹಾಗೂ ಹರಿಹರದಲ್ಲಿ ಬಿ→ರುಸಿನಿಂದ ಕೂಡಿದ ಗಾಳಿ, ಮಳೆಯಾಗಿದೆ. ಹರ‍ಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಅರ್ಧ ಗಂಟೆ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT