ಮಂಗಳವಾರ, ನವೆಂಬರ್ 12, 2019
19 °C
371 (ಜೆ)ಗಾಗಿ ಕೊಪ್ಪಳದಲ್ಲಿ ಜಾಥಾ ಆರಂಭ: ಕಲಬುರ್ಗಿಯಲ್ಲಿ ಮುಕ್ತಾಯ

ವೈಜನಾಥ ಹೋರಾಟಕ್ಕೆ ಸಾಥ್‌ ನೀಡಿದ್ದ ಯುವಕರು

Published:
Updated:
Prajavani

ಕೊಪ್ಪಳ: 'ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೇ ಆಗಬೇಕು' ಎಂದು ಘರ್ಜಿಸಿದ ಮೊದಲಿಗರಲ್ಲಿ ವೈಜನಾಥ ಪಾಟೀಲರು ಒಬ್ಬರು. ತಾವು ನಂಬಿದ ತತ್ವ, ಸಿದ್ಧಾಂತ ಗಳ ಜೊತೆ ರಾಜೀ ಇಲ್ಲದ ಹೋರಾಟ ಮಾಡಿ ಸೈ ಎನಿಸಿಕೊಂಡರು.

ಹೊಂದಾಣಿಕೆ ರಾಜಕಾರಣ ಮಾಡಿ ಕೊಂಡು ಅಧಿಕಾರ ಅನುಭವಿಸಿದ್ದರೆ ಮುಖ್ಯಮಂತ್ರಿಯೇ ಆಗಬಹುದಿತ್ತು. ಆದರೆ ಅವರಲ್ಲಿನ ಬದ್ಧತೆ, ಅಭಿವೃದ್ಧಿ ಬಗ್ಗೆ ಇದ್ದ ಕಳಕಳಿಗೆ ಕೆಲವು ತ್ಯಾಗ ಮಾಡಬೇಕಾಯಿತು. ಹೈದರಾಬಾದ್ ನಿಜಾಮರಿಂದ ಮುಕ್ತಗೊಂಡು ಸ್ವತಂತ್ರ ಭಾರತದಲ್ಲಿ ಸೇರಿ 50 ವರ್ಷವಾದರೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು ಹಿಂದುಳಿದ ಭಾಗವೇ ಆಗಿದ್ದವು. ಸಂವಿಧಾನದತ್ತ ಅಧಿಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿದು 371 (ಜೆ)ಗಾಗಿ ಹೋರಾಟ ಮಾಡಿ ಅದನ್ನು ಜಾರಿಗೆ ತರಲು ಅಪಾರವಾಗಿ ಶ್ರಮಿಸಿದ ಮಹಾನ್ ಚೇತನ್.

ಪಾಟೀಲರ ಹೋರಾಟದ ಕರೆಗೆ ಓಗೊಟ್ಟು ಸಾಥ್ ನೀಡಿದ ಜಿಲ್ಲೆಯ ಅನೇಕ ಯುವಕರು ಇಂದಿಗೂ ಅವರನ್ನು ಸ್ಮರಿಸುತ್ತಾರೆ. ಈ ಭಾಗದ ಕೆಲವೇ ಕೆಲವು ಆದರ್ಶ ರಾಜಕಾರಣಿಗಳಲ್ಲಿ ವೈಜನಾಥ ಪಾಟೀಲರೂ ಒಬ್ಬರು ಎಂದು ನೆನೆಯುತ್ತಾರೆ. ಅವರ ನಿಧನದಿಂದ ಹೋರಾಟದ ಕೊಂಡಿಯೊಂದು ಕಳಚಿಕೊಂಡಿದೆ ಎಂದು ಜಿಲ್ಲೆಯ ಹೋರಾಟಗಾರರು, ವಿವಿಧ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ.

ಉದ್ಯೋಗದಲ್ಲಿ ಮೀಸಲಾತಿ, ಪ್ರಾದೇಶಿಕ ತಾರತಮ್ಯ ನಿವಾರಣೆ, ಸಮಗ್ರ ಅಭಿವೃದ್ಧಿಗಾಗಿ ಅವರು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಹೋರಾಟ ತೀವ್ರಗೊಳಿಸಿದರು. ಆ ಹೋರಾಟಕ್ಕೆ ಚಾಲನೆ ದೊರೆತಿದ್ದು ಕೊಪ್ಪಳದಲ್ಲಿ. ನಗರದ ಗವಿಮಠದಿಂದ ಆರಂಭಗೊಂಡ ಜಾಥಾ ಸಾರ್ವಜನಿಕ ಮೈದಾನದಲ್ಲಿ ಸಮಾವೇಶಗೊಂಡು ತಮ್ಮ ಹಕ್ಕೊತ್ತಾಯ ಮಂಡಿಸಲಾಯಿತು. ನಂತರ ಕಲ್ಬುರ್ಗಿಯ ಸಾಹಿತ್ಯ ಭವನದಲ್ಲಿ ಜಾಥಾ ಸಮಾರೋಪಗೊಂಡಿದ್ದು, ಐತಿಹಾಸಿಕ ದಾಖಲೆಯಾಗಿದೆ.

ಇಲ್ಲಿನ ವಿವಿಧ ಸಂಘಟನೆಗಳ ಯುವ ಮುಖಂಡರಾದ ರಜಾಕ್ ಉಸ್ತಾದ್, ಚಂದ್ರಶೇಖರ ಕವಲೂರ, ವಿರೇಶ ಮಹಾಂತಯ್ಯನಮಠ, ಸಂತೋಷ ದೇಶಪಾಂಡೆ, ತುಪ್ಪದ, ಹುಲಿಗೆಪ್ಪ ಕಟ್ಟಿಮನಿ, ಮಂಜುನಾಥ ಅಂಗಡಿ ಸಮಿತಿ ಸದಸ್ಯರಾಗಿ ಪಾಟೀಲರ ಹೋರಾಟಕ್ಕೆ ಸದಾ ಬೆನ್ನೆಲುಬಾಗಿ ನಿಂತರು. ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆದ ನಿರ್ಣಾಯಕ ಹೋರಾಟದಲ್ಲಿ ಪಾಲ್ಗೊಂಡು ನೈತಿಕ ಬೆಂಬಲ ಸೂಚಿಸಿದರು.

ಪಾಟೀಲರ ಅವಿತರ ಹೋರಾಟದ ಫಲದಿಂದ ವಿಶೇಷ ಮೀಸಲಾತಿ ದೊರೆತಿದ್ದು, ಅಭಿವೃದ್ಧಿಪಥ ದತ್ತ ಸಾಗುವಲ್ಲಿ ಅಪಾರವಾಗಿ ಶ್ರಮಿಸಿದರು. ಕಲ್ಯಾಣ ಕರ್ನಾಟಕದ ಕನಸು ಕಂಡು ಸದಾ ಹೋರಾಟದ ಕಾಯಕ ಮಾಡಿದ ಶರಣಜೀವಿ ಅಸ್ತಂಗತರಾಗಿರುವುದು ಈ ಭಾಗಕ್ಕೆ ತುಂಬಲಾರದ ನಷ್ಟ.

ಪ್ರತಿಕ್ರಿಯಿಸಿ (+)