ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ಗೇಟ್‌ ಸ್ಥಳಾಂತರಕ್ಕೆ ಯೋಚನೆ

ಅಕ್ಕಪಕ್ಕದಲ್ಲಿಯೇ ಟೋಲ್‌ಪ್ಲಾಜಾ, ಪ್ರಯಾಣಿಕರ ಸುಲಿಗೆ: ಆರೋಪ
Last Updated 22 ಏಪ್ರಿಲ್ 2021, 4:28 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಜನತೆಗೆ ಮತ್ತು ಪ್ರಯಾಣಿಕರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಹಿಟ್ನಾಳ್‌ ಬಳಿಯಿರುವ ಟೋಲ್‌ಗೇಟ್‌ ಸ್ಥಳಾಂತರಅಥವಾ ರದ್ದು ಮಾಡಲು ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದ್ದು, ಉಪವಿಭಾಧಿಕಾರಿಗಳ ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದೆ.

ಟೋಲ್‌ ದಂಧೆ, ರಾಜಕೀಯ ಸೇರಿಕೊಂಡು ಪ್ರಯಾಣಿಕರ ಜೀವ ಹಿಂಡುತ್ತಿತ್ತು. 'ಇದು ಅವೈಜ್ಞಾನಿಕ ಟೋಲ್‌ ಶೀಘ್ರ ಇದನ್ನು ರದ್ದು ಮಾಡಬೇಕು' ಎಂಬ ಬೇಡಿಕೆ ಅನೇಕ ದಿನಗಳಿಂದ ಇತ್ತು.ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಮನವಿಗಳಿಗಂತೂ ಲೆಕ್ಕವೇ ಇದ್ದಿಲ್ಲ.

ಟೋಲ್‌ ಸಿಬ್ಬಂದಿ ಅನುಚಿತ ವರ್ತನೆ, ಪ್ರಯಾಣಿಕರ ಮೇಲೆ ಹಲ್ಲೆ ಸದಾ ಸುದ್ದಿ ಮಾಡಿತ್ತು. ಗುಂಡಾಗಳನ್ನು ಇಟ್ಟುಕೊಂಡು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪ ಕೂಡಾ ಕೇಳಿ ಬಂದಿತ್ತು. ಇವರಿಗೆ ಇಲ್ಲಿನ ಕೆಲವು ಪ್ರಭಾವಿಗಳ ಬೆಂಬಲ ಕೂಡಾ ಇದ್ದದ್ದು ಗುಟ್ಟಾಗಿ ಏನೂ ಉಳಿದಿದ್ದಿಲ್ಲ. ಈಗ ಟೋಲ್‌ ರದ್ದು ಮತ್ತು ಸ್ಥಳಾಂತರ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬಂದಿದೆ.

ಟೋಲ್‌ಗೇಟ್‌ ಪ್ರಕರಣ ಮುನ್ನೆಲೆಗೆ ಬಂದಿದ್ದು ಯಾಕೆ?: ಈ ಟೋಲ್‌ಪ್ಲಾಜಾ ಹಿಟ್ನಾಳ್‌ ಹೋಬಳಿ 5- 6 ಕಿ.ಮೀ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರಿಗೆ ತಲೆ ನೋವಾಗಿತ್ತು. ಇಲ್ಲಿ ಟೋಲ್‌ ಕಟ್ಟಿಯೇ ಪಕ್ಕದ ಹಳ್ಳಿಗೆ ಹೋಗುವ ಪರಿಸ್ಥಿತಿ ಇತ್ತು.

ಸೇವಾ ರಸ್ತೆಯನ್ನು ನಿರ್ಮಿಸಿದೇ, ಪ್ರಶ್ನಿಸಿದರೆ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿತ್ತು.7 ಕಿ.ಮೀ ಸಮೀಪದಲ್ಲಿ ಶಹಾಪುರ-ಕೆರೆಹಳ್ಳಿ ಬಳಿ ಇನ್ನೊಂದು ಟೋಲ್‌ ಗೇಟ್‌ ಕೂಡಾ ಇದೆ.

ಇಲ್ಲಿ ಈಚೆಗೆ ಹಿರಿಯ ಎಂಜಿನಿಯರ್‌ ಒಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೂಡಾ ನಡೆದಿತ್ತು.

ಈ ಎಲ್ಲ ಪ್ರಕರಣಗಳ ಕುರಿತು ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮೊದಲಿನಿಂದಲೂ ಈ ಟೋಲ್‌ಗಳ ಬಗ್ಗೆ ಅಸಮಾಧಾನ ಹೊಂದಿದ್ದರು. ಇದಕ್ಕೆ ಹಲವರು ಧ್ವನಿಗೂಡಿಸಿದ್ದರಿಂದ ವಿಚಾರ ಮುನ್ನೆಲೆಗೆ ಬಂದು ಮೂರು ತಿಂಗಳ ಒಳಗೆ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳಬೇಕು ಎಂಬ ಸೂಚನೆ ಕೂಡಾ ನೀಡಿದ್ದಾರೆ.

ಈಗ ಟೋಲ್‌ ನಿರ್ಮಾಣದ ಕುರಿತು ಉಪವಿಭಾಗಾಧಿಕಾರಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಆ ವರದಿ ಆಧಾರಿಸಿ ಟೋಲ್‌ ರದ್ದು ಅಥವಾ ಸ್ಥಳಾಂತರದ ಕುರಿತು ಅಂತಿಮ ನಿರ್ಧಾರವಾಗಲಿದೆ.

ನಿಖರ ಮತ್ತು ವಾಸ್ತವಿಕ ವರದಿ ಆಧಾರದ ಮೇಲೆ ತೀರ್ಮಾನಕ್ಕೆ ಜಿಲ್ಲಾಡಳಿತ ಯೋಚಿಸಿದೆ.

ಜನರ ಪರ ನಿರ್ಧಾರ ಬಂದರೆ ಹೆದ್ದಾರಿ ಪ್ರಯಾಣ ಪ್ರಯಾಸವಿಲ್ಲದೆ, ಜನರಿಗೆ ಹೊರೆಯಾಗದೇ ಜನಸ್ನೇಹಿಯಾಗಲಿ ಎಂಬುವುದೇ ಜಿಲ್ಲೆಯ ಜನರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT