ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ನೀಡಲು ಮೂರು ಮಾನದಂಡ: ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಕಾಂಗ್ರೆಸ್‌ ಮುಖಂಡರ ಸಭೆ; ಇಕ್ಬಾಲ್‌ ಅನ್ಸಾರಿ ಬೆಂಬಲಿಗರ ಶಕ್ತಿ ಪ್ರದರ್ಶನ
Last Updated 4 ಜನವರಿ 2023, 13:20 IST
ಅಕ್ಷರ ಗಾತ್ರ

ಕೊಪ್ಪಳ: ‘ಗೆಲ್ಲುವ ಸಾಮರ್ಥ್ಯ, ಸಾಮಾಜಿಕ ನ್ಯಾಯ ಮತ್ತು ಪಕ್ಷ ನಿಷ್ಠೆಗಳೇ ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಾನದಂಡ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದರು.

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಜ 15ರ ಒಳಗೆ 100ರಿಂದ 150 ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ 41 ಕ್ಷೇತ್ರಗಳಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾ ಸಮಿತಿ ಸಭೆ ನಡೆಸಲಾಗಿದೆ. ಒಂದೆರೆಡು ದಿನಗಳಲ್ಲಿ ಹೈಕಮಾಂಡ್‌ಗೆ ವರದಿ ಕಳುಹಿಸಲಾಗುವುದು’ ಎಂದರು.

ಶಕ್ತಿ ಪ್ರದರ್ಶನ: ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಈ ಕುರಿತು ಪ್ರಮುಖವಾಗಿ ಚರ್ಚೆ ನಡೆಯಿತು. ಅನ್ಸಾರಿ ಬೆಂಬಲಿಗರು ನಾಯಕರ ಮುಂದೆ ಶಕ್ತಿ ಪ್ರದರ್ಶನ ಮಾಡಿದರು. ಒಬ್ಬ ಅಭಿಮಾನಿ ಅನ್ಸಾರಿ ಭಾವಚಿತ್ರ ಹಿಡಿದೇ ಸಭೆಗೆ ಬಂದಿದ್ದ.

ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಕನಕಗಿರಿ ಕ್ಷೇತ್ರಗಳ ಆಯ್ಕೆ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯಲಿಲ್ಲ. ಆದರೆ, ಗಂಗಾವತಿಯಿಂದ ಸ್ಪರ್ಧಿಸಲು ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್. ಶ್ರೀನಾಥ್ ಹಾಗೂ ಇಕ್ಬಾಲ್ ಅನ್ಸಾರಿ ಅರ್ಜಿ ಸಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ಹೊಸ ಪಕ್ಷದ ಮೂಲಕ ಗಂಗಾವತಿಯಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ಆದ್ದರಿಂದ ಅಭ್ಯರ್ಥಿ ಆಯ್ಕೆ ಸವಾಲಾಗಿದೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ನಾಗಪ್ಪ 'ಗಂಗಾವತಿ ಕ್ಷೇತ್ರಕ್ಕೆ ನನಗೆ ಅಥವಾ ಶ್ರೀನಾಥ್ ಅವರಿಗೆ ಟಿಕೆಟ್‌ ಕೊಡಬೇಕು. ಮೂರನೇಯವರಿಗೆ ಟಿಕೆಟ್ ಕೊಡುವಂತಿಲ್ಲ' ಎಂದು ಅನ್ಸಾರಿ ಹೆಸರು ಉಲ್ಲೇಖಿಸದೇ ಹೇಳಿದರು.

'ಸಭೆಯಲ್ಲಿ ಪಕ್ಷದ ಮುಖಂಡರ ಎದುರಿಗೆ ನಮ್ಮ‌ಅಭಿಪ್ರಾಯ ಹೇಳಿದ್ದೇವೆ. ನನಗೇ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸವಿದೆ.‌ ನನಗೆ ಕೊಡದಿದ್ದರೆ ಎಚ್.ಆರ್. ಶ್ರೀನಾಥ ಅವರಿಗೆ ಕೊಡುತ್ತಾರೆ' ಎಂದರು.

ಈ ಕುರಿತು ಈಶ್ವರ ಖಂಡ್ರೆ ಅವರನ್ನು ಪ್ರಶ್ನಿಸಿದಾಗ ’ಗಂಗಾವತಿ ಕ್ಷೇತ್ರದಲ್ಲಿ ಎಲ್ಲರೂ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯಾರಿಗೇ ಟಿಕೆಟ್‌ ಕೊಟ್ಟರೂ ಅವರಿಗಾಗಿ ದುಡಿಯುತ್ತೇವೆ ಎಂದಿದ್ದಾರೆ. ಪಕ್ಷದಲ್ಲಿ ಮೂಲ ಹಾಗೂ ವಲಸಿಕ ಎನ್ನುವ ಪ್ರಶ್ನೆಯೇ ಇಲ್ಲ’ ಎಂದರು.

‘ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಹೇಳಬಾರದು ಎಂದು ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಜನಾರ್ದನ ರೆಡ್ಡಿ ಪಕ್ಷ ಕಟ್ಟಿದರೂ ನಮಗೆ ಏನೂ ತೊಂದರೆ ಇಲ್ಲ. ನಮ್ಮ ಪಕ್ಷದಲ್ಲಿ ಹಾಲಿ ಶಾಸಕರಿಗೆ ಆದ್ಯತೆ ಇದ್ದೇ ಇರುತ್ತದೆ’ ಎಂದು ಹೇಳಿದರು.

ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಶ್ರೀಧರ ಬಾಬು, ಚುನಾವಣಾ ಸಮಿತಿ ಸದಸ್ಯ ಶರಣಪ್ಪ ಸುಣಗಾರ, ಮಾಜಿ ಸಂಸದ ಶಿವರಾಮೇಗೌಡ, ಪ್ರಭಾಕರ ಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಗಿಮಿಕ್‌ ನಡೆಯಲ್ಲ: ಅನ್ಸಾರಿ

ಕೊಪ್ಪಳ: ಕುರುಬ ಸಮಾಜದ ಮುಖಂಡ ಹನುಮಂತಪ್ಪ ಅರಸಿನಕೇರಿ ಅವರನ್ನು ಮನೆಗೆ ಹೋಗಿ ಭೇಟಿಯಾಗಿ ಜನಾರ್ದನ ರೆಡ್ಡಿ ರಾಜಕೀಯ ಗಿಮಿಕ್‌ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡುವುದಿಲ್ಲ ಎಂದು ಇಕ್ಬಾಲ್‌ ಅನ್ಸಾರಿ ಹೇಳಿದರು.

‘ಪಕ್ಷದ ಆಂತರಿಕ ವಿಚಾರಗಳು ಕೆಲವು ಇರುತ್ತವೆ. ಅವೆಲ್ಲವೂ ಸರಿ ಹೋಗಿವೆ. ಹನುಮಂತಪ್ಪ ಇನ್ನು ಮುಂದೆಯೂ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ’ ಎಂದು ಪಕ್ಕದಲ್ಲಿ ಕೂಡಿಸಿಕೊಂಡು ಹೇಳಿದರು.

***

ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತದೆಯೊ ಅವರನ್ನು ಗೆಲ್ಲಿಸಲು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಆಕಾಂಕ್ಷಿಗಳು ನಮ್ಮ ಮುಂದೆ ಮಾತು ಕೊಟ್ಟಿದ್ದಾರೆ.

ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

***

ಕೆಲ ವಿಷಯಗಳ ಬಗ್ಗೆ ಬೇಸರವಾಗಿತ್ತು. ಎಲ್ಲವನ್ನೂ ಚರ್ಚಿಸಿ ಪರಿಹರಿಸಲಾಗಿದೆ. ಇನ್ನು ಮುಂದೆ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡುವೆ.
ಹನುಮಂತಪ್ಪ ಅರಸಿನಕೇರಿ, ಕಾಂಗ್ರೆಸ್‌ ಮುಖಂಡ

***

ಗಂಗಾವತಿ ಕ್ಷೇತ್ರದಿಂದ ಯಾರೇ ಟಿಕೆಟ್‌ ಕೇಳಿರಬಹುದು. ನಾನೂ ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್‌ ತಂದು ತೋರಿಸುತ್ತೇನೆ.
ಇಕ್ಬಾಲ್‌ ಅನ್ಸಾರಿ, ಟಿಕೆಟ್‌ ಅಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT