ಎಪಿಎಂಸಿ ಆವರಣಕ್ಕೆ ಕೊಳಚೆ ನೀರು: ಆರೋಪ

ಕುಷ್ಟಗಿ: ಇಲ್ಲಿಯ ಎಪಿಎಂಸಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಸರ್ವಿಸ್ ರಸ್ತೆಯ ಒಳ ಚರಂಡಿ ಶಿಥಿಲಗೊಂಡಿದೆ. ಇದರ ಪರಿಣಾಮ ಕೊಳಚೆ ಜೊತೆ ಮಳೆ ನೀರು ಬೆರೆತು ‘ಬಿ’ ಆವರಣಕ್ಕೆ ಬರುತ್ತಿದೆ.
ಹಲವು ತಿಂಗಳುಗಳ ಹಿಂದೆಯೇ ಚರಂಡಿ ಕೆಳಭಾಗದಲ್ಲಿನ ರಂಧ್ರದಿಂದ ಕೊಳಚೆ ನೀರು ಆವರಣದ ಒಳಗೆ ಬರುತ್ತದೆ. ಮಳೆಯಾದಾಗಲೆಲ್ಲ, ಭಾರಿ ಪ್ರಮಾಣದಲ್ಲಿ ನೀರು ನುಗ್ಗುವುದರಿಂದ ರಸ್ತೆ ಕೊಚ್ಚಿಹೋಗಿದೆ. ಹಂದಿಗಳ ಹಿಂಡು ಇದೇ ಕೊಳೆ ನೀರಿನಲ್ಲಿ ಹೊರಳಾಡಿ, ಪರಿಸರವನ್ನು ಇನ್ನಷ್ಟು ಗಲೀಜು ಮಾಡುತ್ತವೆ’ ಎಂದು ಎಪಿಎಂಸಿ ವರ್ತಕರು ತಿಳಿಸಿದರು.
‘ಗಲೀಜು ಪರಿಸರದಿಂದ ವಾತಾವರಣ ಕಲುಷಿತವಾಗುತ್ತದೆ ಅಲ್ಲದೇ ಅನಾರೋಗ್ಯದ ಭೀತಿಯು ಕಾಡುತ್ತದೆ. ಶುಕ್ರವಾರ ಸುರಿದ ಮಳೆಯಿಂದ ಚರಂಡಿಯ ನೀರು ಆವರಣಕ್ಕೆ ನುಗ್ಗಿ, ನೆಲ ಮಾಳಿಗೆಯಲ್ಲಿರುವ ಗೋದಾಮುಗಳಲ್ಲಿ ನೀರು ಜಿನುಗುತ್ತಿದೆ’ ಎಂದು ಅವರು ವಿವರಿಸಿದರು.
ಹೆದ್ದಾರಿ ಪಕ್ಕದಲ್ಲಿ ಕೆಲ ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದ ಬೃಹತ್ ಗಾತ್ರದ ಚರಂಡಿ ಸುಸ್ಥಿತಿಯಲ್ಲೇ ಇತ್ತು. ಆದರೆ, ಕೆಲ ದುಷ್ಕರ್ಮಿಗಳು ಚರಂಡಿಯ ತಳಭಾಗದಲ್ಲಿ ರಂಧ್ರ ಕೊರೆದಿರುವ ಕಾರಣ ಕೊಳಚೆ ನೀರು ಮುಂದೆ ಹೋಗದೇ ಎಪಿಎಂಸಿ ಆವರಣದ ಪಕ್ಕದಲ್ಲಿನ ಗುಂಡಿಯಲ್ಲಿ ಮಡುಗಟ್ಟುತ್ತದೆ. ಹಂದಿ ಸಾಕಣೆಯಲ್ಲಿ ತೊಡಗಿರುವ ಕೆಲವ್ಯಕ್ತಿಗಳು ಈ ಕೃತ್ಯ ನಡೆಸಿದ್ದಾರೆ’ ಎಂದು ಅವರು ಆರೋಪಿಸಿದರು.
ನಂಜಯ್ಯ ಗುರುವಿನ, ಪರಸಪ್ಪ ಕತ್ತಿ, ಸಂಗಪ್ಪ ಪಂಚಮ, ಸಂಗನಗೌಡ ಜೇನರ, ಪುರಸಭೆ ಸದಸ್ಯ ಕಲ್ಲೇಶ ತಾಳದ, ಚಂದ್ರಕಾಂತ ವಡಗೇರಿ, ಶರಣಪ್ಪ ಚೂರಿ ಇತರರು ಹೇಳಿಕೆಗೆ ಸಹಿ ಹಾಕಿದ್ದಾರೆ.
‘ಚರಂಡಿಯನ್ನು ಕೆಲವರು ಒಡೆದು ಕೊಳಚೆ ನೀರು ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗುವಂತೆ ಮಾಡಿದ್ದಾರೆಂದು ವರ್ತಕರು ಗಮನಕ್ಕೆ ತಂದಿದ್ದಾರೆ. ಚರಂಡಿ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಇಷ್ಟರಲ್ಲೇ ಪತ್ರ ಬರೆಯಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.