ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಏಳುಗುಡ್ಡದ ದರೋಡೆಕೋರ ಖಾನಸಾಬನ ಗೋರಿ ಬೆಳಕಿಗೆ

Last Updated 6 ಏಪ್ರಿಲ್ 2022, 4:33 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ಪಂಪಾನಗರದ ಪಠಾಣರ ಖಬರಸ್ತಾನದಲ್ಲಿ ಹೈದರಾಬಾದ್ ನಿಜಾಮನ ಕಾಲದಲ್ಲಿ ದರೋಡೆಕೋರ ಎಂದೇ ಖ್ಯಾತಿಗಳಿಸಿದ್ದ ಏಳುಗುಡ್ಡದ ಖಾನಸಾಬನ ಗೋರಿ ಬೆಳಕಿಗೆ ಬಂದಿದೆ ಎಂದು ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.

’ಖಾನಸಾಬ ಏಳುಗುಡ್ಡ ಪರಿಸರದಲ್ಲಿ ಇಂದಿಗೂ ಜನಜನಿತನಾಗಿದ್ದಾನೆ.‌ ಖಾನಸಾಬ ಒಬ್ಬ ದರೋಡೆಕೋರ ಆದರೂ ಬಡವರಿಗೆ ಬಂಧುವಾಗಿದ್ದನು. ಶ್ರೀಮಂತರ ಮನೆಗಳು ಲೂಟಿ ಮಾಡಿ, ಬಡವರಿಗೆ ಸಹಾಯ ಮಾಡುವುದು ಅವನ ಸ್ವಭಾವವಾಗಿತ್ತು. ಅದರಲ್ಲಿ ವಿಶೇಷ ಏನೆಂದರೆ ಶ್ರೀಮಂತರಿಗೆ ಲೂಟಿ ಮಾಡುವ ವಿಷಯ ಮೊದಲೇ ಹೇಳಿ ಲೂಟಿ ಮಾಡುತ್ತಿದ್ದ.

’ಖಾನಸಾಬ ಮೂಲತಃ ಕುಕನೂರು ಮೂಲದವನಾಗಿದ್ದು, ಪಠಾಣ ಜನಾಂಗದ ದೌಲತ್ ಖಾನ್ ಹಾಗೂ ಬೀಬೀ ಫಾತಿಮಾ ದಂಪತಿಯ ನಾಲ್ಕನೆ ಮಗ ಆಗಿದ್ದನು. ಮಾಲೀಕನಿಂದ ಕಳ್ಳತನದ ಆಪಾದಿತನಾಗಿ ಮನನೊಂದು ಕಳ್ಳತನಕ್ಕೆ ಇಳಿಯುತ್ತಾ‌ನೆ.

’ಕುಕನೂರಿನಿಂದ ಗಂಗಾವತಿ ತಾಲ್ಲೂಕಿಗೆ ಬಂದು ದರೋಡೆ ವೃತ್ತಿಯಾಗಿ ಆರಂಭಿಸಿದ್ದ. ಗಂಗಾವತಿ ಸಿದ್ದಿಕೇರಿಯ ಜಾನಮ್ಮನ ವಟ್ಲದ ಗವಿಯನ್ನು ತನ್ನ ಅಡಗುದಾಣ ಮಾಡಿಕೊಂಡು ದರೋಡೆ ಕೃತ್ಯ ನಡೆಸುತ್ತಿದ್ದ. ಈ ಗವಿಯನ್ನು ಈಗಲೂ ಖಾನಸಾಬನ ಗವಿ ಎಂದೇ ಕರೆಯುತ್ತಾರೆ.

’ಈತನ ಉಪಟಳದಿಂದ ಬೇಸತ್ತ ಶ್ರೀಮಂತರು ಹೈದರಾಬಾದ್ ನಿಜಾಮನ ಸರ್ಕಾರಕ್ಕೆ ದೂರು ಸಲ್ಲಿಸುತ್ತಾರೆ. ಆಗ ಗಂಗಾವತಿ ಪೋಲೀಸರು ಸ್ಥಳೀಯ ಗ್ರಾಮಗಳ ಮುಖಂಡರ ನೆರವಿನಿಂದ ಖಾನಸಾಬನನ್ನು ಗುಂಡಿಟ್ಟು ಕೊಲ್ಲುತ್ತಾರೆ.

’ಖಾನಸಾಬನ ದೇಹವನ್ನು ಗಂಗಾವತಿಯಲ್ಲಿಯೇ ದಫನ್ ಮಾಡಲಾಗಿತ್ತು. ಈ ಸಂಗತಿ ಕಾಲಕ್ರಮೇಣ ಮರೆಯಾಗಿ ಹೋಗಿತ್ತು. ಗಂಗಾವತಿಯಲ್ಲಿನ ಖಾನಸಾಬನ ಮರಿಮೊಮ್ಮಗ 95 ವರ್ಷದ ಹುಸೇನಖಾನರ ನೆರವಿನಿಂದ ಖಾನಸಾಬನ ಸಮಾಧಿ ಬೆಳಕಿಗೆ ತರಲಾಗಿದೆ‘ ಎಂದು ಕೋಲ್ಕಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT