ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡದಂಡೆ ಮುಖ್ಯ ಕಾಲುವೆಗೆ ಏ. 10ರ ವರೆಗೆ ನೀರು

118ನೇ ನೀರಾವರಿ ಸಲಹಾ ಸಮಿತಿ ಸಭೆ; ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿಕೆ
Last Updated 23 ನವೆಂಬರ್ 2022, 15:22 IST
ಅಕ್ಷರ ಗಾತ್ರ

ಮುನಿರಾಬಾದ್‌ (ಕೊಪ್ಪಳ): ಹಿಂಗಾರು ಹಂಗಾಮು ಬೆಳೆಗಳಿಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ 2023ರ ಏಪ್ರಿಲ್‌ 10ರ ವರೆಗೆ ನೀರು ಹರಿಸಲು ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 118ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ಬುಧವಾರ ನಡೆದ ರೈತರು ಹಾಗೂ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಯಿತು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ ಅಧ್ಯಕ್ಷತೆಯಲ್ಲಿ ಸುಮಾರು ಐದು ತಾಸು ಚರ್ಚೆ ನಡೆಯಿತು.

ಸಭೆಯ ಬಳಿಕ ಮಾಹಿತಿ ನೀಡಿದ ಸಚಿವರು ‘ಜಲಾಶಯದಲ್ಲಿ ಸಂಗ್ರಹವಿರುವ ಒಟ್ಟು 94 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕದ ಪಾಲು 55.580 ಟಿಎಂಸಿ ಅಡಿಯಿದ್ದು, ಆಂಧ್ರ (33.396 ಟಿಎಂಸಿ ಅಡಿ) ಮತ್ತು ತೆಲಂಗಾಣ (5.773 ಟಿಎಂಸಿ ಅಡಿ) ಪಾಲುಗಳನ್ನು ಹೊಂದಿವೆ. ಆರು ಟಿಎಂಸಿ ಅಡಿ ನೀರು ಕೊರತೆಯಾಗಲಿದ್ದು, ಇದನ್ನು ನಿರ್ವಹಣೆ ಮಾಡಲಾಗುವುದು’ ಎಂದು ತಿಳಿಸಿದರು.

ಜಲಾಶಯ ವ್ಯಾಪ್ತಿಯ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಅಹವಾಲು ಆಲಿಸಿದ ಆನಂದ್‌ ಸಿಂಗ್‌ ‘ರೈತರ ಹಿತ ಕಾಪಾಡುವ ಸಲುವಾಗಿಯೇ ಐಸಿಸಿ ಸಭೆ ನಡೆಸಲಾಗುತ್ತದೆ. ನೀರಿನ ಲಭ್ಯತೆ ಆಧರಿಸಿ ಕಾಲುವೆಗಳಿಗೆ ಮಾರ್ಚ್‌ ಹಾಗೂ ಏಪ್ರಿಲ್‌ ತನಕ ನೀರು ಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು‘ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಸಂಸದರಾದ ಸಂಗಣ್ಣ ಕರಡಿ, ವೈ ದೇವೇಂದ್ರಪ್ಪ, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಶಾಸಕರಾದ ಜೆ.ಎನ್. ಗಣೇಶ, ಬಿ. ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಬಸವರಾಜ ದದ್ದಲ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಆರ್ ಬಸನಗೌಡ ತುರವಿಹಾಳ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಶ್ರೀಹರಿಬಾಬು, ಕಾಡಾ ಆಡಳಿತಾಧಿಕಾರಿ ಆರ್ ಆರ್ ರಾಥೋಡ್, ನೀರಾವರಿ ಕೇಂದ್ರ ವಲಯದ ಮುಖ್ಯ ಎಂಜಿನಿಯರ್ ಕೆ ದುರಗಪ್ಪ, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಎಲ್‌. ಬಸವರಾಜ, ರಮೇಶ ವಲ್ಯಾಪೂರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತುಂಗಭದ್ರಾ ಜಲಾಶಯದಿಂದ ನೀರು ಒದಗಿಸುವ ಮಾಹಿತಿ


1;ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ;ಡಿ. 1ರಿಂದ 15ರ ವರೆಗೆ ಸರಾಸರಿ 2,000 ಕ್ಯುಸೆಕ್ಸ್‌ನಂತೆ, 16ರಿಂದ 31ರ ತನಕ ಸರಾಸರಿ 2,500 ಕ್ಯುಸೆಕ್ಸ್‌ನಂತೆ, 2023ರ ಜನವರಿ 1ರಿಂದ ಮಾರ್ಚ್‌ 31 ಸರಾಸರಿ 3,500 ಕ್ಯುಸೆಕ್ಸ್‌ನಂತೆ, ಕುಡಿಯುವ ನೀರಿಗಾಗಿ ಏ. 1ರಿಂದ 10ರ ವರೆಗೆ 1,484 ಕ್ಯುಸೆಕ್ಸ್‌ನಂತೆ ಮತ್ತು ಏ. 11ರಿಂದ ಮೇ 10ರ ವರೆಗೆ ಸರಾಸರಿ 100 ಕ್ಯುಸೆಕ್ಸ್‌ನಂತೆ ವಿಜಯನಗರ ಎಡದಂಡೆ ಕಾಲುವೆಗಳಿಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯವಾಗುತ್ತದೆ.

2;ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ; ಡಿ.1ರಿಂದ 10ರವರೆಗೆ ನೀರು ನಿಲುಗಡೆ, ಡಿ. 11ರಿಂದ 31ರ ವರೆಗೆ ಸರಾಸರಿ 900 ಕ್ಯುಸೆಕ್ಸ್‌ನಂತೆ, 2023ರ ಜ. 1ರಿಂದ 10ರ ವರೆಗೆ ನೀರು ನಿಲುಗಡೆ, 11ರಿಂದ 31ರ ವರೆಗೆ 900 ಕ್ಯುಸೆಕ್ಸ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲೊ ಅದು ಅನ್ವಯವಾಗುತ್ತದೆ.

3;ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ;ಡಿ. 1ರಿಂದ 15ರ ತನಕ ಸರಾಸರಿ 400 ಕ್ಯುಸೆಕ್ಸ್‌ನಂತೆ, 16ರಿಂದ 31ರ ತನಕ ಸರಾಸರಿ 550 ಕ್ಯುಸೆಕ್ಸ್‌ನಂತೆ, 2023ರ ಜ.1ರಿಂದ 31ರ ವರೆಗೆ ಸರಾಸರಿ 700 ಕ್ಯುಸೆಕ್ಸ್‌ನಂತೆ, ಫೆ. 1ರಿಂದ 28ರ ವರೆಗೆ ಸರಾಸರಿ 650 ಕ್ಯುಸೆಕ್ಸ್‌ನಂತೆ, ಮಾರ್ಚ್‌ 1ರಿಂದ 31ರ ವರೆಗೆ ಸರಾಸರಿ 700 ಕ್ಯುಸೆಕ್ಸ್‌ನಂತೆ, ಏ. 1ರಿಂದ 5ರ ತನಕ ಸರಾಸರಿ 500 ಕ್ಯುಸೆಕ್ಸ್‌ನಂತೆ (ಕುಡಿಯುವ ನೀರು ಒಳಗೊಂಡಂತೆ) ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರಿಗೆ ಮಾತ್ರ ಇದರಲ್ಲಿ ಯಾವುದು ಮೊದಲೇ ಅದು ಅನ್ವಯಿಸುತ್ತದೆ.

4;ರಾಯಬಸವಣ್ಣ ಕಾಲುವೆ; 2023ರ ಜ. 16ರಿಂದ ಮೇ 31ರ ತನಕ 280 ಕ್ಯುಸೆಕ್ಸ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅನ್ವಯಿಸುತ್ತದೆಯೊ ಅದು ಅನ್ವಯ.

5;ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ;ಡಿ. 1ರಿಂದ 25 ಕ್ಯುಸೆಕ್ಸ್‌ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅನ್ವಯಿಸುತ್ತದೆಯೊ ಅದು ಅನ್ವಯ.

ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಹೇಳಿಕೆಗಳು

* ಮೇಲಿನಿಂದ ಕೆಳಭಾಗದವರೆಗೆ ಗೇಜ್, ಸುರಂಗ ಮಾರ್ಗ, ನೀರಾವರಿ ಕಾಮಗಾರಿ, ಕಾಲುವೆ ದುರಸ್ತಿ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎಂದು ರೈತರ ಆರೋಪ.

* ಎರಡನೇ ಬೆಳೆ ತೆಗೆಯಲು ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಕೊನೆಯ ತನಕ ನೀರು ಹರಿಸಲು ಆಗ್ರಹ.

* ಮತ್ತೊಂದು ಬೆಳೆಗೆ ಅವಕಾಶ ನೀಡಿ ಪ್ರತಿ ತಿಂಗಳು 10 ದಿನಗಳಂತೆ ನೀರು ಉಳಿಸಿ ಬಳಿಕ ನೀರು ಬಿಟ್ಟರೆ ಮತ್ತೊಂದು ಬೆಳೆ ತೆಗೆಯಲು ಅನುಕೂಲವೆಂದು ಹೇಳಿದ ಬಳ್ಳಾರಿ ರೈತರು.

* ಬಾದನಟ್ಟಿ ಸೇರಿದಂತೆ ನಮ್ಮ ಭಾಗದ ಹಲವಾರು ಗ್ರಾಮಗಳ ಜನತೆಗೆ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕಾಲುವೆಗಳಿಂದ ಕೆರೆಗಳಿಗೆ ನೀರು ಒದಗಿಸಲು ಶಾಸಕ ಜಿ.ಎನ್‌. ಗಣೇಶ ಆಗ್ರಹ.

* 67 ಟಿಎಂಸಿ ಅಡಿ ಸಾಮರ್ಥ್ಯದ ಭದ್ರಾದಿಂದ 6 ಟಿಎಂಸಿ ಅಡಿ ನೀರು ತರುವ ಪ್ರಯತ್ನ ಮಾಡಲು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಒತ್ತಾಯ.

* ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಪ್ರದೇಶದಲ್ಲಿನ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆಗಳಿಗೆ ಕಳೆದ ವರ್ಷ ಸಮರ್ಪಕ ನೀರು ಸಿಕ್ಕಿಲ್ಲ. ಭತ್ತದ ಕಟಾವು ಮುಗಿದ ಬಳಿಕ ಬೇರೆ ಬೆಳೆಗಳನ್ನು ಬೆಳೆಯಲು 1000 ಕ್ಯುಸೆಕ್ಸ್‌ ನೀರು ಹರಿಸಿದರೆ ಅನುಕೂಲ: ರಾಜ್ಯ ರೈತ ಸಂಘದ ಚಾಮರಸ ಮಾಲಿಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT