'ಕಲಹದಿಂದ ಅತ್ತೆ ಸೊಸೆ ಪ್ರತ್ಯೇಕವಾಗಿದ್ದೇವೆ'

7
ಜುಮಲಾಪುರ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದ ವಸತಿ ಯೋಜನೆ ದುರ್ಬಳಕೆ ಪ್ರಕರಣ

'ಕಲಹದಿಂದ ಅತ್ತೆ ಸೊಸೆ ಪ್ರತ್ಯೇಕವಾಗಿದ್ದೇವೆ'

Published:
Updated:
Deccan Herald

ಕುಷ್ಟಗಿ: 'ಮೊದಲು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು. ನಂತರ ಪರಸ್ಪರರ ಮಧ್ಯೆ ಕಲಹ ಉಂಟಾಗಿದ್ದರಿಂದ ಬೇರೆಯಾಗಿದ್ದು, ಅತ್ತೆ ಸೊಸೆ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದೇವೆ' ಜುಮಲಾಪುರ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದ ವಸತಿ ಯೋಜನೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫಲಾನುಭವಿ ಮಲ್ಲಮ್ಮ ಮರಟಗೇರಿ ಎಂಬುವವರು ನೀಡಿರುವ ಸ್ಪಷ್ಟನೆ ಇದು.

ಅತ್ತೆ ಸೊಸೆಗೆ ಒಂದೆ ಮನೆ ಎರಡು ಬಿಲ್‌ ಕುರಿತು ತಮ್ಮ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಆಗಸ್ಟ್‌ 8 ರಂದು ಪತ್ರ ಬರೆದಿರುವ ಅವರು, ವಸತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

2012-13ರಲ್ಲಿ ತಮಗೆ ಮನೆ ಮಂಜೂರಾಗಿದ್ದರೂ ಆರ್ಥಿಕ ಅನಾನುಕೂಲದಿಂದ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಮನೆಯಲ್ಲಿ ಕಲಹ ಆರಂಭಗೊಂಡಿದ್ದರಿಂದ ಕುಟುಂಬ ಒಡೆದು ಸೊಸೆ ಶಶಿಕಲಾ ಮರಟಗೇರಿ ಅವರು ಪ್ರತ್ಯೇಕವಾಗಿ ವಾಸವಾಗಿದ್ದರು. ನಂತರ ಅವರ ಹೆಸರಿಗೂ 2013-14ನೇ ವರ್ಷದಲ್ಲಿ ಮನೆ ಮಂಜೂರಾಗಿತ್ತು. ಆದರೆ ನಿವೇಶನ ಇಲ್ಲದ ಕಾರಣ ತಮ್ಮ ನಿವೇಶನದಲ್ಲಿ ಅರ್ಧ ಭಾಗ ಬಿಟ್ಟುಕೊಟ್ಟಿದ್ದು, ಅದರಲ್ಲಿಯೇ ಅವರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಅತ್ತೆ ಮಲ್ಲಮ್ಮ ಮರಟಗೇರಿ ಪತ್ರದಲ್ಲಿ ವಿವರಿಸಿದ್ದಾರೆ.

ಕ್ರಿಮಿನಲ್‌ ಕೇಸ್‌: ಅದೇ ರೀತಿ ತಮ್ಮ ವಿರುದ್ಧ ದೂರು ಸಲ್ಲಿಸಿರುವ ದೊಡ್ಡಬಸವ ಗುರಿಕಾರ ಎಂಬುವವರು ಒಳ್ಳೆಯ ಮನುಷ್ಯವೇನಲ್ಲ, ಜುಮಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಂಗಮ್ಮ ಗುರಿಕಾರ ಪುತ್ರನಾಗಿದ್ದು, ವಿವಿಧ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಚೆಕ್‌ಗೆ ಅಧಿಕಾರಿಯ ಸಹಿ ನಕಲು ಮಾಡಿರುವುದಕ್ಕೆ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಹೀಗಿದ್ದೂ ಬೇರೆಯವರ ವಿರುದ್ಧ ದೂರು ನೀಡಿರುವುದು ಹಾಸ್ಯಾಸ್ಪದ. ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಈ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವಂತೆ ಮಲ್ಲಮ್ಮ ಮರಟಗೇರಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 'ಮನೆಯೊಂದು ಬಾಗಿಲು ಎರಡು ಅತ್ತೆ ಸೊಸೆ ಫಲಾನುಭವಿಗಳು' ವರದಿ ಆಗಸ್ಟ್‌ 8ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಪ್ರಕರಣ ಮುಚ್ಚಿಹಾಕುವ ತಂತ್ರ; ಆರೋಪ

ಕುಷ್ಟಗಿ: ತಾಲ್ಲೂಕಿನ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿಯಲ್ಲಿ ವಸತಿ ಯೋಜನೆ ದುರ್ಬಳಕೆಗೆ ಸಂಬಂಧಿಸಿದ ದೂರು ತಾಲ್ಲೂಕು ಪಂಚಾಯಿತಿಗೆ ಸಲ್ಲಿಕೆಯಾಗುತ್ತಿದ್ದಂತೆ ಒಂದೇ ಆಗಿದ್ದ ಮನೆ ಬೆಳಗಾಗುತ್ತಲೇ ಎರಡಾಗಿರುವುದಕ್ಕೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅತ್ತೆ ಸೊಸೆ ಹೆಸರಿನಲ್ಲಿ ಒಂದೇ ಮನೆಗೆ ಎರಡು ಬಿಲ್‌ಗಳನ್ನು ಪಾವತಿಸಿರುವ ಬಗ್ಗೆ ಆ.7 ರಂದು ದೂರು ಸಲ್ಲಿಸಲಾಗಿತ್ತು. ತನಿಖೆಗೆ ಅಧಿಕಾರಿಗಳು ಬರಲಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ತಾಲ್ಲೂಕು ಪಂಚಾಯತಿಯಲ್ಲಿ ವಸತಿ ಯೋಜನೆ ನಿರ್ವಹಿಸುತ್ತಿರುವ ಸಿಬ್ಬಂದಿಯೇ ಫಲಾನುಭವಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಹಾಗಾಗಿ ಆಗಸ್ಟ್‌ 8ರ ಬೆಳಿಗ್ಗೆ ಮನೆಯ ಮಧ್ಯೆ ದಿಢೀರನೆ ಗೋಡೆ ಪ್ರತ್ಯಕ್ಷವಾಗಿದ್ದು ರಾತ್ರೋರಾತ್ರಿ ನಿರ್ಮಾಣ ಕೆಲಸ ಆರಂಭಿಸಿ ಬೆಳಗಾಗುವುದರ ಒಳಗೆ ಎರಡು ಮನೆಗಳು ಎಂಬಂತೆ ಬಿಂಬಿಸಲಾಗಿದೆ ಎಂದು ಅಡವಿಬಾವಿ ಗ್ರಾಮಸ್ಥರು ತಿಳಿಸಿದ್ದಾರೆ.

ಒಂದೇ ಮನೆಯ ಅಳತೆಯ ಜಾಗದಲ್ಲಿ ಎರಡು ಮನೆಗಳು ನಿರ್ಮಾಣಗೊಳ್ಳು ಸಾಧ್ಯವೇ ಇಲ್ಲ, ಮಧ್ಯೆ ಒಂದು ಗೋಡೆ ನಿರ್ಮಿಸಿದ್ದರೂ ಮನೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮುಚ್ಚಿಕೊಳ್ಳಲು ಮತ್ತು ಪ್ರಕರಣವನ್ನು ಮುಚ್ಚಿಹಾಕುವ ದುರುದ್ದೇಶದಿಂದ ಫಲಾನುಭವಿ ಮತ್ತು ವಸತಿ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿ ಈ ಕುತಂತ್ರ ರೂಪಿಸಿದ್ದಾರೆ ಎಂದು ದುರ್ಬಳಕೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಿರುವ ದೊಡ್ಡಬಸವ ಗುರಿಕಾರ ತಿಳಿಸಿದ್ದಾರೆ.

ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ವಾಸ್ತವ ವರದಿಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕಾಗುತ್ತದೆ, ಇಲ್ಲದಿದ್ದರೆ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಗುರಿಕಾರ ಹೇಳಿದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !