ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೇವಾರಿಗೆ ‘ಗ್ರಹಣ’: ಪಟ್ಟಣ ಈಗ ಕಸದ ಉಗ್ರಾಣ

ಕುಕನೂರು: ಸೌಂದರ್ಯ ನುಂಗಿ ಹಾಕಿದ ಅಸ್ವಚ್ಛತೆ
Last Updated 4 ಮೇ 2021, 4:51 IST
ಅಕ್ಷರ ಗಾತ್ರ

ಕುಕನೂರು: ಪಟ್ಟಣದ ಅನೇಕ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಎಲ್ಲೆಂದರಲ್ಲಿ ಕಸದ ರಾಶಿಗಳು ಸದಾ ಗೋಚರಿಸುತ್ತವೆ. ಇನ್ನೊಂದೆಡೆ ಚರಂಡಿಯುದ್ದಕ್ಕೂ ಮಡುಗಟ್ಟಿ ನಿಂತ ತ್ಯಾಜ್ಯ ನೀರಿನ ದರ್ಶನವಾಗುತ್ತದೆ.

ಪಟ್ಟಣದ ಮುಖ್ಯರಸ್ತೆ ಪಕ್ಕದಲ್ಲಿರುವ ಚರಂಡಿಗಳೆಲ್ಲ ಹೂಳು ತುಂಬಿ ತ್ಯಾಜ್ಯ ನೀರು ಮುಂದೆ ಸಾಗದಷ್ಟು ಕೆಟ್ಟ ಪರಿಸ್ಥಿತಿಗೆ ತಲುಪಿದೆ. ವಿವಿಧ ಮಳಿಗೆಗಳವರು ನಿತ್ಯ ಸುರಿಯುವ ತ್ಯಾಜ್ಯ ರಾಶಿ, ರಾಶಿಯಾಗಿ ಸಂಗ್ರಹವಾಗುತ್ತಿದೆ. ಅದನ್ನು ನಿಯಮಿತವಾಗಿ ವಿಲೇವಾರಿ ಮಾಡುತ್ತಿಲ್ಲ.

ಇಲ್ಲಿನ ಅವ್ಯವಸ್ಥೆ ಕಂಡು ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಬೀದಿನಾಯಿಗಳು, ಹಂದಿಗಳು ಆಹಾರದ ಆಸೆಗೆ ಕಸದ ರಾಶಿಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ.

ಇದರಿಂದಾಗಿ ಪಟ್ಟಣದಲ್ಲಿ ಮತ್ತಷ್ಟು ಅನೈರ್ಮಲ್ಯ ಉಂಟಾಗುತ್ತಿದೆ. ಇದೆಲ್ಲದರ ಪರಿಣಾಮ ಪಟ್ಟಣದ ಸೌಂದರ್ಯಕ್ಕೆ ಕುಂದುಂಟಾಗುತ್ತಿದೆ. ಆದರೆ ಕಳೆದ ಇಪ್ಪತ್ತು ದಿನಗಳಿಂದ ಸ್ವಚ್ಛತೆ ಕಾಣದೆ ಎಲ್ಲೆಂದರಲ್ಲಿ ಗಲೀಜು ತುಂಬಿಕೊಂಡಿರುವ ವಾರ್ಡ್‌ಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸಂಬಂಧಿಸಿದವರು ಮುಂದಾಗಿಲ್ಲ. ಇನ್ನಾದರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಇದಕ್ಕೆಲ್ಲ ಕಾರಣ ಪಟ್ಟಣದಲ್ಲಿ ಯಾವ ಭಾಗದಲ್ಲಿಯೂ ಕಸ ಸಂಗ್ರಹ ತೊಟ್ಟಿಗಳಿಲ್ಲ. ಬಸ್‌ ನಿಲ್ದಾಣದ ಮುಂದೆ ಕಸ ಸಂಗ್ರಹ ತೊಟ್ಟಿ ಇಡದಿರುವುದು ಪಟ್ಟಣ ಪಂಚಾಯಿತಿ ಸ್ವಚ್ಛತೆಗೆ ಎಷ್ಟು ಆದ್ಯತೆ ನೀಡುತ್ತದೆ ಎಂಬುದನ್ನು ತೋರಿಸುತ್ತದೆ.

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಸ್ಥಳೀಯ ಆಡಳಿತಕ್ಕೆ ಸಂಬಂಧಪಟ್ಟವರು ಇನ್ನಾದರೂ ಪಟ್ಟಣದ ಪ್ರಮುಖ ವೃತ್ತದ ಬಳಿ ಕನಿಷ್ಠ 6-8 ಕಸದ ಬುಟ್ಟಿಗಳನ್ನಿಟ್ಟು, ನಿತ್ಯ ಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದೆ.

ಪ್ರತಿ ರಸ್ತೆಗೆ ಕನಿಷ್ಠ ಒಂದಾದರೂ ಕಸ ಸಂಗ್ರಹಣ ತೊಟ್ಟಿಗಳನ್ನು ಇಟ್ಟು, ಇದರಲ್ಲಿ ಸಂಗ್ರಹವಾಗುವ ಕಸವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯೂ ಕೊರೊನಾ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂಬ ಸೂಚನೆ ಇದ್ದರೂ, ಪ್ರತಿದಿನ ಧಾರವಾಡಕ್ಕೆ ಹೋಗಿ ಬರುತ್ತಾರೆ. ಸರ್ಕಾರದ ವಾಹನವನ್ನು ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT