ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯ: ಜೀವನಾಡಿ ಎಡದಂಡೆ ಕಾಲುವೆ ಶಾಶ್ವತ ದುರಸ್ತಿಗೆ ಹೆಚ್ಚಿದ ಒತ್ತಡ

ಸಮಸ್ಯೆ ಇಲ್ಲದಿದ್ದರೂ ಕೊನೆ ಭಾಗದ ರೈತರಿಗಿಲ್ಲ ನೀರು!
Last Updated 22 ಫೆಬ್ರುವರಿ 2021, 5:03 IST
ಅಕ್ಷರ ಗಾತ್ರ

ಕೊಪ್ಪಳ: ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿ ಮೂರು ಜಿಲ್ಲೆಗಳ ಜೀವನಾಡಿ ತುಂಗಭದ್ರೆ ಕಾಲುವೆಗಳ ಮೂಲಕ ಈ ಭಾಗದ ಜನರ ಭಾಗ್ಯದ ಬಾಗಿಲು ತೆಗೆದಿದ್ದಾಳೆ. ಆದರೆ ಸಮರ್ಪಕ ನೀರು ಹಂಚಿಕೆ, ಕಾಲುವೆ ದುಃಸ್ಥಿತಿ, ನೀರು ದುರ್ಬಳಕೆ ಸೇರಿ ವಿವಿಧ ಸಮಸ್ಯೆಗಳಿವೆ.

ಜಲಾಶಯದ ಎಡದಂಡೆ ಕಾಲುವೆಯಿಂದ ಗಂಗಾವತಿ, ಕಾರಟಗಿ ತಾಲ್ಲೂಕು ಅನ್ನು ಸಂಪೂರ್ಣ ನೀರಾವರಿಗೆ ಒಳಪಟ್ಟಿದ್ದರೆ ಕೊಪ್ಪಳ, ಕನಕಗಿರಿ ತಾಲ್ಲೂಕು ಭಾಗಶಃ ಈ ನೀರಾವರಿಗೆ ಅನುಕೂಲವಾಗಿದೆ. 270 ಕಿ.ಮೀ ಉದ್ದ ಈ ಕಾಲುವೆ 3 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರು ಉಣಿಸುತ್ತಿದೆ. ಪ್ರತ್ಯಕ್ಷ, ಪರೋಕ್ಷ ನೀರಾವರಿಗೆ ಸಹಾಯವಾಗುವ ಮೂಲಕ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿದೆ.

ಪ್ರಸ್ತುತ ವರ್ಷ ನೀರಿನ ಯಾವುದೇ ಸಮಸ್ಯೆಯಾಗದಿದ್ದರೂ ಕೊನೆಯ ಭಾಗದ ರೈತರಿಗೆ ನೀರು ತಲುಪುವಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮೇಲಿಂದ ಮೇಲೆ ಕಾಲುವೆಗಳು ಒಡೆಯುವುದು, ಅಕ್ರಮ ನೀರು ಪಡೆಯುವುದು, ನೀರಿನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳು ನಿತ್ಯ ವರದಿಯಾಗುತ್ತಲೇ ಇವೆ. ಅಲ್ಲದೆ ಎರಡೂ ಬೆಳೆಯನ್ನು ಭತ್ತವನ್ನೇ ಬೆಳೆಯುತ್ತಿರುವುದರಿಂದ ಅಪಾರ ನೀರಿನ ಬೇಡಿಕೆ, ಖರ್ಚು ಆಗುತ್ತಿದೆ. ಪರ್ಯಾಯ ಬೆಳೆಯತ್ತ ರೈತರು ಚಿಂತಿಸದ ಪರಿಣಾಮ ಹೊಸ ಸಮಸ್ಯೆ ಕಾಲುವೆ ಭಾಗದ ರೈತರನ್ನು ಕಾಡುತ್ತಿದೆ.

ಬೇಸಿಗೆಯಲ್ಲಿ ಕಾಲುವೆಗೆ ನೀರು ನಿಲ್ಲಿಸುವ ಸಂದರ್ಭದಲ್ಲಿ ಆರಂಭವಾಗಿರುವ ದುರಸ್ತಿ ಕಾರ್ಯವೇ ಜಲಾಶಯ ಆಡಳಿತ ಮಂಡಳಿಗೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ ಪ್ರತಿವರ್ಷ ನೂರಾರು ಕೋಟಿ ಖರ್ಚು ಮಾಡಿದರೂ ಶಾಶ್ವತ ಸಮಸ್ಯೆ ದೊರೆಯುತ್ತಿಲ್ಲ. ಕಾಲುವೆ ಆರಂಭದಲ್ಲಿಯೇ ಉಂಟಾಗುವ ಸಮಸ್ಯೆ ಇನ್ನೂ ಸಿಂಧನೂರು ಕೊನೆಯ ಭಾಗದಲ್ಲಿ ಗಂಭೀರ ಸಮಸ್ಯೆ ತಾಳುತ್ತಿರುವುದು ವಾಸ್ತವ ಕೂಡಾ.

ಎಡದಂಡೆ ಮುಖ್ಯಕಾಲುವೆ, ಉಪಕಾಲುವೆ, ಕಿರುಕಾಲುವೆಗಳು ವ್ಯಾಪ್ತಿಯಲ್ಲಿ ನೀರು ಹಂಚಿಕೆಗೆ ಯೋಜನೆಗಳು ಇದ್ದರೂ ಕೆಲವು ಭಾಗಕ್ಕೆ ಹೆಚ್ಚು, ಕೆಲವು ಭಾಗಕ್ಕೆ ಕಡಿಮೆ ನೀರು ದೊರೆಯುತ್ತದೆ. ಅಲ್ಲದೆ ಕಾಲುವೆಗೆ ಅಕ್ರಮ ಭೋಂಗಾ ಹಾಕುವುದು, ಪಂಪ್‌ಸೆಟ್ ಮೂಲಕ ನೀರು ಎತ್ತುವುದು, ಪೈಪ್‌ಲೈನ್‌ ಮೂಲಕ ನೀರು ಪಡೆಯುವುದು ಅಲ್ಲಲ್ಲಿ ನಡೆಯುತ್ತದೆ. ರೈತರ ವಿರೋಧವನ್ನು ಕಟ್ಟಿಕೊಳ್ಳದೆ, ಪೊಲೀಸರ ಭದ್ರತೆಯನ್ನು ಹಾಕದೇ ಧರ್ಮಸಂಕಟವನ್ನು ಕಾಡಾ ಆಡಳಿತ ಮಂಡಳಿ ಎದುರಿಸುತ್ತಿದೆ.

ನೀರು ನಿಂತ ತಕ್ಷಣ ತರಾತುರಿಯಲ್ಲಿ ಆರಂಭವಾಗುವ ಕಾಮಗಾರಿ, ಕುಶಲ ಕೆಲಸಗಾರರ ಕೊರತೆಯಿಂದ ತೇಪೆ ಹಚ್ಚಲಾಗುತ್ತದೆ. ಮತ್ತೆ ಜೂನ್‌ ನಂತರ ಮುಂಗಾರು ಮಳೆಗೆ ನೀರು ಬಿಟ್ಟ ತಕ್ಷಣ ಕಾಲುವೆಗಳು ಒಡೆದು ದೊಡ್ಡ ಸುದ್ದಿಯಾಗುವುದು ಮಾಮೂಲಿಯಾಗಿದೆ. ಆದರೆ ಇದನ್ನು ಗಂಭೀರವಾಗಿ ಪರಿಣಿಸಿ ತಾಂತ್ರಿಕ ತಜ್ಞರ ನೆರವಿನೊಂದಿಗೆ ಅಮೂಲ್ಯವಾದ ಜೀವಜಲವನ್ನು ಕಾಪಾಡಿಕೊಳ್ಳಬೇಕಾದ ಜಲಾಶಯ ಆಡಳಿತ ಮಂಡಳಿ ಜಾಣ ಮೌನ ವಹಿಸುವ ಮೂಲಕ ನೀರಾವರಿ ತಜ್ಞರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಈ ಕಾಲುವೆ ದುರಸ್ತಿ ನೆಪದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ನಿತ್ಯ ಕೇಳಿ ಬರುತ್ತಿದೆ. ಇದೆಲ್ಲದರ ಮಧ್ಯೆ ನೀರು ಬಿಟ್ಟು ಆ ಸಮಸ್ಯೆ ಗೌಣ ಮಾಡಿ ಮತ್ತೆ ಅದೇ ದುರ್ವವ್ಯಸ್ಥೆ ನಡೆಯುತ್ತಿದೆ. ಜಲಾಶಯದ 0 ಮೈಲ್‌ನಿಂದಲೇ ಬೇಸಿಗೆಯಲ್ಲಿ ಕಾಲುವೆ ಎಡ ಮತ್ತು ಬಲ ಬದಿಯಲ್ಲಿ ಸಿಮೆಂಟ್‌ ಹಾಕುವುದು, ಒಳಗೆ ಬಿದ್ದ ಮಣ್ಣು, ಕಲ್ಲು ಸೇರಿದಂತೆ ಇತರ ಗಲೀಜು ಸ್ವಚ್ಛಗೊಳಿಸುವುದು. ಕಾಂಕ್ರೀಟ್‌ ಬೆಡ್‌ ಹಾಕುವುದು ಕೊನೆಯ ಭಾಗದವರೆಗೆ ವ್ಯವಸ್ಥಿತವಾಗಿ ನಡೆದರೆ ಕಾಲುವೆ ನೀರು ಕೊನೆಯ ಭಾಗದ ರೈತರಿಗೆ ತಲುಪಬಹುದು.

ಒಂದೆಡೆ ದುರಸ್ತಿ ಆರಂಭವಾದರೆ ಇನ್ನೊಂದೆಡೆ ನೀರು ಬಿಟ್ಟಿರುತ್ತಾರೆ. ಇದರ ಮಧ್ಯೆ ಎಲ್ಲವೂ ಕೊಚ್ಚಿಕೊಂಡು ಹೋಗಿ ಮತ್ತೆ ಅದೇ ಸಮಸ್ಯೆ ಪುನಾರಾವರ್ತನೆಯಾಗುವ ಮೂಲಕ ವ್ಯವಸ್ಥೆಯನ್ನು ಅಣಕಿಸುವಂತೆ ರೈತರು ಮತ್ತೆ, ಮತ್ತೆ ಹೋರಾಟಕ್ಕೆ ಸಿದ್ಧಗೊಳ್ಳಬೇಕಾಗಿ ಬಂದಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT