ಶುಕ್ರವಾರ, ಜೂನ್ 18, 2021
28 °C
ಐತಿಹಾಸಿಕ ಹಿರೇಹಳ್ಳ ಮೈದುಂಬಿದರೆ ಘಟರಡ್ಡಿಹಾಳ ಗ್ರಾಮಸ್ಥರಿಗೆ ಸಂಕಷ್ಟ

ನೀರೊಳಗಿದ್ದರೂ ತಪ್ಪದ ಬಾಯಾರಿಕೆ!

ಜುನಸಾಬ ವಡ್ಡಟ್ಟಿ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಸಮೀಪದ ಗ್ರಾಮವೊಂದರಲ್ಲಿ ಕುಡಿಯಲು ನೀರು ಇದ್ದರೂ ಅದನ್ನು ತರಬೇಕು ಎಂದರೆ ಪ್ರಯಾಸ ಪಡುತ್ತಿರುವುದು ಮಾತ್ರ ವಿಪರ್ಯಾಸ. ಈ ಭಾಗದಲ್ಲಿ ಪ್ಲೋರೈಡ್‌ಯುಕ್ತ ನೀರು ಬರುವುದರಿಂದ ದೂರದ ಕೆರೆಯ ನೀರೇ ಆಶ್ರಯ. ಆದರೆ ಮಳೆ ಬಂದರೆ ಹಿರೇಹಳ್ಳ ತುಂಬಿದರೆ ಕುಡಿಯುವ ನೀರಿಗೆ ತತ್ವಾರ ಬರುತ್ತಿರುವುದು ವಿಪರ್ಯಾಸವಾದರೂ ಸತ್ಯ.

ಶರಣರು ಹೇಳಿದಂತೆ ‘ಕುಡಿಯುವ ನೀರೊಳಗಿದ್ದ ಅಗಸ ಬಾಯಾರಿ ಸತ್ತಂತೆ’ ಎಂಬ ವಚನ ನೆನಪಿಗೆ ಬಾರದೇ ಇರದು. ಈ ಕೆರೆಯ ನೀರು ಅಷ್ಟೊಂದು ಶುದ್ಧ ಮತ್ತು ಆರೋಗ್ಯಕ್ಕೆ ಚೇತೋಹಾರಿ. ಇದಕ್ಕಾಗಿಯೇ ಗಂಗಮ್ಮನ ಕೆರೆ ಎಂದು ಪ್ರಸಿದ್ಧ. ಕೊಳವೆಬಾವಿ ನೀರು, ಸರ್ಕಾರದ ಮೂಲಕ ಪೂರೈಕೆಯಾಗುವ ನೀರಿಗಿಂತ ಇದನ್ನು ಕುಡಿದು ಸಂತೃಪ್ತಗೊಂಡ ಜನರಿಗೆ ಮಳೆಗಾಲ ಬಂತೆಂದರೆ ಒಂದು ರೀತಿಯ ಕಳವಳ.

ಸದಾ ಬಿರುಬಿಸಿಲು, ಒಣಬೇಸಾಯದ ಘಟರಡ್ಡಿಹಾಳ ಗ್ರಾಮಕ್ಕೆ ಕುಡಿಯಲು ಈ ಕೆರೆಯ ನೀರೇ ಆಶ್ರಯ. ಗ್ರಾಮದ ಹಿರೇಹಳ್ಳಕ್ಕೆ ಸರಿಯಾದ ಸೇತುವೆಯಾಗಲಿ, ದಾರಿಯಾಗದೆ ಇಲ್ಲದೆ ಪರದಾಡುವ ಜೊತೆಗೆ ಮಳೆಯಾಗಿ ಹಿರೇಹಳ್ಳಕ್ಕೆ ನೀರು ಬಂದರೆ ಕುಡಿಯುವ ನೀರಿಗೂ ತತ್ವಾರ.

ದಶಕಗಳ ಹಿಂದೆ ಸಮೀಪದ ಅಳವಂಡಿ, ಬೆಳಗಟ್ಟಿ, ಮುಂಡರಗಿ, ಮುರ್ಲಾಪುರ, ರಘುನಾಥನಹಳ್ಳಿಗಳಿಗೆ ಬೇಸಿಗೆಯಲ್ಲಿ ನೀರಿನ ದಾಹ ತೀರಿಸಿದ್ದ ಕೆರೆ ಈಗ ಗ್ರಾಮಕ್ಕೆ ಮಾತ್ರ ಅನುಕೂಲವಾಗಿದೆ. ವಿವಿಧೆಡೆ ಸರ್ಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ತುಂಗಭದ್ರೆ ನಲ್ಲಿಯ ಮೂಲಕ ಸುರಿಯುತ್ತಿರುವುದರಿಂದ ಕೆರೆಯ ನೀರು ಬಳಕೆ ಕಡಿಮೆಯಾಗಿದೆ.

ಕೊಪ್ಪಳ ಗವಿಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶಿವಶಾಂತವೀರ ಸ್ವಾಮೀಜಿ ತಮ್ಮ ಆರೋಗ್ಯದಲ್ಲಿ ತೊಂದರೆಯಾದಾಗ ತಿಂಗಳು ಕಾಲ ಈ ನೀರಿಗಾಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಗ್ರಾಮದ ಹಿರಿಯರು ಇಂದಿಗೂ ಸ್ಮರಿಸಿಕೊಳ್ಳು
ತ್ತಾರೆ. ಮಕ್ಕಳಿಲ್ಲದ ತಾಯಿ ಜನರ ಕಷ್ಟಕ್ಕೆ ಕಟ್ಟಿಸಿದ ಈ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ.

ಈಗ ಕುಡಿಯುವ ನೀರು ತರಲು ತೊಡೆ ಮಟ್ಟದ ನೀರಿನಲ್ಲಿ ಕೆಲವು ಕಡೆ ಆಳದ ನೀರನ್ನು ದಾಟಿ ಹೋಗಬೇಕಾದ ಅನಿವಾರ್ಯತೆ ಇದೆ. ಮಳೆಯಿಂದಾಗಿ ಹಳ್ಳದಲ್ಲಿ ನೀರು ಬಂದು ಹೊಸದಾಗಿ ನಿರ್ಮಿಸಿದ ಚೆಕ್ ಡ್ಯಾಮ್ ಇರುವುದರಿಂದ ನೀರು ನಿಲ್ಲುತ್ತದೆ. ಇದರಿಂದ ನೀರಿಗಾಗಿ ಹಳ್ಳದ  ನೀರನ್ನು ದಾಟಿ ತರಲೆಬೇಕಾದ ಅನಿವಾರ್ಯತೆ ಇದೆ. ಜಿಲ್ಲಾಡಳಿತವು ಈ ದಾರಿಗೆ ಸೇತುವೆ ನಿರ್ಮಾಣ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುವುದು ಗ್ರಾಮಸ್ಥರ ಆಶಯವಾಗಿದೆ.

ಘಟಕ ಬಂದ್‌ ಆಗಿದ್ದೇ ಹೆಚ್ಚು: ಈ ಭಾಗದಲ್ಲಿ ನೀರಿನ ತೀವ್ರ ಅಭಾವ ದಶಕದಿಂದ ಇದೆ. ಸಮಸ್ಯೆ ಪರಿಹಾರಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದ್ದರೂ ನಿರ್ವಹಣೆ ಸಮಸ್ಯೆಯಿಂದ ಬಂದ್ ಆಗಿದೆ. ಸ್ಥಳೀಯ ಪಂಚಾಯಿತಿ ಘಟಕವನ್ನು ನಿರ್ವಹಿಸಬೇಕಾದ ಜವಾಬ್ದಾರಿ ಅತ್ಯಂತ ಅವಶ್ಯಕವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.