ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮತಬೇಟೆ ‘ಆಟ’; ಕ್ರೀಡಾ ಚಟುವಟಿಕೆ ಜೋರು

ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕಾರಣಿಗಳಿಂದ ನಾನಾ ತಂತ್ರ
Last Updated 29 ಜನವರಿ 2023, 5:15 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನಸಭಾ ಚುನಾವಣೆ ಘೋಷಣೆಯಾಗಲು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಹಾಲಿ ಜನಪ್ರತಿನಿಧಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ.

ಕೆಲವರು ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಪಕ್ಷದ ಸಾಧನೆ ಹೇಳಿದರೆ, ಇನ್ನೂ ಕೆಲವರು ಚುನಾವಣೆಯಲ್ಲಿ ಗೆದ್ದು ಶಾಸಕನಾದರೆ ಮಾಡುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭರಪೂರ ಭರವಸೆಗಳನ್ನು ನೀಡುತ್ತಾರೆ.

ಜಿಲ್ಲೆಯ ಹಾಲಿ ಶಾಸಕರಾದ ಕೊಪ್ಪಳದ ಕೆ. ರಾಘವೇಂದ್ರ ಹಿಟ್ನಾಳ, ಕನಕಗಿರಿಯ ಬಸವರಾಜ ದಢೇಸೂಗೂರು, ಗಂಗಾವತಿಯ ಪರಣ್ಣ ಮುನವಳ್ಳಿ, ಕುಷ್ಟಗಿಯ ಅಮರೇಗೌಡ ಬಯ್ಯಾಪುರ ಮತ್ತು ಸಚಿವ ಹಾಲಪ್ಪ ಆಚಾರ್ ಚುನಾವಣಾ ಸವಾಲಿಗೆ ಸಿದ್ಧತೆ ನಡೆಸಿದ್ದಾರೆ. ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ವಿ. ಚಂದ್ರಶೇಖರ್‌ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಆಪ್ತರ, ಸಮುದಾಯದವರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಮನೆಗೆ ಭೇಟಿ ಕೊಟ್ಟು ವಿಶ್ವಾಸ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಇದೆಲ್ಲದರ ಮಧ್ಯೆ ಕ್ರೀಡಾ ಚಟುವಟಿಕೆಗಳ ಆಯೋಜನೆ ಹಾಗೂ ಪ್ರಾಯೋಜಕತ್ವಕ್ಕೂ ಆದ್ಯತೆ ಕೊಡಲಾಗುತ್ತಿದೆ. ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಅನೇಕ ಯುವಜನರ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್‌ ಟೂರ್ನಿಗಳ ಆಯೋಜನೆ ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿವೆ. ಚುನಾವಣೆ ಬಳಿಕ ಕ್ರೀಡಾ ಸೌಲಭ್ಯಗಳನ್ನು ನೀಡುವ ಭರವಸೆಗಳನ್ನೂ ಜನಪ್ರತಿನಿಧಿಗಳು ನೀಡುತ್ತಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಇತ್ತೀಚೆಗೆ ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಗ್ರಾಮಕ್ಕೆ ತೆರಳಿದ್ದಾಗ ಅಲ್ಲಿನ ಯುವಕರು ‘ನಮಗೆ ಕ್ರಿಕೆಟ್‌ ಹಾಗೂ ಕಬಡ್ಡಿ ಮೈದಾನ ಬೇಕು’ ಎಂಬ ಬೇಡಿಕೆ ಇಟ್ಟಿದ್ದರು. ಇದಕ್ಕೆ ರೆಡ್ಡಿ ‘ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ. ನಿಮಗೆ ಮೈದಾನ ಒದಗಿಸಿಕೊಡುವೆ’ ಎಂದು ಭರವಸೆ ಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ಸಿ.ವಿ. ಚಂದ್ರಶೇಖರ್‌ ಅವರ ಪ್ರಾಯೋಜಕತ್ವದಲ್ಲಿ ದದೇಗಲ್‌ ಪ್ರೀಮಿಯರ್‌ ಲೀಗ್‌ ನಡೆದಿತ್ತು. ಜಿಲ್ಲೆಯ ಕುಷ್ಟಗಿ, ಗಂಗಾವತಿ, ಯಲಬುರ್ಗಾ ಭಾಗದಲ್ಲಿ ಗ್ರಾಮೀಣ ಕ್ರೀಡೆ, ಕಬಡ್ಡಿ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ಚುನಾವಣಾ ಪ್ರಚಾರಕ್ಕೆ ಯುವಜನರ ಹುಮಸ್ಸು ಹೆಚ್ಚಿಸುವ ಜೊತೆಗೆ ತಮ್ಮ ಚುನಾವಣಾ ತಂಡವನ್ನೂ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ.

ಸದ್ಯ ಕೊಪ್ಪಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಗವಿಶ್ರೀ ಕಪ್‌ ಕ್ರಿಕೆಟ್‌ ಟೂರ್ನಿ ನಡೆದಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ಮುಂಭಾಗದಲ್ಲಿ ಹಾಲಿ ಜನಪ್ರತಿನಿಧಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳ ಸ್ವಾಗತ ಕೋರುವ ದೊಡ್ಡ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಕ್ರೀಡಾಪಟುಗಳಿಗಾಗಿ ಇತ್ತೀಚಿಗಷ್ಟೇ ಕೊಪ್ಪಳ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ನಡೆದಿತ್ತು.

ಈಗ ನಡೆಯುತ್ತಿರುವ ಗವಿಶ್ರೀ ಕಪ್‌ ಟೂರ್ನಿಗೆ ಜನಾರ್ದನ ರೆಡ್ಡಿ ₹ 2.5 ಲಕ್ಷ ಬಹುಮಾನ ಮೊತ್ತ ನೀಡಿದರೆ, ಸಿ.ವಿ. ಚಂದ್ರಶೇಖರ್‌ ₹ 1 ಲಕ್ಷ ರನ್ನರ್ಸ್‌ ಅಪ್‌ ಬಹುಮಾನಕ್ಕೆ ಪ್ರಾಯೋಜಕತ್ವ ಕೊಟ್ಟಿದ್ದಾರೆ. ಟೂರ್ನಿಗಳ ವೇಳೆ ಬಳಸುವ ಶಾಮಿಯಾನ್‌ ಹಾಗೂ ನಿರ್ವಹಣೆ ವೆಚ್ಚವನ್ನು ಜೆಡಿಎಸ್ ನಾಯಕ ಸಾಧಿಕ್‌ ಅತ್ತಾರ್‌ ವಹಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ಅತ್ತಾರ್‌ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳನ್ನೂ ವೇದಿಕೆಯಾಗಿ ಬಳಸಿಕೊಂಡು ಜನಪ್ರತಿನಿಧಿಗಳು ಕ್ರೀಡಾಕೂಟಗಳ ಆಯೋಜನೆಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಗಂಗಾವತಿ ಪ್ರೀಮಿಯರ್‌ ಲೀಗ್‌ಗೆ ಸ್ಥಳೀಯ ರಾಜಕಾರಣಿಗಳು ಪ್ರಯೋಜಕತ್ವ ವಹಿಸಿದ್ದರು.

ಕೆಪಿಎಲ್‌ ಸಂಘಟಕ ಹಾಗೂ ಕಾಳೋಜಿ ಗ್ರಾಮೀಣಾಭಿವೃದ್ಧಿ ಕ್ರೀಡೆ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಮುಖ್ಯಸ್ಥ ಮೈನೂದ್ದೀನ್‌ ವರ್ದಿ ಈ ಕುರಿತು ಪ್ರತಿಕ್ರಿಯಿಸಿ ‘ರಾಜಕೀಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಟೂರ್ನಿ ನಡೆಸಿದ್ದೆವು. ಕೆಲ ಟೂರ್ನಿಗಳಿಗೆ ಜನಪ್ರತಿನಿಧಿಗಳು ಪ್ರಾಯೋಜಕತ್ವ ನೀಡುತ್ತಾರೆ’ ಎಂದರು.

ಎಲ್ಲಾ ರಾಜಕಾರಣಿಗಳಿಗೆ ಸಹಜವಾಗಿ ಹಿತಾಸಕ್ತಿ ಇದ್ದೇ ಇರುತ್ತಾರೆ. ಆಡುವಾಗ ಆಟಗಾರರು ಧರಿಸುವ ಟೀ ಶರ್ಟ್‌ ಹಾಗೂ ಕ್ಯಾಪ್‌ಗಳ ಮೂಲಕ ಜನಪ್ರತಿನಿಧಿಗಳಿಗೆ ಪ್ರಚಾರ ಸಿಗುತ್ತದೆ. ಇದರಿಂದ ರಾಜಕಾರಣಿಗಳು ಹಾಗೂ ಕ್ರೀಡಾಪಟುಗಳು ಇಬ್ಬರಿಗೂ ಅನುಕೂಲವಾಗುತ್ತದೆ.
ಮಹೇಶ ಅಂಗಡಿ, ಬಿಜೆಪಿ ಮಾಧ್ಯಮ ವಕ್ತಾರ

ಕ್ರಿಕೆಟ್‌ ಟೂರ್ನಿಗಳಿಂದ ಜನಪ್ರತಿನಿಧಿಗಳಿಗೆ ಲಾಭಕ್ಕಿಂತ ಹೆಚ್ಚಾಗಿ ಜನರ ಗಮನ ಸೆಳೆಯಲು ಅನುಕೂಲವಾಗುತ್ತದೆ. ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಜನರ ಮೇಲಿದೆ. ಹೆಚ್ಚು ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ.
ಸೈಯದ್‌ ಮೆಹೆಮೂದ್‌ ಹುಸೇನಿ (ಬಲ್ಲೆ), ಗವಿಶ್ರೀ ಟೂರ್ನಿ ಆಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT