ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ಜವಾಬ್ದಾರಿ ಹೊತ್ತ ಯುವತಿಯರು

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಣೆ
Last Updated 8 ಮಾರ್ಚ್ 2020, 10:27 IST
ಅಕ್ಷರ ಗಾತ್ರ

ಮುನಿರಾಬಾದ್: ಗ್ರಾಮೀಣ ಪ್ರದೇಶದಲ್ಲಿ ಹಲವು ಕಷ್ಟಗಳನ್ನು ಸಹಿಸಿಕೊಂಡು, ಉನ್ನತ ಪದವಿ ಪಡೆದು ತಂದೆಯ ಸ್ಥಾನದಲ್ಲಿ ನಿಂತು ಕುಟುಂಬ ನಿರ್ವಹಣೆ ಮಾಡುತ್ತಿರುವ ಇಲ್ಲಿನ ಇಬ್ಬರು ಯುವತಿಯರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

ಇಲ್ಲಿಗೆ ಸಮೀಪದ ಶಿವಪುರಗ್ರಾಮದ ಲಕ್ಷ್ಮೀಬಾಯಿ ದಿ.ತಿಮ್ಮಣ್ಣ ವಗ್ಗಾ ಅವರ ಪುತ್ರಿ ನಾಗವೇಣಿ. ಶಿವಪುರದಲ್ಲಿ 10ನೇ ತರಗತಿವರೆಗೆ ನಂತರ ಬಾಗಲಕೋಟೆಯಲ್ಲಿ ಪಿಯು, ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತ ತನ್ನ ತಂದೆಯ ಸ್ಥಾನದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

‘ಕೇವಲ ಎರಡು ವರ್ಷದವಳಿದ್ದಾಗ ನನ್ನ ತಂದೆ ಅಪಘಾತದಲ್ಲಿ ತೀರಿಹೋದರು. ರೊಟ್ಟಿ, ಸಿಹಿ ತಿಂಡಿ ಮಾಡಿ ಮಾರಾಟ ಮಾಡುತ್ತ ಒಟ್ಟು ಮೂರು ಜನ ಹೆಣ್ಣು ಮಕ್ಕಳನ್ನು ಸಾಕಿದ ನಮ್ಮ ತಾಯಿಯೇ ನಮಗೆ ದೇವರು. ಇಬ್ಬರು ಅಕ್ಕಂದಿರ ಮದುವೆಯಾಗಿದೆ. ಎಂತಹ ಕಷ್ಟದಲ್ಲೂ ಎದೆಗುಂದದೆ ನಮ್ಮನ್ನು ಸಾಕಿ, ಶಾಲೆಕಲಿಸಿದ ನಮ್ಮತಾಯಿಯ ತಾಳ್ಮೆಯೇ ನಮಗೆ ಆದರ್ಶ’ ಎನ್ನುತ್ತಾರೆ.

ಇನ್ನೊಬ್ಬ ಯುವತಿ ಅನ್ನಪೂರ್ಣ ದಿ.ವೀರಭದ್ರಪ್ಪ ಅಂಗಡಿ ಅವರ ಪುತ್ರಿ ಉಷಾ. ಗ್ರಾಮೀಣಪ್ರದೇಶ ಹುಲಿಗಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಪಿಯು ವ್ಯಾಸಂಗಕ್ಕೆ ಧಾರವಾಡದ ಕಿಟೆಲ್‍ಕಾಲೇಜಿಗೆ ಸೇರಿದಳು. ಹತ್ತನೇ ತರಗತಿಯಲ್ಲಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ ಯುವತಿಗೆ ತಾನು ಓದಿ ಕೆಲಸಪಡೆದು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳಬೇಕೆಂಬ ಕನಸು ಕಟ್ಟಿದಳು. ಬಾಗಲಕೋಟೆಯಲ್ಲಿ ಸಿವಿಲ್‍ಎಂಜಿನಿಯರಿಂಗ್ ಪದವಿಪಡೆದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಬಟ್ಟೆ ಹೊಲಿದು ಕುಟುಂಬ ಸಾಕುತ್ತಿದ್ದ ತಾಯಿಯ ಭಾರ ಕಡಿಮೆ ಮಾಡಲು ಉನ್ನತವ್ಯಾಸಂಗ ಮಾಡಿ ಉದ್ಯೋಗ ಪಡೆಯುವ ಏಕಮೇಯ ಕಾರಣಕ್ಕೆ ಕಷ್ಟಪಟ್ಟು ಓದಿ ತಾಯಿಯ ಆರೈಕೆಯ ಜೊತೆ ತಮ್ಮನನ್ನೂ ಎಂಜಿನಿಯರಿಂಗ್ ಪದವಿ ಮಾಡಿಸಿದ ಉಷಾ, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಬದುಕಲೇ ಬೇಕೆಂಬ ಛಲ, ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು ಖಂಡಿತ ಎಂದು ಹೇಳುವ ಅವರು ‘ತಂದೆಯ ಆದರ್ಶ, ತಾಯಿಯ ಪ್ರೀತಿ ನನ್ನನ್ನು ಈ ಮಟ್ಟಕ್ಕೆ ತಂದಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಬ್ಬರು ಯುವತಿಯರ ತಾಯಂದಿರು ಕಷ್ಟಪಟ್ಟು ಮಕ್ಕಳನ್ನು ಓದಿಸಿದ ಕಾರಣಕ್ಕೆ ಇಂದು ಯುವತಿಯರು ಉದ್ಯೋಗ ಮಾಡುತ್ತ ಕುಟುಂಬ ನಿರ್ವಹಣೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT