ಗುರುವಾರ , ಮೇ 6, 2021
23 °C
ಸಾರಿಗೆ ಸಂಸ್ಥೆಗೆ ₹30 ಕೋಟಿ ನಷ್ಟ: ಕರ್ತವ್ಯಕ್ಕೆ ಹಾಜರಾಗಲು ಮನವಿ

ಮುಷ್ಕರ ಕೈಬಿಡದಿದ್ದರೆ ಕಠಿಣ ಕ್ರಮ: ಕೂರ್ಮಾರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ನೌಕರರ ಮುಷ್ಕರದ ಕಾರಣ ಏ.16 ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹30 ಕೋಟಿ ನಷ್ಟವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ತಿಳಿಸಿದ್ದಾರೆ.

ಮುಷ್ಕರದ ಸಮಯದಲ್ಲಿ ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಾರಿಗೆ ಇಲಾಖೆ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. 

ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿ ವಿರುದ್ಧ ಇಲಾಖೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

ಇದುವರೆಗೂ ನೌಕರರ ಮೇಲೆ 22 ಎಫ್‌ಐಆರ್‌ ದಾಖಲಾಗಿವೆ. ವಾಹನಗಳನ್ನು ಜಖಂ ಮಾಡಿದ ಆರೋಪದ ಮೇಲೆ 12, ಕರ್ತವ್ಯಕ್ಕೆ ಅಡ್ಡಿ 06, ಕೆಸ್ಮಾ ಕಾಯ್ದೆ ಅಡಿ 03, ವಾಟ್ಸ್‌ಆ್ಯಪ್‌ ಮುಖಾಂತರ ಪ್ರಚೋದನೆ 01 ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಿಬ್ಬಂದಿ ಸಂಖ್ಯೆ 52. ಆ ಪೈಕಿ ವಾಹನ ಜಖಂ 08, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ 36, ಕೆಸ್ಮಾ ಕಾಯ್ದೆ ಅಡಿ 07 ಪ್ರಕರಣ, ವಾಟ್ಸ್‌ಆ್ಯಪ್‌ ಮುಖಾಂತರ ಪ್ರಚೋದನೆ ನೀಡಿದ ಆರೋಪದ ಕಾರಣ ಒಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

ವಾಹನ ಜಖಂ ಪ್ರಕರಣದಲ್ಲಿ ಒಟ್ಟು 07 ಮಂದಿಯನ್ನು ಬಂಧಿಸಲಾಗಿದೆ.

ಸಂಚಾರ ವಿಭಾಗದ 53, 21 ತಾಂತ್ರಿಕ, ಆಡಳಿತ ಇಲಾಖೆಯಿಂದ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಏ.15 ಮತ್ತು 16 ರಂದು ಒಟ್ಟು 59 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಅದರಲ್ಲಿ ಸಂಚಾರ ವಿಭಾಗದಿಂದ 46 ಸಿಬ್ಬಂದಿ, ತಾಂತ್ರಿಕ ಇಲಾಖೆಯಿಂದ 11 ಸಿಬ್ಬಂದಿ, ಸಿಬ್ಬಂದಿ ವಿಭಾಗದಿಂದ 1, ಲೆಕ್ಕಪತ್ರ ಇಲಾಖೆಯಿಂದ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗದ ಒಟ್ಟು 55 ಸಿಬ್ಬಂದಿ ಕಾನೂನುಬಾಹಿರವಾಗಿ ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಮುಷ್ಕರದಲ್ಲಿ ನಿರತ ಚಾಲನಾ ಸಿಬ್ಬಂದಿಗಳ ಮನವೊಲಿಸಿ, ಮುಷ್ಕರವನ್ನು ಕೈಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಇದರಿಂದ ಏ.07 ರಿಂದ 16ರ ವರೆಗೆ ವಿವಿಧ ವಿಭಾಗಗಳ ಒಟ್ಟು 4,752 ವಾಹನಗಳು ಕಾರ್ಯಾಚರಣೆ ಮಾಡಿವೆ. ಕಾರ್ಮಿಕ ಒಕ್ಕೂಟದ ಮುಷ್ಕರದ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಏ.12 ರಿಂದ 16ರ ವರೆಗೆ ಬಸ್ ನಿಲ್ದಾಣಗಳ ಮೂಲಕ ಖಾಸಗಿ ಬಸ್‌ಗಳು, ಅಂತರರಾಜ್ಯದ ಬಸ್ ಹಾಗೂ ಇತರ ವಾಹನ ವ್ಯವಸ್ಥೆ ಪ್ರಯಾಣಿಕರಿಗೆ ಕಲ್ಪಿಸಲಾಗಿತ್ತು.

ಏ.15 ರಿಂದ 16ರ ಅವಧಿಯಲ್ಲಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಏ.17 ರಂದು 3ನೇ ಹಂತದಲ್ಲಿ ಮಾರ್ಚ್ ತಿಂಗಳ ವೇತನ ಪಾವತಿ ಮಾಡಲಾಗುವುದು. ಈಗಾಗಲೇ 9,262 ಸಿಬ್ಬಂದಿಗೆ ₹10 ಕೋಟಿಗೂ ಹೆಚ್ಚು ಮಾರ್ಚ್ ತಿಂಗಳ ವೇತನವನ್ನು ಪಾವತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಪರೀಕ್ಷೆಗಳನ್ನು ಮುಂದೂಡಿ’
ಯಲಬುರ್ಗಾ:
ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬಂದು ಹೋಗಲು ಸಾಧ್ಯವಾಗುತ್ತಿಲ್ಲ. ಪದವಿ ಪರೀಕ್ಷೆ ಮುಂದೂಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರ ಮುಖಾಂತರ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಗೆ ಮನವಿ ಸಲ್ಲಿಸಿದರು.

ಸಾರಿಗೆ ಸಮಸ್ಯೆ ಹಾಗೂ ಕೋವಿಡ್ ಉಲ್ಬಣವಾದ ಕಾರಣ ಕೂಡಲೇ ಸೂಕ್ತ ಕ್ರಮ ಕೈಗೊಂಡು ಪರೀಕ್ಷೆ ಮುಂದೂಡಬೇಕು’ ಎಂದು ಸಂಘಟನೆ ಮುಖಂಡರು ಮನವಿಯಲ್ಲಿ ಕೋರಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಎರಡು ವಾರಗಳಿಂದಲೂ ಪ್ರತಿಭಟನೆ ನಡೆಸುತ್ತಿರುವುದರಿಂದ ಯಾವುದೇ ಗ್ರಾಮಗಳಿಂದ ಬಸ್ ಓಡಾಡುತ್ತಿಲ್ಲ. ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. 9 ಗಂಟೆಗೆ ಪರೀಕ್ಷೆ ಪ್ರಾರಂಭವಾಗುವುದರಿಂದ ಆ ಹೊತ್ತಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಬರಲು ಸಾಧ್ಯವಾಗದೇ ಇರುವ ಕಾರಣ ಸಾರಿಗೆ ವ್ಯವಸ್ಥೆ ಸರಿಯಾಗುವವರೆಗೂ ಪರೀಕ್ಷೆ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮನವಿ ಸ್ವೀಕರಿಸಿದರು. ಸಂಘಟನೆಯ ಮುಖಂಡ ಎಂ.ಸಿದ್ಧಪ್ಪ, ಅಮಿನ್ ಖಾಜಿ, ಮಹೇಶ, ಸುರೇಶ, ಮಲ್ಲಿಕಾರ್ಜುನ ಸೂಡಿ, ಬಸವರಾಜ, ಮಂಜುನಾಥ, ಮುತ್ತಣ್ಣ, ಮಲ್ಲಿಕಾರ್ಜುನ ಹಾಗೂ ವಿನೋದ ಕಟ್ಟಿಮನಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು