ಅಳವಂಡಿ (ಹಲಗೇರಿ): ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಶುಕ್ರವಾರ ಆರಂಭವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಕ್ಷಾ ಸಂಜೀವಿನಿ ಒಕ್ಕೂಟದ ಎರಡನೇ ಹಂತದ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ ತಯಾರಿಕಾ ಕಾರ್ಯಾಗಾರಕ್ಕೆ ಪಿಡಿಒ ಅಶೋಕ ರಾಂಪೂರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ದಿ ಯೋಜನೆ ತರಬೇತಿ, ಹಣಕಾಸು ನಿರ್ವಹಣೆಯ ತರಬೇತಿಗಳು ಸಂಜೀವಿನಿ ಒಕ್ಕೂಟಗಳಿಗೆ ನೀಡುವ ಮೂಲಕ, ಸಾಮರ್ಥ್ಯ ಬಲವರ್ಧನೆ ಮಾಡುತ್ತಿರುವುದು ಸಂತಸ ವಿಷಯವಾಗಿದೆ. ತರಬೇತಿಗಳಿಂದ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಬೇಕು. ತರಬೇತಿ ಕಾರ್ಯಾಗಾರವು ಸೆಪ್ಟೆಂಬರ್ 16ರವರೆಗೆ ನಡೆಯಲಿದ್ದು, ಮಹಿಳೆಯರು ಪಾಲ್ಗೊಂಡು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15 ರಂದು ಬೆಳಿಗ್ಗೆ 9 ರಿಂದ 10 ಗಂಟೆವರೆಗೆ ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದಿಂದ ಆರಂಭಗೊಂಡು ಮುನಿರಾಬಾದ್ ಜಲಾಶಯದವರೆಗೆ ಒಟ್ಟು 54.9 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು. ಸಾರ್ವಜನಿಕರು ಮಾನವ ಸರಪಳಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ತ್ರಿಭುವನೇಶ್ವರಿ, ಈರಣ್ಣ, ಅನ್ನಪೂರ್ಣ, ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ವೆಂಕಟೇಶ, ಬಸವರಾಜ, ಶೋಭಾ, ಸಲೀಮಾ, ಒಕ್ಕೂಟದ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಲಲಿತಮ್ಮ ಹಾಗೂ ಎಂಬಿಕೆ, ಎಲ್‌ಸಿಆರ್‌ಪಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.