ಭಾನುವಾರ, ಆಗಸ್ಟ್ 25, 2019
20 °C
ಜಿಲ್ಲಾಡಳಿತದ ಸೂಚನೆ ಪಾಲಿಸದ ರೆಸಾರ್ಟ್‌ಗಳ ವಿರುದ್ಧ ಕ್ರಮಕ್ಕೆ ನಿರ್ಧಾರ

ವಿರೂಪಾಪುರ ಗಡ್ಡಿ: ಮತ್ತೆ 190 ಜನರ ರಕ್ಷಣೆ

Published:
Updated:

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 190 ಪ್ರವಾಸಿಗರು ಹಾಗೂ ಅಲ್ಲಿಯ ನಿವಾಸಿಗಳನ್ನು ಸೇನಾ ಹೆಲಿಕಾಪ್ಟರ್‌ ಮೂಲಕ ಮಂಗಳವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಎರಡು ದಿನಗಳಲ್ಲಿ ಒಟ್ಟು 565 ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.

ಎನ್‌ಡಿಆರ್‌ಎಫ್‌ನ 10 ಸಿಬ್ಬಂದಿ ಇದ್ದ ತಂಡ, ಜಿಲ್ಲಾಡಳಿತದ 30 ಜನ ಸಿಬ್ಬಂದಿ, ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ಕೊನೆವರೆಗೆ ಅಲ್ಲೇ ಇದ್ದು, ನಂತರ ಹೆಲಿಕಾಪ್ಟರ್ ಮೂಲಕ ಬಸಾಪುರಕ್ಕೆ ಬಂದರು.

ರೆಸಾರ್ಟ್ ಮಾಲೀಕರ ವಿರುದ್ಧ ಕ್ರಮ: ‘ಜಿಲ್ಲಾ ಆಡಳಿತ ಪ್ರವಾಹದ ಮುನ್ಸೂಚನೆ ನೀಡಿದ್ದರೂ ಪ್ರವಾಸಿಗರಿಗೆ ರೆಸಾರ್ಟ್ ಮಾಲೀಕರು ತಪ್ಪು ಮಾಹಿತಿ ನೀಡಿ ಆಶ್ರಯ ನೀಡಿದ್ದರು. ಇಲ್ಲಿಯ ಸ್ಥಿತಿಗತಿಯ ವರದಿಯನ್ನು ಸರ್ಕಾರಕ್ಕೆ ನೀಡುತ್ತಿದ್ದು, ರೆಸಾರ್ಟ್‌ ಮಾಲೀಕರ ವಿರುದ್ಧ ಕಾನೂನು  ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.

ರಕ್ಷಣೆಗೆ ಗರ್ಭಿಣಿ ಮೊರೆ: ಯಾದಗಿರಿ ಜಿಲ್ಲೆಯ ಕಕ್ಕೇರಾ ಸಮೀಪದ ನೀಲಕಂಠರಾಯನಗಡ್ಡಿಯಲ್ಲಿರುವ ಗರ್ಭಿಣಿ ಹನುಮಂತಮ್ಮ ಹಾಗೂ 80 ವರ್ಷ ವಯಸ್ಸಿನ ಬಸಮ್ಮ ‌ತಮ್ಮನ್ನು ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದ್ದಾರೆ.

‘ಈ ನಡುಗಡ್ಡೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕೃಷ್ಣಾ ನದಿ ಪ್ರವಾಹದಿಂದ ಮುಳುಗಿದ್ದು, ಅಗತ್ಯ ವಸ್ತುಗಳು ಇಲ್ಲದೆ ಪರದಾಡುತ್ತಿದ್ದೇವೆ. ನಡುಗಡ್ಡೆಯಲ್ಲಿ 138 ಜನರಿದ್ದು, ಸಂ‍ಪರ್ಕ ಕಡಿತದಿಂದ ಹೊರಬಾರದ ಸ್ಥಿತಿಯಲ್ಲಿದ್ದೇವೆ. ಎಲ್ಲರನ್ನೂ ರಕ್ಷಿಸಬೇಕು’ ಎಂದು ಅಲ್ಲಿಯವರು ಕೋರಿದ್ದಾರೆ.

ಪ್ರವಾಹ ಇಳಿಮುಖ: ಕೃಷ್ಣಾ, ಭೀಮಾ ಹಾಗೂ ತುಂಗಾಭದ್ರಾ ನದಿಗಳಿಗೆ ಜಲಾಶಯಗಳಿಂದ ಹರಿಬಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. 

ರಾಯಚೂರು ಜಿಲ್ಲೆಯ 13 ಗ್ರಾಮಗಳ ಸಂತ್ರಸ್ತರು ಇನ್ನೂ ಪರಿಹಾರ  ಕೇಂದ್ರದಲ್ಲಿದ್ದಾರೆ. ತುಂಗಭದ್ರಾ ನದಿ ತೀರದ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕು ಕೇಂದ್ರಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವುದಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ.

Post Comments (+)