ಭಾನುವಾರ, ಡಿಸೆಂಬರ್ 15, 2019
18 °C

ತರಕಾರಿ ಬೆಲೆ ಏರಿಕೆ: ಕಂಗಾಲದ ಗ್ರಾಹಕ

ಶಿವಕುಮಾರ್.ಕೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಿತ್ಯದ ಅವಶ್ಯಕತೆಯಾಗಿರುವ ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರಲ್ಲಿ ಖರೀದಿ ಆತಂಕ ಉಂಟಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು ಕೆ.ಜಿಗಟ್ಟಲೇ ಖರೀದಿಸುವ ಬದಲಿಗೆ ಅರ್ಧ, ಕಾಲು ಕೆ.ಜಿಗೆ ಖರೀದಿಸುತ್ತಿದ್ದಾರೆ. ಕೆಲವರಂತೂ ಸೊಪ್ಪುಗಳ ಖರೀದಿಯತ್ತ ಮುಖ ಮಾಡಿದ್ದಾರೆ.

ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ಈರುಳ್ಳಿ ನೀರು ತರಿಸುತ್ತಿದೆ. ಈಚೆಗೆ ಮಳೆಯಿಂದ ಕೊಯ್ಲಿಗೆ ಬಂದಿದ್ದ ಈರುಳ್ಳಿ ಬೆಳೆ ಮಳೆಗೆ ಕೊಳೆತು ಹೋಗಿದ್ದು, ರೈತರ ಸಂಕಷ್ಟ ಹೆಚ್ಚಿಸಿದರೆ, ಕೊಳ್ಳುವ ಗ್ರಾಹಕರು ತುಟ್ಟಿ ಬೆಲೆಯಿಂದ ಹಿಂದೆ, ಮುಂದೆ ನೋಡುವಂತಾಗಿದೆ. ಈರುಳ್ಳಿ ಗಡ್ಡೆ, ತಪ್ಪಲುಗಳಿಗೆ ಬೇಡಿಕೆಯಿದ್ದರೂ ಅತಿಯಾದ ತೇವಾಂಶದಿಂದ ಮಾರುಕಟ್ಟೆಗೆ ಸಾಗಿಸುವ ಮುಂಚೆಯೇ ಮಳೆಗೆ ಸಿಲುಕಿದೆ. ಕಳೆದ 15 ದಿನಗಳ ಹಿಂದೆ ಕೆ.ಜಿಗೆ ₹ 20 ಇದ್ದ  ಈರುಳ್ಳಿ ಬೆಲೆ ಈಗ ₹ 90 ರ ಗಡಿ ದಾಟಿದೆ.

ಮಾರ್ಕೆಟ್‌ನಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹ 7,000 ರಿಂದ ₹ 8,000 ತಲುಪಿದ್ದು, ಕೆಂಪು ಮತ್ತು ಒಣಗಿದ ಗಡ್ಡೆಗಳ ಬೆಲೆ ಇನ್ನೂ ಜಾಸ್ತಿಯಾಗಿದೆ. ಇದರ ಜತೆ ಆಲೂಗಡ್ಡೆ, ಬೀಟ್‌ರೂಟ್, ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ, ಬೀನ್ಸ್‌, ಕ್ಯಾಪ್ಸಿಕಂ, ಕ್ಯಾರೆಟ್‌ ಬೆಲೆಯೂ ಹೆಚ್ಚಿದೆ. ಮೆಣಸಿನಕಾಯಿ ಹಾಗೂ ಟೊಮೆಟೊ ಬೆಲೆ ಮಾತ್ರ ಕಡಿಮೆಯಾಗಿದೆ.

ಮಾರುಕಟ್ಟೆಗೆ ಬಂದಿಲ್ಲ ನುಗ್ಗೆಕಾಯಿ: ಎರಡು ತಿಂಗಳಿನಿಂದ ನುಗ್ಗೆಕಾಯಿ ಗಂಗಾವತಿ ಮಾರುಕಟ್ಟೆಗೆ ಬಂದಿಲ್ಲ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಬೆಲೆ ಹೆಚ್ಚಿದ್ದು, ಎರಡು ತಿಂಗಳ ಹಿಂದೆಯೆ ಕೆ.ಜಿಗೆ ₹ 50 ದರವಿತ್ತು. ಇದೀಗ ದರ ಮತ್ತಷ್ಟು ಹೆಚ್ಚಿದ್ದು, ನುಗ್ಗೆಕಾಯಿಯನ್ನೇ ಮಾರುಕಟ್ಟೆಗೆ ಮಾರುವಲ್ಲಿ ವ್ಯಾಪಾರಸ್ಥರೇ ಹಿಂದೇಟು ಹಾಕುತ್ತಿದ್ದಾರೆ. ದರ ಹೆಚ್ಚಿರುವುದರಿಂದ ಗ್ರಾಹಕರು ಖರೀದಿಸುತ್ತಿಲ್ಲ. ನುಗ್ಗೆಕಾಯಿ ತರಿಸುವುದೇ ಬಿಟ್ಟಿದ್ದೇವೆ ಎನ್ನುತ್ತಾರೆ ವ್ಯಾಪಾರಸ್ಥರು.

ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ ಒಂದು ಕೆ.ಜಿಗೆ ₹ 20, ಮೆಣಸಿನಕಾಯಿ ₹ 30 ಇದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದ್ದು, ಕ್ಯಾರೆಟ್‌ ಒಂದು ಕೆ.ಜಿಗೆ ₹ 60, ಈರುಳ್ಳಿ ₹ 90, ಹೀರೇಕಾಯಿ ₹ 40, ಬದನೆಕಾಯಿ ₹ 40, ಬೀನ್ಸ್‌ ₹ 60, ಸೌತೆಕಾಯಿ ₹ 40, ಕ್ಯಾಪ್ಸಿಕಂ ₹ 60ರ ದರದಲ್ಲಿ ಮಾರಾಟ ಆಗುತ್ತಿದೆ.

ಇನ್ನು, ಸೊಪ್ಪುಗಳು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ದೊರಕುತ್ತಿದ್ದು, ಗ್ರಾಹಕರೆಲ್ಲ ಸೊಪ್ಪಿನ ಕಡೆ ಮುಖ ಮಾಡಿದ್ದಾರೆ. ಪಾಲಕ್‌ ಸೊಪ್ಪು ನಾಲ್ಕು ಕಟ್ಟಿಗೆ ₹ 10, ಮೆಂತ್ಯೆ ಐದು ಕಟ್ಟಿಗೆ ₹ 10, ಕೊತ್ತಂಬರಿ ಎರಡು ಕಟ್ಟಿಗೆ ₹ 10 ನಂತೆ ಎಲ್ಲಾ ಸೊಪ್ಪುಗಳು ಕಡಿಮೆ ದರದಲ್ಲಿ ಸಿಗುತ್ತಿದೆ.

ನಗರದ ಮಾರುಕಟ್ಟೆಗೆ ಪ್ರತಿನಿತ್ಯ ಆಂಧ್ರ, ತೆಲಂಗಾಣ ಹಾಗೂ ರಾಜ್ಯದ ಇನ್ನಿತರೆ ಜಿಲ್ಲೆಗಳಿಂದ ತರಕಾರಿಗಳು ಬರುತ್ತಿದ್ದವು. ಆದರೆ, ಇದೀಗ ಮಾರುಕಟ್ಟೆಗೆ ತರಕಾರಿಗಳ ಆಮದು ಕಡಿಮೆಯಾಗಿದ್ದು, ಪಕ್ಕದ ಗದಗ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯು ವಿವಿಧ ಹಳ್ಳಿಗಳಿಂದ ತರಕಾರಿಗಳು ಆಮದು ಆಗುತ್ತಿದೆ. ತರಕಾರಿಗಳನ್ನು ಬೆಳೆದ ರೈತರೇ ಈಗ ನೇರವಾಗಿ ಮಾರುಕಟ್ಟೆಗೆ ಬಂದು ವ್ಯಾಪಾರ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)