ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ನಿರ್ಮಾಣ

‘ಉಡಾನ್‌’ ಯೋಜನೆ: ಸರ್ವ ಪಕ್ಷಗಳ ಸಭೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ
Last Updated 27 ಫೆಬ್ರುವರಿ 2021, 3:08 IST
ಅಕ್ಷರ ಗಾತ್ರ

ಗಂಗಾವತಿ: ‘ಜಿಲ್ಲೆಯಲ್ಲಿ ಉಡಾನ್ ಯೋಜನೆ ಅನುಷ್ಠಾನದ ಜತೆಗೆ ಶಾಶ್ವತ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ’ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡಾನ್ ಯೋಜನೆ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸರ್ವ ಪಕ್ಷಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧ. ಜಾಗದ ಕೊರತೆ ಕಾರಣ ವಿಳಂಬವಾಗಿದೆ. ಎಂಎಸ್‌ಪಿಎಲ್‌ಗೆ ಸೇರಿದ ಜಾಗ ಸ್ವಾಧೀನ ಪಡಿಸಿಕೊಳ್ಳುವ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಸಂಬಂಧಪಟ್ಟ ಕಂಪನಿ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ. ನೀರಾವರಿ ಹೊರತುಪಡಿಸಿ ಬಂಜರು ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೂ ಚಿಂತಿಸಲಾಗಿದೆ. ಜಾಗ ಹುಡುಕಲಾಗುವುದು. ಏಳು ತಾಲ್ಲೂಕುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಜಾರಿ ಮಾಡಲಾಗುವುದು’ ಎಂದು ಹೇಳಿದರು.

‘ಸಂಸದರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆ ಅನುಷ್ಠಾನದ ಕುರಿತು ಈಗಾಗಲೇ ಮುಖ್ಯಮಂತ್ರಿ
ಗಳೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಲಾಗಿದೆ. ಶಾಶ್ವತ ವಿಮಾನ ನಿಲ್ದಾಣ ಮತ್ತು ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮಾತನಾಡಿ,‘ಕಿಷ್ಕಿಂದಾಕ್ಕೆ ಹೊರ ರಾಜ್ಯಗಳ ಭಕ್ತರು ಬರುತ್ತಿದ್ದಾರೆ. ಉಡಾನ್ ಯೋಜನೆ ಜಾರಿಯಾದರೆ ಇನ್ನಷ್ಟು ಪ್ರಸಿದ್ಧಿ ಪಡೆಯಲಿದೆ. ಹಜ್ ಮತ್ತು ಅಜ್ಮೀರ್ ಯಾತ್ರೆಗೆ ತೆರಳಬೇಕಾದರೂ ಬೇರೆ ರಾಜ್ಯಗಳ ಮೂಲಕ ಹೋಗಬೇಕಿದೆ. ಆನೆಗೊಂದಿ ಮತ್ತು ಹಂಪಿ ಭಾಗದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಿದೆ’ ಎಂದು ಹೇಳಿದರು.

ಯೋಜನೆ ಅನುಷ್ಠಾನ, ಮೂಲ ಸೌಕರ್ಯ ಕುರಿತು ಸಚಿವ ಆನಂದ ಸಿಂಗ್‌ರೊಂದಿಗೆ ಚರ್ಚೆ. ಅಗತ್ಯ ಬಿದ್ದರೆ ಜಿಲ್ಲೆಯ ನಿಯೋಗವನ್ನು ತೆಗೆದುಕೊಂಡು ಸಿಎಂ ಭೇಟಿ ಮಾಡಬೇಕು ಮತ್ತು ಸೂಕ್ತ ಜಾಗ ಅಂತಿಗೊಳಿಸುವ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಹಲವು ನಾಯಕರು ಉಡಾನ್‌ ಯೋಜನೆಯ ಅನುಷ್ಠಾನದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮನಗೌಡ, ಮಾಜಿ ಶಾಸಕ ಜಿ.ವೀರಪ್ಪ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಎಚ್‌.ಗಿರೇಗೌಡ, ಪ್ರಮುಖರಾದ ವಿರುಪಾಕ್ಷಪ್ಪ ಸಿಂಗನಾಳ್‌, ಚಂದ್ರೇಗೌಡ, ಸಣ್ಣಕ್ಕಿ ನೀಲಪ್ಪ, ಶರಣೇಗೌಡ, ಅಶೋಕಸ್ವಾಮಿ ಹೇರೂರು, ವಕೀಲರಾದ ಅಸೀಪ್‌ ಅಲಿ, ರಾಘವೇಂದ್ರ ಪಾನಗಂಟಿ, ವಿ.ಎಂ.ಭೂಸನೂರಮಠ, ಮಲ್ಲಿಕಾರ್ಜುನ ಹಾಗೂ ಚನ್ನಪ್ಪ ಮಳಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT