ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಾಧಕರು ಮಾದರಿ ಆಗಲಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಕಾನೂನು ಅರಿವು--–ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಸಲಹೆ
Last Updated 9 ಮಾರ್ಚ್ 2021, 3:40 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಮಾದರಿಯನ್ನಾಗಿಸಿಕೊಂಡು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು’ ಎಂದು ಪ್ರಧಾನ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಲ್.ವಿಜಯಲಕ್ಷ್ಮಿದೇವಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾವಕೀಲರ ಒಕ್ಕೂಟ ಬೆಂಗಳೂರು ಹಾಗೂ ಎಲ್ಲ ನ್ಯಾಯಾಲಯಗಳ ಮಹಿಳಾ ಸಿಬ್ಬಂದಿ ಸಹಯೋಗದಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ-2021 ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸರೋಜಿನಿ ನಾಯ್ಡು, ಅಕ್ಕಮಹಾದೇವಿ, ಶಾರದಾದೇವಿ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ ಅವರಂಥ ಸಾಧಕರು ನಮಗೆ ಮಾದರಿಯಾಗಬೇಕು. ಹಲವಾರು ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಹೋರಾಟದ ಮೂಲಕ ದಿಟ್ಟತನ ತೋರಿದ್ದಾರೆ. ಅಲ್ಲದೇ ಸಾಮಾಜಿಕ ಸೇವೆಯಲ್ಲೂ ಮುಂದಿದ್ದಾರೆ. ಹಾಗಾಗಿ ಮಹಿಳಾ ಮಹನೀಯರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು’ ಎಂದರು.

‘ಪ್ರಸ್ತುತ ಪುರುಷರು ಶಿಕ್ಷಣವಂತರಾಗಿದ್ದರೂ ಕೂಡಾ ನೈತಿಕತೆ ಮತ್ತು ಸಂಸ್ಕಾರ ಬಲಪಡಿಸಿಕೊಳ್ಳುತ್ತಿಲ್ಲ. ಸಮಾನತೆ ಹಕ್ಕು ತಂದಿದ್ದರೂ ಕೂಡಾ ಸಮಾನತೆಗೆ ಎಷ್ಟರ ಮಟ್ಟಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಮಹಿಳಾ ಸಬಲೀಕರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಚರ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನಿನಡಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಬಿ.ಎಸ್.ರೇಖಾ ಮಾತನಾಡಿ, ನಾನು ಮಹಿಳೆಯಾಗಿ ಜನಿಸಿರುವುದು ನನ್ನ ಹೆಮ್ಮೆ. ಏಕೆಂದರೆ ಪುರುಷರು ಕೇವಲ ಕಚೇರಿಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ಆದರೆ ಮಹಿಳೆಯರು ಕಚೇರಿ ಹಾಗೂ ಮನೆಯಲ್ಲಿ ಎರಡೂ ಕಡೆಗಳಲ್ಲೂ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.

ಹಿರಿಯ ವಕೀಲರಾದ ಎ.ವಿ.ಕಣವಿ,ಪ್ಯಾನಲ್ ವಕೀಲೆ ಸುಮಂಗಲಾ ಸಿ.ಬಿ. ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್.ಮುರಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಂ.ಜಾಲವಾದಿ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್, ಪ್ರಧಾನ ಸಿವಿಲ್ ನ್ಯಾಯಾಧೀಶ ಮನು ಶರ್ಮಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ್‌ಕುಮಾರ್, ಬೆಂಗಳೂರಿನ ಮಹಿಳಾವಕೀಲರ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರ, ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ, ಪ್ರಧಾನ ಜಿಲ್ಲಾ ಮತ್ತುಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಎನ್.ಬಿ.ಸುರೇಖಾ, ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ, ಮಹಿಳಾ ಪ್ರತಿನಿಧಿ ಅಶ್ವಿನಿ ಪಾಟೀಲ, ರಾಜ್ಯ ವಕೀಲರ ಪರಿಷತ್ ಸದಸ್ಯ ಆಸೀಫ್ ಅಲಿ, ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಎಸ್.ಎಂ.ಮೆಣಸಿನಕಾಯಿ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ಹಮ್ಮಿಗಿ, ಕಾರ್ಯದರ್ಶಿ ಬಿ.ವಿ.ಸಜ್ಜನ್, ಸ್ವ ಕಾರ್ಯದರ್ಶಿ ಎಸ್.ಬಿ.ಪಾಟೀಲ, ಜಂಟಿ ಖಜಾಂಚಿ ಸುಭಾಸ್ ಬಂಡಿ ಮುಂತಾದವರು ಇದ್ದರು.

ಕಾರ್ಮಿಕರಿಗೆ ಸನ್ಮಾನ

ಹೇರೂರು (ಗಂಗಾವತಿ): ತಾಲ್ಲೂಕಿನ ಹೇರೂರು ಗ್ರಾ.ಪಂ. ವತಿಯಿಂದ ನಡೆಯುತ್ತಿರುವ ಕಲಿಕೇರಿ ಕೆರೆ ಹೂಳೆತ್ತುವ ಕೆಲಸದ ಸ್ಥಳದಲ್ಲಿ ಕೇಕ್ ಕತ್ತರಿಸುವ ಮೂಲಕ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಮಾತನಾಡಿ,‘ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡುತ್ತಿದೆ. ಯೋಜನೆಯಡಿ ಪುರುಷರಿಗೆ ನೀಡುವ ಕೂಲಿಯೇ ಮಹಿಳೆಯರಿಗೂ ನೀಡಲಾಗುತ್ತಿದೆ. ಈ ಯೋಜನೆ ಸೌಲಭ್ಯ ಮಹಿಳೆಯರು ಪಡೆದುಕೊಳ್ಳಬೇಕು. ವರ್ಷದಲ್ಲಿ 100 ದಿನ ಕೆಲಸ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದುವಂತೆ’ ಸಲಹೆ ನೀಡಿದರು.

‘ನರೇಗಾದಡಿ ವರ್ಷದಲ್ಲಿ 100 ದಿನ ಕೆಲಸ ಪೂರೈಸಿದ ಮಹಿಳಾ ಕೂಲಿಕಾರರಾದ ಶಾಂತಮ್ಮ, ಲಕ್ಷ್ಮೀ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ನಂತರ ಮಹಿಳೆಯರು ಕೇಕ್ ಹಾಗೂ ಸಿಹಿ ತಿನಿಸನ್ನು ಪರಸ್ಪರ ಹಂಚಿಕೊಂಡು ಖುಷಿಪಟ್ಟರು.

ಗ್ರಾ.ಪಂ ಪಿಡಿಒ ಕಿರಣ್ ಕುಮಾರ, ಕಾರ್ಯದರ್ಶಿ ರವಿಶಾಸ್ತ್ರಿ, ಎಸ್‍ಡಿಎ ಶರಣಪ್ಪ ಗೌಡ, ತಾಲ್ಲೂಕು ನರೇಗಾ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯ ನಾಗಪ್ಪ, ಕಂಪ್ಯೂಟರ್ ಆಪರೇಟರ್ ಮಹ್ಮದ್ ರಫಿ ಹಾಗೂ ಸಿಬ್ಬಂದಿ ಹನುಮಂತ ಇದ್ದರು.

‘ಮಹಿಳೆ, ಸಾಧನೆಗೆ ಸ್ಫೂರ್ತಿ’

ಹನುಮಸಾಗರ: ‘ಮಹಿಳೆ ಪ್ರತಿಯೊಬ್ಬರ ಸಾಧನೆಗೆ ಸ್ಫೂರ್ತಿ. ಕುಟುಂಬದ ಬದುಕಿಗೆ ದಾರಿ ಹಾಗೂ ಕುಟುಂಬದ ಶಕ್ತಿಯಾಗಿ ಎಲ್ಲರ ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದಿದ್ದಾಳೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಬಸಮ್ಮ ಹಿರೇಮಠ ಹೇಳಿದರು.

ಇಲ್ಲಿನ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸೋಮವಾರ ನಡೆದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗರತ್ನ ಯಾಳಗಿ ಮಾತನಾಡಿ,‘ದಣಿವರಿಯದೆ ಕೆಲಸ, ನಿಸ್ವಾರ್ಥ ಪ್ರೀತಿ, ಕಾಳಜಿಯ ಕಾರಣದಿಂದ ಎಲ್ಲರ ಬದುಕಿಗೂ ಸ್ಫೂರ್ತಿಯಾದ ಮಹಿಳೆ, ಎಲ್ಲರ ಬದುಕಿನಲ್ಲೂ ಪ್ರತಿದಿನ ಮಹಿಳೆ ತೋರುವ ಅಕ್ಕರೆ, ನಿಭಾಯಿಸುವ ಜವಾಬ್ದಾರಿ, ಕುಟುಂಬಕ್ಕಾಗಿ ವಹಿಸುವ ಶ್ರಮ ಪ್ರತಿಯೊಬ್ಬರಿಗೂ ತಿಳದ ವಿಷಯ’ ಎಂದರು. ವಿಜಯಲಕ್ಷ್ಮೀ ಮಾತನಾಡಿ,‘ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ಸಹೋದರಿಯ ಪ್ರೀತಿ ಬಣ್ಣಿಸಲು ಅಸಾಧ್ಯವಾದುದು’ ಎಂದರು. ರೇಣುಕಾ, ಸುಮಾ ಮಾತನಾಡಿದರು.
ಸಾಧನೆ ಮಾಡಿದ ಬಸಮ್ಮ ಹಿರೇಮಠ, ಸುನೀತಾ ಕೋಮಾರಿಯವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT