ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ನೀರಿನ ಸಂಪನ್ಮೂಲ, ಭಾವೈಕ್ಯದ ವಾರ್ಡ್‌

ಮಹಿಳೆಯರಿಗೂ ಬಯಲು ಶೌಚವೇ ಆಸರೆ, ನೀರಿದ್ದರೂ ಆಗದ ಸದ್ಬಳಕೆ
Last Updated 21 ಜೂನ್ 2022, 4:33 IST
ಅಕ್ಷರ ಗಾತ್ರ

ಕೊಪ್ಪಳ: ಕಣ್ಣು ಹಾಯಿಸಿದಲ್ಲೆಲ್ಲಾ ಗುಡ್ಡವೇ ಕಾಣುವ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್‌, ಕೊಪ್ಪಳ ನಗರಕ್ಕೆ ಭಾವೈಕ್ಯದ ತಾಣ ಎನಿಸಿದೆ. ಈ ವಾರ್ಡ್‌ ವ್ಯಾಪ್ತಿಯ ಹಲವೆಡೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದ್ದರೂ, ಅವು ಜನರಿಗೆ ಉಪಯೋಗಕ್ಕೆ ಬಂದಿಲ್ಲ.

ಈ ವಾರ್ಡ್‌ ವ್ಯಾಪ್ತಿಯಲ್ಲಿ ಮೆಹಬೂಬ್‌ ನಗರ, ಐತಿಹಾಸಿಕ ಸಿರಸಪ್ಪನಮಠ, ಶ್ರೀಶೈಲ ನಗರ ಮತ್ತು ಮಿಟ್ಟಿಕೇರಿಯ ಅರ್ಧಭಾಗದ ಬಡಾವಣೆಗಳು ಪ್ರಮುಖವಾಗಿ ಕಂಡುಬರುತ್ತವೆ. ಸಿರಸಪ್ಪನಮಠ ಭಾವೈಕ್ಯದ ಪ್ರದೇಶವಾಗಿದ್ದು ಇಲ್ಲಿ ಒಂದೇ ಜಾಗದಲ್ಲಿ ಹಿಂದೂ ಹಾಗೂ ಮುಸ್ಲಿಂ ಎರಡೂ ದೇವರಿಗೆ ಪೂಜೆ ನಡೆಯುತ್ತದೆ.

ಮೊಹರಂ ಸಮಯದಲ್ಲಿ ಕಾರಣಿಕ ಹೇಳಲಾಗುತ್ತದೆ. ಮುಸ್ಲಿಂ ಸಮಾಜದವರು ಮನೆಯಲ್ಲಿ ಮದುವೆ ಸೇರಿದಂತೆ ಹಲವು ಶುಭ ಕಾರ್ಯಗಳು ಇದ್ದಾಗ ಆಹ್ವಾನ ಪತ್ರಿಕೆಯನ್ನು ದೇವಸ್ಥಾನದಲ್ಲಿರುವ ಸಿರಸಪ್ಪಜ್ಜನ ಗದ್ದುಗೆ ಹಾಗೂ ಪಾಂಜಾ ಎರಡರ ಮುಂದಿಟ್ಟು ಆಶೀರ್ವಾದ ಪಡೆಯುತ್ತಾರೆ. ಇಲ್ಲಿನ ಜನರ ನಡುವೆಯೂ ಸೌಹಾರ್ದದ ಭಾವನೆಯಿದೆ.

’ತಿಂಥಣಿ ಮೌನೇಶ್ವರ ವಂಶಸ್ಥರಿಂದಲೇ ಸಿರಸಪ್ಪಜ್ಜನ ಗದ್ದುಗೆಗೆ ಪೂಜೆ ನಡೆಯುತ್ತದೆ. ಅಲ್ಲಿರುವಂತೆಯೇ ಇಲ್ಲಿಯೂ ಸೌಹಾರ್ದದ ವಾತಾವರಣವಿದೆ. ಮೊಹರಂ ಜೋರಾಗಿ ನಡೆಯುತ್ತದೆ‘ ಎಂದು ದೇವಸ್ಥಾನದ ಅರ್ಚಕ ಅಯ್ಯಂದ್ರ ಸ್ವಾಮಿ ಹೇಳುತ್ತಾರೆ.

ಬಳಕೆಗೆ ಬಾರದ ಸೌಲಭ್ಯ: ಈ ಭಾಗದಲ್ಲಿರುವ ಪ್ರಾಕೃತಿಕ ಸಂಪತ್ತಿನ ಅನುಕೂಲವನ್ನು ಸ್ಥಳೀಯರು ಪಡೆದುಕೊಳ್ಳುತ್ತಿಲ್ಲ. ಮಳೆಯಾದಾಗ ಸಿರಸಪ್ಪನ ಕೆರೆಯ ಹಿಂಭಾಗದ ಗುಡ್ಡದಿಂದ ಹರಿದು ಬರುವ ನೀರು ಕೆರೆಯಲ್ಲಿ ಸಂಗ್ರಹವಾಗುತ್ತದೆ. ಸ್ಥಳೀಯ ಆಡಳಿತ ಆ ಕೆರೆಯನ್ನು ಸ್ವಚ್ಛಗೊಳಿಸಿದರೆ ಸುತ್ತಮುತ್ತಲಿನ ಜನರಿಗೆ ಉತ್ತಮ ಪಿಕ್‌ನಿಕ್‌ ತಾಣವಾಗುತ್ತಿತ್ತು. ಆದರೆ, ಕೆರೆಯಲ್ಲಿ ಕಸದ ರಾಶಿ ತುಂಬಿಕೊಂಡಿದೆ. ನೀರು ಪಾಚಿಗಟ್ಟಿ ಹಸಿರುಮಯವಾಗಿದೆ. ಸುತ್ತಲಿನ ಜನರಿಗೆ ಗಬ್ಬು ವಾಸನೆ ಬರುತ್ತಿದೆ.

2011ರ ಜನಸಂಖ್ಯೆಯ ಪ್ರಕಾರ ಈ ವಾರ್ಡ್‌ನಲ್ಲಿ 2,100ಕ್ಕೂ ಹೆಚ್ಚು ಜನರಿದ್ದಾರೆ. 700ರಿಂದ 800 ಮನೆಗಳು ಇವೆ. ಶೇ 50ರಷ್ಟು ಮನೆಗಳು ಕೊಳೆಗೇರಿಗಳಲ್ಲಿವೆ. ಈಗ ಅಂಕಿಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ತೀರಾ ಚಿಕ್ಕದೂ ಅಲ್ಲ, ದೊಡ್ಡದೂ ಅಲ್ಲ ಎನ್ನುವಂತಿದೆ ವಾರ್ಡ್‌. ಮಿಟ್ಟಿಕೇರಿಯ ಬಡಾವಣೆಗಳಲ್ಲಿ ನಗರಸಭೆ ವತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಲಾಗಿದೆ. ನಿರ್ವಹಣೆಯಿಲ್ಲದ ಕಾರಣ ಶೌಚಾಲಯದಲ್ಲಿ ಕಾಲಿಡಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಆ ಬಡಾವಣೆಯ ಹೆಣ್ಣುಮಕ್ಕಳು ಕತ್ತಲಾಗುವುದನ್ನೇ ಎದುರು ನೋಡುತ್ತಿರುತ್ತಾರೆ. ಸಂಜೆಯಾದ ಬಳಿಕ ಬಯಲು ಶೌಚಕ್ಕೆ ತೆರಳುತ್ತಾರೆ.

’ಬಯಲು ಶೌಚಾಲಯದಲ್ಲಿ ಕಾಲಿಟ್ಟರೆ ಜೀವವೇ ಹೋಗುತ್ತದೆ‘ ಎಂದು ಮಿಟ್ಟಿಕೇರಿ ನಿವಾಸಿ ವಿಶ್ವನಾಥ ದೊಡ್ಡಮನಿ ಆತಂಕ ವ್ಯಕ್ತಪಡಿಸುತ್ತಾರೆ.

ಮೆಹಬೂಬ್‌ ನಗರದಲ್ಲಿ ಕುಡಿಯುವ ನೀರು ಪೂರೈಕೆ ಚೆನ್ನಾಗಿದ್ದು, ಕಸ ವಿಲೇವಾರಿ, ಚರಂಡಿ ಸಮಸ್ಯೆಯೇ ಜನರನ್ನು ಕಾಡುತ್ತಿದೆ. ಕಸ ವಿಲೇವಾರಿಗೆ ನಿತ್ಯ ಬರುವುದಿಲ್ಲ. ಆದ್ದರಿಂದ ಜನ ರಸ್ತೆ ಬದಿಯೇ ಕಸ ಎಸೆಯುವುದು ಕಂಡುಬಂತು. ತಿಂಗಳಿಗೆ ಒಂದು ಸಲ ಚರಂಡಿ ಸ್ವಚ್ಛಗೊಳಿಸಿದರೆ ಅದೇ ಹೆಚ್ಚು ಎನ್ನುವಂತಾಗಿದೆ.

’ಅಭಿವೃದ್ಧಿಗೆ ಪ್ರಯತ್ನ‘
20 ವರ್ಷಗಳಷ್ಟು ಹಳೆಯದಾದ ಮೆಹಬೂಬ್‌ ನಗರ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ಅಭಿವೃದ್ಧಿಯಾಗಿಲ್ಲ. ಚರಂಡಿ, ರಸ್ತೆ ಮಾಡಬೇಕಾಗಿದೆ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಹಿಂದಿನ ಜನಗಣತಿ ಪ್ರಕಾರ ನೀಡಲಾಗುತ್ತಿರುವ ಅನುದಾನದಲ್ಲಿ ಅಭಿವೃದ್ಧಿ ಕಷ್ಟವಾಗಿದೆ. ಈ ಸಮಸ್ಯೆಯ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದು ನಗರಸಭೆಯ ಒಂದನೇ ವಾರ್ಡ್‌ನ ಸದಸ್ಯೆ ಜರೀನಾಬೇಗಂ ಖಾಜಾಸಾಬ್‌ ಅರಗಂಜಿ ಹೇಳಿದರು.

*
ಬಹಿರ್ದೆಸೆಗೆ ಬಯಲು ಶೌಚಾಲಯವೇ ಗತಿ. ಸಾರ್ವಜನಿಕ ಶೌಚದಲ್ಲಿ ಕಾಲಿಡಲೂ ಆಗುವುದಿಲ್ಲ. ತುರ್ತು ದುರಸ್ತಿ ಅಗತ್ಯವಿದೆ.
-ಈರಮ್ಮ ಹೊಸಮನಿ, ಮಿಟ್ಟಿಕೇರಿ ಓಣಿ ನಿವಾಸಿ

*
ಮೆಹಬೂಬ್‌ ನಗರದಲ್ಲಿ ಬೀದಿ ದೀಪಗಳಿಲ್ಲ, ಚರಂಡಿ ಸ್ವಚ್ಛ ಮಾಡುವುದಿಲ್ಲ. ಹೀಗಾಗಿ ಜನರಿಗೆ ಮುಕ್ತವಾಗಿ ಓಡಾಡುವುದೇ ಕಷ್ಟವಾಗಿದೆ.
-ಶಂಕರಪ್ಪ ಬಿ., ಮೆಹಬೂಬ್‌ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT