ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಕಳಪೆ ಕಾಮಗಾರಿ ವಿರೋಧಿಸಿ ವ್ಯಾಪಕ ಟೀಕೆ

ಕಾಮಗಾರಿ ಮುಗಿದು ಒಂದೇ ದಿನದಲ್ಲಿ ಕಿತ್ತು ಹೋದ ರಸ್ತೆ
Last Updated 26 ನವೆಂಬರ್ 2022, 5:25 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಚೆಂಡಿನಹಾಳ ಗ್ರಾಮದಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿ ಒಂದು ದಿನ ಕಳೆಯುವಷ್ಟರಲ್ಲಿಯೇ ಕಿತ್ತು ಹೋಗಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕಾಮಗಾರಿಯ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಗ್ರಾಮಸ್ಥ ಮಂಜುನಾಥ್ ಸಜ್ಜನ್ ಮಾತನಾಡಿ ‘ಲೋಕೋಪಯೋಗಿ ಇಲಾಖೆಯಿಂದ ಚಂಡಿನಹಾಳ ಗ್ರಾಮದಲ್ಲಿ ₹12 ಲಕ್ಷ ವೆಚ್ಚದಲ್ಲಿ 300 ಮೀಟರ್ ಡಾಂಬರ್‌ ರಸ್ತೆ ನಿರ್ಮಿಸಲಾಗಿದೆ. ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಚೆಲ್ಲಿ ಡಾಂಬರು ಹರಡಿ ಗುತ್ತಿಗೆದಾರ ಕೈ ತೊಳೆದುಕೊಂಡಿದ್ದಾರೆ. ಡಾಂಬರು ರಸ್ತೆಯನ್ನು ಉಜ್ಜಿದರೆ ಡಾಂಬರು ಪುಡಿ, ಮಣ್ಣು ಬರುತ್ತಿದೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೆಪ ಮಾತ್ರಕ್ಕೆ ಗುತ್ತಿಗೆದಾರರಾಗಿದ್ದು, ಎಲ್ಲವೂ ಬಿಜೆಪಿ ಗುತ್ತಿಗೆದಾರ ಬಾಪುಗೌಡ ಎಂಬುವರು ಕೆಲಸ ನಿರ್ವಹಿಸಿದ್ದಾರೆ’ ಎಂದು ಆರೋಪಿಸಿರುವ ಅವರು ‘ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕುದುರಿಮೋತಿಯ ಅಮರೇಶ ತಲ್ಲೂರ ಎಂಬುವರು ಪ್ರತಿಕ್ರಿಯಿಸಿ ‘ಗುತ್ತಿಗೆದಾರ ರಸ್ತೆ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಸಚಿವ ಹಾಲಪ್ಪ ಆಚಾರ್‌ ಅವರು ‘ಕಾಮಗಾರಿ ಪರಿಶೀಲಿಸಿ ಕ್ರಮವಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೊಪಯೋಗಿ ಇಲಾಖೆ ಎಂಜಿನಿಯರ್‌ ಶರಣಬಸಪ್ಪ ‘300 ಮೀಟರ್ ರಸ್ತೆ ಇದಾಗಿದ್ದು ₹ 12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಸರಿಯಾಗಿ ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT