ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಮಾಬೀ ಅಲ್ಲ ‘ರಾಜ’!

ಕೃಷಿ ಕಾಯಕದಲ್ಲಿ ಪುರುಷರಿಗೆ ಸರಿಸಮಾನ ಕೆಲಸ
Last Updated 8 ಮಾರ್ಚ್ 2020, 10:28 IST
ಅಕ್ಷರ ಗಾತ್ರ

ಹನುಮಸಾಗರ: ಆ ಮಹಿಳೆ ಬಲಗೈಯಲ್ಲಿ ಬಾರುಕೋಲು, ಎಡಗೈಯಲ್ಲಿ ರಂಟೆಯ ಮೇಳಿ ಹಿಡಿದು ಉಳುಮೆ ಮಾಡುತ್ತಿದ್ದರು. ಎತ್ತುಗಳು ಅವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವುದು ಕಾಣುತ್ತಿತ್ತು. ಆಗಾಗ ಸುಮಾರು 50 ಕಿಲೋ ಭಾರದ ರಂಟೆಯನ್ನು ಮೇಲಕ್ಕೆ ಎತ್ತಿ ಅದರಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಸವನ್ನು ತೆಗೆದು ಮತ್ತೆ ಚಾ... ಚಾ... ಎಂದಾಗ ಎತ್ತುಗಳು ಮುಂದೆ ಸಾಗುತ್ತಿದ್ದವು... ಬಳಿಕ ಸಂಜೆ ಎಲ್ಲ ಕೆಲಸಗಳು ಮುಗಿದ ಮೇಲೆ ತನ್ನ ಕುಟುಂಬದವರನ್ನು ಹಾಗೂ ನೆರೆಹೊರೆಯ ಹೊಲಗಳ ರೈತರನ್ನು ತನ್ನ ಚಕ್ಕಡಿಯಲ್ಲಿ ಕೂರಿಸಿಕೊಂಡು ನುರಿತ ರೈತರಂತೆ ಠಾಕು-ಠೀಕಿನಿಂದ ಚಕ್ಕಡಿ ಓಡಿಸುತ್ತಾ ಮನೆಯತ್ತ ಹೊರಟರು.

– ಸುಮಾರು 45ರ ಹರೆಯದ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ರಾಜಮಾಬಿ ಕನಕಾಪೂರ ಸ್ವಾವಲಂಬಿಯಾಗಿ ಕೃಷಿ ಮಾಡುತ್ತಿರುವ ಪರಿ ಇದು.

ಮನೆಯ ಹಿರಿಯ ಮಗಳು ರಾಜಮಾಬೀ ಸುಮಾರು 30 ವರ್ಷಗಳಿಂದ ಕುಟುಂಬದ ಭಾರ ಹೊತ್ತು ಸಾಗಿಸುತ್ತಿದ್ದಾರೆ. ರಾಜಮಾಬೀಗೆ ಓದಲು ಬರೆಯಲು ಬಾರದೇ ಇದ್ದರೂ ಸಾಮಾನ್ಯ ಜ್ಞಾನ ಸಾಕಷ್ಟಿದೆ. ಕುಟುಂಬ ನಿರ್ವಹಣೆ ಮಾಡುವ ಜಾಣ್ಮೆಯೂ ಇದೆ. ಒಕ್ಕಲುತನದಲ್ಲಿ ಎಳೆಯ ವಯಸ್ಸಿನಲ್ಲಿಯೇ ತಂದೆಯಿಂದ ಸಾಕಷ್ಟು ಜ್ಞಾನ ಪಡೆದುಕೊಂಡಿರುವ ರಾಜಮಾಬೀ, ಹತ್ತು ವರ್ಷದ ಪೋರಿಯಾಗಿದ್ದಾಗಲೇ ಚಕ್ಕಡಿ ಹೊಡೆದು ತಂದೆಯಿಂದ ಸೈ ಎನಿಸಿಕೊಂಡಿದ್ದಳು.

ಹರಗುವುದು, ಮಡಿಕೆ ಹೊಡೆಯುವುದು, ರಾಶಿ ಮಾಡುವುದು, ಎತ್ತುಗಳನ್ನು ಸಾಕುವುದು, ಮಾರುಕಟ್ಟೆಗೆ ಫಸಲುಗಳನ್ನು ಸಾಗಿಸುವುದು, ವ್ಯವಹಾರ... ಎಲ್ಲ ಕೆಲಸಗಳು ರಾಜಮಾಬೀ ಹೆಗಲ ಮೇಲೆ ಇವೆ. ಹಾಗಂತ ಇವೆಲ್ಲ ಭಾರದ ಕೆಲಸ ಎಂದು ಯಾವತ್ತೂ ತಿಳಿದುಕೊಂಡಿಲ್ಲ. ಮನೆಯಲ್ಲಿರುವ ಒಬ್ಬ ಹಿರಿಯ ಮಗ ಮಾಡಬೇಕಾಗಿರುವ ಎಲ್ಲ ಬಗೆಯ ಕೆಲಸಗಳನ್ನು ಮಾಡುವುದು ತನ್ನ ಜವಾಬ್ದಾರಿ ಎಂದು ತಿಳಿದುಕೊಂಡಿದ್ದಾಳೆ. ಚಟುವಟಿಕೆಗಳನ್ನು ನಿರ್ವಹಿಸುವುದರ ಜೊತೆಗೆ ವೃದ್ಧ ತಂದೆ– ತಾಯಿಯನ್ನು ಆರೋಗ್ಯ ಪೂರ್ಣವಾಗಿ ಜೋಪಾನ ಮಾಡುತ್ತಿದ್ದಾರೆ.

ರಾಜಮಾಬೀ ಇಡೀ ದಿನ ಜಮೀನಿನಲ್ಲಿ ದುಡಿದರೂ ದಣಿವು ಎಂಬುದೇ ಇಲ್ಲ. ಸದಾ ನಗು ಮುಖದ ಇವರು ಸಂಜೆ ಹೊತ್ತಿನಲ್ಲಿ ಮನೆಯ ಮುಂದೆಯೇ ಪುಟ್ಟದಾದ ಅಂಗಡಿಯನ್ನು ತೆರೆಯತ್ತಾರೆ. ಮಿರ್ಚಿ, ಚಹಾ, ಗಿರಮಿಟ್ಟು ಮಾಡಿ ಮಾರಿ ಒಂದಿಷ್ಟು ಸಂಪಾದಿಸುತ್ತಾರೆ. ಅದೇ ಅಂಗಡಿಯಲ್ಲಿ ರಾತ್ರಿ ಹೊತ್ತಿಗಾಗಿ ಅಡುಗೆ ಬೇಯಿಸಿ ಮನೆ ಮಂದಿಗೆಲ್ಲ ಉಣಬಡಿಸಿದರೆ ರಾಜಮಾಳ ಅಂದಿನ ಕೆಲಸ ಮುಗಿದಂತೆ.

‘ನನಗೆ ರಾಜಮಾ ಮಗ ಇದ್ಹಂಗ, ಗಂಡಸರು ಮಾಡುವ ಎಲ್ಲಾ ಕೃಷಿ ಕೆಲಸಗಳನ್ನೂ ನನ್ನ ರಾಜಾ ಮಾಡಿ ಮನೆಗೆ ಅನ್ನ ಹಾಕುತ್ತಾಳೆ’ ಎಂದು ತಂದೆಖಾಸೀಮಸಾಬ ಕನಕಾಪೂರ ಹೆಮ್ಮೆ ಪಡುತ್ತಾರೆ.

ಎಲ್ಲರಂತೆ ಮದುವೆಯಗಿ ಗಂಡನ ಮೆನೆ ಸೇರಬೇಕಾಗಿದ್ದ ರಾಜಮಾಬೀ ಕುಟುಂಬದ ಭಾರ ಹೊರುವುದಕ್ಕಾಗಿ ತನ್ನ ವೈಯಕ್ತಿಕ ಬದುಕನ್ನೇ ಮರೆತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT