ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ ಸೇರಿದಂತೆ ಹಲವರು ಸೋಮವಾರ ಜಲಾಶಯ ಗೇಟ್‌ಗಳ ತಜ್ಞ ಕಣ್ಣಯ್ಯನಾಯ್ಡು, ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ, ಆಂಧ್ರಪ್ರದೇಶದ ನೀರಾವರಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಎಂ.ಡಿ. ಸೇರಿದಂತೆ ಅನೇಕರ ಜೊತೆ ಚರ್ಚಿಸಿದರು.
ಹೊಸ ಗೇಟ್‌ನ ಸೆಗ್ಮೆಂಟ್‌ಗಳನ್ನು ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಆಲಮಟ್ಟಿ, ನಾರಾಯಣಪುರ, ಕೆಆರ್‌ಎಸ್ ಸೇರಿದಂತೆ ಹಲವಾರು ಜಲಾಯಶಯಗಳಿಗೆ ಗೇಟ್ ಅಳವಡಿಸಿದ ಕಣ್ಣಯ್ಯ ನಾಯ್ಡು ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಈ ವೇಳೆ ತಾವು ಇಲ್ಲಿ ನೌಕರಿ ಮಾಡುವ ದಿನಗಳನ್ನು ನೆನಪಿಸಿಕೊಂಡ ಕಣ್ಣಯ್ಯನಾಯ್ಡು ‘ನಾನು ಇಲ್ಲಿಯೇ ನೌಕರಿ ಮಾಡಿದ್ದೇನೆ. ತುಂಗಭದ್ರಾ ನದಿಯ ನೀರು ಕುಡಿದು ಬೆಳೆದಿದ್ದೇನೆ. ಈ ಭಾಗದ ಜನರ ಜೀವನಾಡಿಯಾದ ತುಂಗಭದ್ರಾ ಮಡಿಲಿನಿಂದ ನೀರು ವ್ಯರ್ಥವಾಗಿ ಹರಿಯುತ್ತಿರುವುದು ನೋಡಿ ಮರುಗುತ್ತಿದ್ದೇನೆ’ ಎಂದು ಭಾವುಕರಾದರು.
ಅವಕಾಶ: ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದು 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎನ್ನುವ ಸಲಹೆಯನ್ನು ಅವರಿಗೆ ನೀಡುತ್ತೇನೆ ಎಂದು ತಿಳಿಸಿದರು. ಆಂಧ್ರದ ಮುಖಂಡರು ಕೂಡ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ನಲಿನ್ ಅತುಲ್ ಇದ್ದರು.