ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಕಸರತ್ತು

ಗ್ರಾಮೀಣ ಭಾಗದಲ್ಲಿ ಇನ್ನೂ ಹಿಂಜರಿಕೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಲಸಿಕಾ ನಿರಾಕರಣೆ ವಿಡಿಯೊಗಳು
Last Updated 27 ಸೆಪ್ಟೆಂಬರ್ 2021, 3:15 IST
ಅಕ್ಷರ ಗಾತ್ರ

ಕೊಪ್ಪಳ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ತಡೆಗೆ ಸಮರೋಪಾದಿಯಲ್ಲಿ ಲಸಿಕೆ ಹಾಕುವ ಕೆಲಸ ನಡೆಯುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಜನ ಲಸಿಕೆ ಪಡೆಯಲು ನಿರಾಕರಿಸುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ 11 ಲಕ್ಷ ಜನಸಂಖ್ಯೆ ಇದೆ. ಆ ಪೈಕಿ 18 ವರ್ಷ ಮೇಲ್ಪಟ್ಟ 8 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಇಲಾಖೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಲಸಿಕೆ ಕುರಿತು ಆರಂಭದಲ್ಲಿ ಇದ್ದ ಗೊಂದಲ, ಅಪಪ್ರಚಾರ ನಿಧಾನವಾಗಿ ಕರಗುತ್ತಿದ್ದು, ಜನರ ಮನವೊಲಿಸಿ ಲಸಿಕೆ ಹಾಕಿಸಲು ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಜಿಲ್ಲಾಡಳಿತ ಬೃಹತ್ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಗ್ರಾಮ, ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದೆ. ಇಲಾಖೆಯ ಈ ಆರೋಗ್ಯ ಕೈಂಕರ್ಯಕ್ಕೆ ಮಸೀದಿಗಳು, ಪಂಚ ಸಮಿತಿ, ವಾರ್ಡ್‌ಗಳ ಸದಸ್ಯರು ಸಹಕಾರ ನೀಡುತ್ತಿದ್ದಾರೆ.

ಗಮನ ಸೆಳೆದ ಲಸಿಕಾ ಕಾರ್ಯಕ್ರಮ: ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಕೆಲವರ ಮಾತು ನಂಬಿ ಅನೇಕರು ಲಸಿಕಾ ಕೇಂದ್ರಗಳತ್ತ ಸುಳಿಯಲು ನಿರಾಕರಿಸುತ್ತಿದ್ದರೂ ಅವರ ಗೊಂದಲವನ್ನು ನಿವಾರಿಸುವಲ್ಲಿ ಧರ್ಮಗುರುಗಳ ಪಾತ್ರ ಮಹತ್ವದ್ದಾಗಿದೆ. ಸ್ವತಃ ತಾವೇ ಲಸಿಕೆ ಹಾಕಿಸಿಕೊಂಡು ಸಾವಿರಾರು ಜನರಿಗೆ ಲಸಿಕೆ ಹಾಕಿಸುವಲ್ಲಿ ಶ್ರಮಿಸಿದ್ದಾರೆ.

ಮಸೀದಿಗಳಲ್ಲಿ ಆಯೋಜನೆ ಮಾಡುವ ಮೂಲಕ ಜಿಲ್ಲೆಯ ಲಸಿಕಾ ಅಭಿಯಾನಕ್ಕೆ ಬಲ ಬಂದಿದೆ. ಅಲ್ಲದೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು, ಗಣೇಶನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸುವ ಮಾದರಿ ಕಾರ್ಯ ಮಾಡಿವೆ.

ಲಸಿಕೆ ಹಾಕಿಸಿಕೊಂಡರೆ ಮಾತ್ರ ಪ್ರವೇಶ: ರಾಜ್ಯದಲ್ಲಿಯೇ ಇಲ್ಲಿನ ಜಿಲ್ಲಾಡಳಿತ ವಿಶಿಷ್ಟ ಪ್ರಯೋಗಕ್ಕೆ ಮುಂದಾಯಿತು. ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಜಿಲ್ಲಾಡಳಿತ ಭವನ ಪ್ರವೇಶಕ್ಕೆಅನುಮತಿ ನೀಡಲಾಗುವುದು ಎಂದು ಆದೇಶ ಹೊರಡಿಸಿತು. ಇದಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾದರೂ ಜಿಲ್ಲಾಧಿಕಾರಿ ಸ್ಪಷ್ಟನೆ ಮೂಲಕ,‘ಜಿಲ್ಲಾಡಳಿತ ಭವನಕ್ಕೆ ಸಿಬ್ಬಂದಿ ಸೇರಿ ನಿತ್ಯ 1 ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲೇ ಬೇಕು. ಅನಗತ್ಯ ಗೊಂದಲ, ಕಿರಿ–ಕಿರಿ ಉಂಟು ಮಾಡಬಾರದು’ ಎಂದು ಮನವಿ ಮಾಡಿತು.

ಲಸಿಕೆ ಹಾಕಿಸಿಕೊಳ್ಳದೇ ಇದ್ದವರು ತಾವು ಬಂದ ಕೆಲಸದ ಮಾಹಿತಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ಪ್ರವೇಶ ದ್ವಾರದಲ್ಲಿಯೇ ನೀಡಿ, ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಿಂದ ಇಲ್ಲಿಗೆ ಬರುವ ಜನರಿಗೆ ಅಲ್ಲಿಯೇ ಇರುವ ಲಸಿಕಾ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾಯಿತು.

ಲಸಿಕೆ ಹಾಕಿಸಿಕೊಳ್ಳದಿದ್ದರೆಪಡಿತರ ಸೇರಿದಂತೆ ಅಗತ್ಯಸೇವೆ ಒದಗಿಸಲು ನಿರಾಕರಿಸಿದ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿಲ್ಲ. ಈ ಕುರಿತು ಮುಖ್ಯ ಕಾರ್ಯದರ್ಶಿ ಆದೇಶ ಇರುವುದರಿಂದ ಸಾಧ್ಯವಾದಷ್ಟು ಜನರ ಮನವೊಲಿಸಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ.

ಕೆಲವರ ಹಟಮಾರಿ ಧೋರಣೆ: ಎಷ್ಟೇ ಸಮಾಧಾನದಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುತ್ತಿದ್ದರೂ ಲಸಿಕೆ ಪಡೆಯಲು ಗ್ರಾಮೀಣ ಭಾಗದಲ್ಲಿ ಮಹಿಳೆಯರು ವಿರೋಧ ವ್ಯಕ್ತಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡಿದವು. ಇದು ಜನರಲ್ಲಿ ನಕಾರಾತ್ಮಕ ಭಾವನೆ ಮೂಡಲು ಕಾರಣವಾಯಿತು. ಅಲ್ಲದೆ ಕೆಲವರು ಇಂಥ ಅನವಶ್ಯಕ ವಿಚಾರಗಳ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಮತ್ತಷ್ಟು ನಕಾರಾತ್ಮತೆಯನ್ನು ತುಂಬಿಸುವ ಕೆಲಸ ಕೂಡಾ ಮಾಡಿದರು.

‘ಸತ್ತರೂ ಚಿಂತೆಯಿಲ್ಲ. ಲಸಿಕೆ ಹಾಕಿಸಿಕೊಳ್ಳಲಾರೆ’ ಎಂದು ಖಡಾ–ಖಂಡಿತವಾಗಿ ಮಹಿಳೆಯರು ಹೇಳುವ ವಿಡಿಯೋಗಳು ಆರೋಗ್ಯ ಇಲಾಖೆ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿವೆ. ಅಲ್ಲದೆ, ಲಸಿಕೆ ಹಾಕಲು ಬಂದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದ ಒಂದು ಘಟನೆ ಕೂಡಾ ವರದಿಯಾಗಿದೆ.

ಈ ಎಲ್ಲ ಸವಾಲುಗಳು ಮಧ್ಯೆ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು 60 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. 40 ಸಾವಿರಕ್ಕೂ ಹೆಚ್ಚಿನ ಜನರಿಗೆ ಲಸಿಕೆ ಹಾಕುವ ಮೂಲಕ ಶೇ 70ರಷ್ಟು ಗುರಿ ಸಾಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT