ಮಂಗಳವಾರ, ಜುಲೈ 5, 2022
24 °C
ಕುಷ್ಟಗಿ ಪುರಸಭೆ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ, ಜನರ ಪರದಾಟ

ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಬೇಸಿಗೆಗೂ ಮೊದಲೇ ನೀರಿಗೆ ತತ್ವಾರ

ನಾರಾಯಣರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಬೇಸಿಗೆಯ ಬಿಸಿ ತಟ್ಟಲಾರಾಂಭಿಸಿದೆ ಅದೇ ರೀತಿ ಬಿಸಿಲು ಮತ್ತು ನೀರಿನ ಸಮಸ್ಯೆ ಮಧ್ಯೆ ಅವಿನಾಭಾವ ಸಂಬಂಧ. ನೀರಿದ್ದರೆ ಪಂಪ್‌ ಮಾಡಲು ವಿದ್ಯುತ್‌ ಇಲ್ಲ, ಇವರೆಡೂ ಇದ್ದರೂ ಕೊಳವೆ, ವಾಲ್ವ್‌ಗಳ ದುರಸ್ತಿ, ಅಸಮರ್ಪಕ ನಿರ್ವಹಣೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಪಟ್ಟಣದ ನಾಗರಿಕರಿಗೆ ಪೂರ್ಣ ಪ್ರಮಾಣದ ಬೇಸಿಗೆ ಬರುವ ಮೊದಲೇ ನೀರಿನ ಬಿಸಿ ತಟ್ಟುತ್ತಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಹುನಗುಂದ ಮತ್ತು ಇಳಕಲ್ಲ ಮಾರ್ಗವಾಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವುದಕ್ಕೆ ಪ್ರತ್ಯೇಕ ಕೊಳವೆಗಳನ್ನು ಅಳವಡಿಸಲಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೂ ಸದ್ಯಕ್ಕೆ ಕೊರತೆ ಇಲ್ಲ. ಆದರೆ ಸಮಸ್ಯೆ ಇರುವುದು ಪೂರೈಕೆಯಲ್ಲಿ ಎಂಬುದು ಪ್ರಮುಖ ಅಂಶ. ಪಟ್ಟಣದ ಗಡಿವರೆಗೆ ನೀರು ಸರಬರಾಜು ಮಾಡುವ ಹೊಣೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲೂಎಸ್‌ಬಿ)ಗೆ ಸೇರಿದ್ದರೆ. ಅಲ್ಲಿಂದ ವಾರ್ಡುಗಳಿಗೆ ಪೂರೈಸುವ ಕೆಲಸ ಪುರಸಭೆಯದ್ದಾಗಿದೆ. ಈ ಎರಡೂ ಸಂಸ್ಥೆಗಳು, ಜೆಸ್ಕಾಂ ಮಧ್ಯದ ಸಮನ್ವಯ ಕೊರತೆಯಿಂದ ಜನ ನೀರಿನ ತೊಂದರೆ ಅನುಭವಿಸುವಂತಾಗಿದೆ ಎಂಬ ಆರೋಪ ಇಲ್ಲಿ ಸಾಮಾನ್ಯ.

ಪಟ್ಟಣದ 23 ವಾರ್ಡುಗಳ ಪೈಕಿ 1 ರಿಂದ 7ನೇ ವಾರ್ಡುಗಳಿಗೆ ಮಾತ್ರ ದಿನವಿಡಿ (24x7) ನೀರು ಪೂರೈಕೆ ವ್ಯವಸ್ಥೆ ಇದ್ದರೆ ಉಳಿದ ವಾರ್ಡುಗಳಿಗೆ ಪುರಸಭೆಗೆ ಸೇರಿದ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ತಿಳಿದಾಗ ನೀರು ಬಿಡಲಾಗುತ್ತಿದೆ ಹಾಗಾಗಿ ದಿನವಿಡಿ ನೀರು ಪೂರೈಕೆ ವ್ಯವಸ್ಥೆ ಎಂಬುದಕ್ಕೆ ಅರ್ಥವೇ ಇಲ್ಲ ಎನ್ನುತ್ತಾರೆ ಗೌರಿ ನಗರದ ನಿವಾಸಿ ವೀರಭದ್ರಪ್ಪ.

2, 3 ಮತ್ತು 4ನೇ ವಾರ್ಡುಗಳಲ್ಲಿ ನೀರಿನ ಅಭಾವ ಹೆಚ್ಚಿದೆ. ಇತ್ತೀಚೆಗೆ 5ನೇ ವಾರ್ಡಿನ ಸದಸ್ಯರ ಮನೆಯ ಮುಂದೆಯೇ ಅಲ್ಲಿಯ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಧರಣಿ ನಡೆಸಿದ್ದರು. ಮುಲ್ಲಾರ ಓಣಿ, ಗೌಡರ ಓಣಿ, ತೆಗ್ಗಿನ ಓಣಿ ಇನ್ನೂ ಕೆಲವೆಡೆ ಜನ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ.

ದುರಸ್ತಿ: ಪಟ್ಟಣದ ಬಳಿ ಇರುವ ವಾಲ್ವ್ ದುರಸ್ತಿಗೆ ಬಂದಿರುವುದರಿಂದ ಕಳೆದ ಮೂರು ವಾರಗಳಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್‌ ಅಭಾವವೂ ಇದೆ. ಹುನಗುಂದ ಇಳಕಲ್‌ದಲ್ಲಿ ವಿದ್ಯುತ್‌ ಸಮಸ್ಯೆಯಾದರೆ ಇಲ್ಲಿಗೆ ನೀರು ಬರುವುದಿಲ್ಲ. ಅಥವಾ ಪಟ್ಟಣದಲ್ಲಿ ವ್ಯತ್ಯಯವಾದರೂ ಓವ್ಹರ್‌ಹೆಡ್‌ ಟ್ಯಾಂಕ್‌ಗೆ ನೀರು ಪಂಪ್‌ ಮಾಡಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಪುರಸಭೆ ಸಿಬ್ಬಂದಿ ತಿಳಿಸಿದರು.

ಚರಂಡಿಗೆ ನೀರು: ಈ ವ್ಯವಸ್ಥೆ ಇರುವ ಕೆಲ ವಾರ್ಡುಗಳಲ್ಲಿ ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ಒತ್ತಡ (ಪ್ರೆಷರ್) ಇಲ್ಲದ ಕಾರಣ ನೀರು ಬರುವುದೇ ಅಪರೂಪ. ಏಕೆಂದರೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಯಥೇಚ್ಛವಾಗಿ ನೀರು ಬಂದ್ದು ಹೆಚ್ಚಾಗಿ ಚರಂಡಿಗೆ ಹರಿಬಿಡಲಾಗುತ್ತಿದೆ. ಅಂಗಳ, ಗಾರ್ಡನ್‌ಗೆ ನೀರು ಹರಿಸುವುದು.

ಕಾರಿಡಾರ್, ಕಾರ್ ಇತರೆ ವಾಹನಗಳನ್ನು ತೊಳೆಯುವುದು ಎಲ್ಲ ಮುಗಿದ ಮೇಲೆ ನೀರನ್ನು ಚರಂಡಿಗೆ ಬಿಡುವುದು ಸಾಮಾನ್ಯ. ಯಾವ ಅಂಜಿಕೆ, ಅಳುಕು ಇಲ್ಲ. ಕೇಳುವವರೂ ಇಲ್ಲ. ಮೀಟರ್‌ಗಳು ಇದ್ದರೂ ಎರಡು ಮೂರು ವರ್ಷಗಳಿಂದಲೂ ರೀಡಿಂಗ್‌ ತೆಗೆದುಕೊಳ್ಳುವ ವ್ಯವಸ್ಥೆಯೇ ಇಲ್ಲ. ಕನಿಷ್ಟ ಶುಲ್ಕ ಮಾತ್ರ ಪುರಸಭೆ ಪಡೆಯುತ್ತಿದೆ. ಹಾಗಾಗಿ ಜನ ನೀರು ಪೋಲು ಮಾಡುತ್ತಾರೆ. ಇನ್ನೂ ಕೆಲವರು ನೀರಿಗಾಗಿ ಪರದಾಡುತ್ತಾರೆ ಎಂಬುದು ಸಾರ್ವಜನಿಕರಾದ ಉಮೇಶ ಪಾಟೀಲ, ಪ್ರಹ್ಲಾದ ಕುಲಕರ್ಣಿ ಇತರರು ಅಸಮಾಧಾನ ಹೊರಹಾಕಿದರು. ಶುಲ್ಕ ಪಡೆಯುವುದು ಬೇಡ ಕನಿಷ್ಟ ಯಾರು ಎಷ್ಟು ನೀರು ಬಳಸುತ್ತಾರೆ ಎಂಬುದನ್ನಾದರೂ ದಾಖಲಿಸುವ ಪ್ರಯತ್ನ ಪುರಸಭೆ ನಡೆಸಬೇಕಿತ್ತು ಎಂದರು.

**

ಪಟ್ಟಣಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿಯೇ ನೀರು ಪೂರೈಕೆ ಸ್ಥಿತಿ ಅತ್ಯುತ್ತಮವಾಗಿದೆ. ಸಾಕಷ್ಟು ಹಣ ಖರ್ಚಾದರೂ ಕೊಡ ನೀರಿಗೆ ಅಲೆದಾಡುವ ಸ್ಥಿತಿ ನಮ್ಮದು.
ನಾರಾಯಣಪ್ಪ ಗೋಂಧಳಿ, 2ನೇ ವಾರ್ಡಿನ ನಿವಾಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು