ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾರ್ಯಾಗಾರದಿಂದ ವೃತ್ತಿ ಬದುಕಿಗೆ ಅನುಕೂಲ’

ಗವಿಸಿದ್ದೇಶ್ವರ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ
Published : 8 ಜುಲೈ 2023, 12:55 IST
Last Updated : 8 ಜುಲೈ 2023, 12:55 IST
ಫಾಲೋ ಮಾಡಿ
Comments

ಕೊಪ್ಪಳ: ‘ಪ್ರಸ್ತುತ ದಿನಮಾನಗಳಲ್ಲಿ ಕಾರ್ಯಾಗಾರಗಳ ಆಯೋಜನೆಯಿಂದ ವೈದ್ಯ ವಿದ್ಯಾರ್ಥಿಗಳಿಗೆ ವಿಶೇಷ ಚಿಕಿತ್ಸಾ ವಿಧಾನಗಳ ಪ್ರಾತ್ಯಕ್ಷಿಕ ಜ್ಞಾನ ಲಭಿಸುತ್ತದೆ. ವೃತ್ತಿ ಬದುಕಿಗೆ ಅನುಕೂಲವಾಗುತ್ತದೆ’ ಎಂದು ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ.ಆನಂದ ಕಿರಿಶ್ಯಾಳ ಅಭಿಪ್ರಾಯಪಟ್ಟರು.

ಇಲ್ಲಿನ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಶಲ್ಯ ತಂತ್ರ ಸ್ನಾತಕೋತ್ತರ ವಿಭಾಗದಿಂದ ಶುಕ್ರವಾರ ನಡೆದ ‘ಮರ್ಮ ಸಾಧನ - 2023’ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ‘ಕಾರ್ಯಾಗಾರದಿಂದಾಗಿ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿಯಲ್ಲಿ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗುವುದು. ಕೇಂದ್ರ ಸರ್ಕಾರ ಇಂಥ ಕಾರ್ಯಕ್ರಮಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಆಯುರ್ವೇದ ಮಹಾವಿದ್ಯಾಲಯಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಗದಗಿನ ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂತೋಷ ಬೆಳವಡಿ ಮಾತನಾಡಿ ‘ಮರ್ಮ ಚಿಕಿತ್ಸೆಯು ಔಷಧ ರಹಿತ ವಿಶೇಷ ಚಿಕಿತ್ಸೆಯಾಗಿದ್ದು, ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ತಮ್ಮ ಹೊರರೋಗಿ ವಿಭಾಗದಲ್ಲಿಯೂ ರೋಗಿಗಳಿಗೆ ಸುಲಭವಾಗಿ ನೀಡಬಹುದಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಸವಡಿ ಮಾತನಾಡಿ ‘ಮರ್ಮ ಚಿಕಿತ್ಸೆಯು ಇಂದಿನ ದಿನಮಾನದಲ್ಲಿ ಅತ್ಯವಶ್ಯಕವಾಗಿದ್ದು, ವಿದ್ಯಾರ್ಥಿಗಳು ಇಂಥ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆಯುರ್ವೇದ ಚಿಕಿತ್ಸಕ ಕೇರಳದ ಡಾ.ಕೆ.ಟಿ.ವಿನೋದ ಕೃಷ್ಣನ್, ತಮಿಳುನಾಡಿನ  ಗುಡಲೂರದ ಸೌಖ್ಯ ಚಿಕಿತ್ಸಾಲಯದ ಮುಖ್ಯ ಚಿಕಿತ್ಸಕ ಡಾ.ಎಚ್. ಅನುಸುಯಾ, ಕಾರ್ಯಾಗಾರದಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಮರ್ಮ ಚಿಕಿತ್ಸಾ ವಿಧಾನಗಳನ್ನು ರೋಗಿಗಳಿಗೆ ನೀಡಿ ಅದರ ಪರಿಣಾಮ ಮತ್ತು ಲಾಭಗಳ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು.

ಡಾ. ಸುರೇಶ ಹಕ್ಕಂಡಿ, ಡಾ.ಪ್ರವೀಣಕುಮಾರ, ಶಲ್ಯತಂತ್ರ ವಿಭಾಗದ ಉಪನ್ಯಾಸಕ ಡಾ.ಗೀತಾಂಜಲಿ  ಪಾಲ್ಗೊಂಡಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮರ್ಮ ಚಿಕಿತ್ಸೆ ಕುರಿತು ಚಿತ್ರಪಟ ಪ್ರದರ್ಶನ ಹಾಗೂ ಪ್ರಬಂಧ ಮಂಡಿಸಿದರು.

Highlights - ಎರಡು ದಿನ ನಡೆದ ರಾಷ್ಟ್ರೀಯ ಕಾರ್ಯಾಗಾರ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗಿ ವಿಷಯ ಮಂಡಿಸಿದ ಭಾವಿ ವೈದ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT