ಸೋಮವಾರ, ಆಗಸ್ಟ್ 8, 2022
23 °C
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ

ಎರಡು ವಾರದೊಳಗೆ ಕೆಲಸ ಮುಗಿಸಿ: ಸಚಿವ ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಬೆಳೆ ಪರಿಹಾರ, ಪಿಂಚಣಿ ಸೌಲಭ್ಯ, ಸ್ಮಶಾನ ಭೂಮಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಬಾಕಿ ಕೆಲಸಗಳು ಎರಡು ವಾರದ ಒಳಗೆ ಪೂರ್ಣಗೊಳ್ಳಬೇಕು. ಆ ಕುರಿತು ಜಿಲ್ಲಾ ಮಂತ್ರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿನ ಜೆ.ಎಚ್.ಪಟೇಲ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಬಾರಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ರೈತರಿಗೆ ಆರ್.ಟಿ.ಜಿ.ಎಸ್. ಮೂಲಕ ‎₹ 31.50 ಕೋಟಿ ಬೆಳೆ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ಅದರಲ್ಲಿ ಬಾಕಿ ಉಳಿದ ರೈತರಿಗೆ ಆದಷ್ಟು ಬೇಗ ಬೆಳೆ ಪರಿಹಾರ ತಲುಪಿಸಿ. ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನ ಜಾಗ ಇರಲೇಬೇಕು ಎಂದರು.

ಪ್ರಸ್ತುತ ಸ್ಮಶಾನ ಜಾಗ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಿ, ಆ ಕುರಿತು ನೋಟಿಫಿಕೇಶನ್ ಹೊರಡಿಸಿ. ಸರ್ಕಾರಿ ಜಾಗವು ಗ್ರಾಮಕ್ಕೆ ಹತ್ತಿರವಾಗಿದ್ದು, ಜನ ಬಳಕೆಗೆ ಯೋಗ್ಯವಾಗಿರಬೇಕು. ಅಂತಹ ಜಾಗ ಗುರುತಿಸಿ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ, ಗ್ರಾಮದ ಹತ್ತಿರದ ಖಾಸಗಿ ಜಮೀನು ಖರೀದಿಸಲು ಕ್ರಮ ಕೈಗೊಳ್ಳಿ ಎಂದರು.

ಸಾಮಾಜಿಕ ಭದ್ರತೆ ಯೋಜನೆಯ ಅಡಿ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ ಮುಂತಾದವುಗಳನ್ನು ಪ್ರಸ್ತುತ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗಳಿಂದ ಪಾವತಿ ಮಾಡಲಾಗುತ್ತಿದೆ. ಆದರೆ ಪೋಸ್ಟ್ ಆಫೀಸ್‌ಗಳಿಂದ ಪಾವತಿಯಾಗುತ್ತಿರುವ ಪಿಂಚಣಿಯು ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದರಲ್ಲಿ ಅನರ್ಹರೂ ಪಿಂಚಣಿ ಪಡೆಯುತ್ತಿದ್ದಾರೆ. ಪಿಂಚಣಿ ತಲುಪಿಸುವ ಪೋಸ್ಟ್‌ಮನ್ ಕುರಿತು ಅನೇಕ ದೂರುಗಳು ಬಂದಿವೆ. ಇವುಗಳನ್ನು ಪರಿಗಣಿಸಿ ಇನ್ನುಮುಂದೆ ಯಾವುದೇ ಪೋಸ್ಟ್ ಆಫೀಸ್‌ಗಳಿಂದ ಪಿಂಚಣಿ ಪಾವತಿಗೆ ಅವಕಾಶ ನೀಡದೆ. ಪಿಂಚಣಿ ಪಡೆಯುವ ಪ್ರತಿಯೊಬ್ಬ ಫಲಾನುಭವಿಯೂ ಹತ್ತಿರದ ಬ್ಯಾಂಕ್‌ನಲ್ಲಿ ಖಾತೆ ತೆಗೆಯಬೇಕು. ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಫಲಾನುಭವಿಗಳು ಬ್ಯಾಂಕ್‌ನಿಂದ ಹಣ ತೆಳೆದುಕೊಳ್ಳಬಹುದು ಎಂದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ವಿವಿಧ ರೀತಿಯ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಪ್ರಕ್ರಿಯೆಯಲ್ಲಿ ಕೆಲವು ತಾಲ್ಲೂಕುಗಳು ಪ್ರಗತಿ ಸಾಧಿಸಿಲ್ಲ. ಕಾರಣಗಳು ಏನೇ ಇದ್ದರೂ ಇನ್ನು 15 ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡು ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ದವಿದೆ. ಕೋವಿಡ್ ಸಮಸ್ಯೆ ಎದುರಾಗಿ ಆರು ತಿಂಗಳಾದರೂ ಆ ಕುರಿತು ಜಿಲ್ಲೆಯ ಅಧಿಕಾರಿಗಳು, ವೈದ್ಯರು ಗಂಭೀರವಾಗಿ ಕ್ರಮ ಕೈಗೊಂಡಿಲ್ಲ. ಲಸಿಕೆ ಬರುವವರೆಗೂ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಹಾಲಪ್ಪ ಆಚಾರ್ ಮಾತನಾಡಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿ.ಇ.ಒ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು