ಶನಿವಾರ, ಡಿಸೆಂಬರ್ 7, 2019
21 °C
ರೈತರಿಗೆ ತರಬೇತಿ

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ: ‘ಹದಗೆಡುತ್ತಿರುವ ಭೂಮಿ ಆರೋಗ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೊಪ್ಪಳ: ಹೆಚ್ಚುತ್ತಿರುವ ಕಲ್ಮಶ, ವಿಷಪೂರೀತ ವಾಯು, ರಸಾಯನಿಕ ಮಿಶ್ರಿತ ಕೃಷಿಯಿಂದ ಭೂಮಿ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ವಿರೇಶ ಹುನಗುಂದ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ಬುಧವಾರ ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಪ್ರಯುಕ್ತ ರೈತರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಕೃಷಿ ಜ್ಞಾನ ಅಪಾರವಾಗಿದೆ. ಆದರೂ ಕೂಡಾ ಆಹಾರದ ಕೊರತೆ ಉಂಟಾಗಿ ಹಸಿರು ಕ್ರಾಂತಿಯನ್ನು ಮಾಡಬೇಕಾಗಿ ಬಂತು. ಹೆಚ್ಚಿನ ಇಳುವರಿ ಆಶೆಗೆ ಕ್ರಿಮಿನಾಶಕ, ರಸಾಯನಿಕ ಮಿಶ್ರಿತ ಗೊಬ್ಬರ, ಬೀಜ ಬಳಸುತ್ತಿರುವುದರಿಂದ ಭೂಮಿ ಕಲುಷಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಚರಂಡಿ ನೀರಿನಲ್ಲಿ ತರಕಾರಿ ಬೆಳೆದು ರೈತನ ಸಾಧನೆ ಎಂದು ಯಾವುದೋ ಪತ್ರಿಕೆಯಲ್ಲಿ ವರದಿ ನೋಡಿ ಅತ್ಯಂತ ಖೇದ ಎನಿಸಿತು. ಚರಂಡಿ ನೀರು ಹೇಗೆ ಇರುತ್ತದೆ ಎಂಬುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಬೆಳೆದ ತರಕಾರಿ ಸೇರಿದಂತೆ ಇತರ ಬೆಳೆ ತಿಂದು ನಾವು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಎಂ.ಬಿ.ಪಾಟೀಲ ಮಾತನಾಡಿ, ಮಣ್ಣಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಯಾವ ಅವಧಿಯಲ್ಲಿ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಯಾವ ಬೆಳೆ ಬೆಳೆಯಬೇಕು ಎಂಬ ಪಾರಂಪರಿಕ ಕಲ್ಪನೆಯೇ ನಮ್ಮ ರೈತರಲ್ಲಿ ಹೊರಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿಗೆ ಬಿದ್ದ ಬೀಜ ಫಲ ನೀಡಬೇಕಾದರೆ ಅದಕ್ಕೆ ಬೇಕಾದ ಅವಶ್ಯಕ ಪೋಷಕಾಂಶ, ಅಗತ್ಯಕ್ಕೆ ತಕ್ಕ ಹಾಗೆ ರಾಸಾಯನಿಕ ಸಿಂಪರಣೆ ಮಾಡಬೇಕು. ಭತ್ತ ಬೆಳೆಯುವ ಹುಚ್ಚಿಗೆ ಬಿದ್ದು, ಫಲವತ್ತಾದ ಜಮೀನಿನಲ್ಲಿ ನೀರು ನಿಲ್ಲಿಸಿ, ಯಂತ್ರಗಳಿಂದ ಮಾಡುವ ಕೃಷಿ ಭೂಮಿಯನ್ನು ನೋಡಿದರೆ ಕನಿಕರ ಎನಿಸುತ್ತದೆ. ಬೆಳೆ ತೆಗೆದ ನಂತರ ಕಲ್ಲಿನಂತೆ ಆಗುವ ಹೊಲದಲ್ಲಿ ನಡೆದಾಡಲೂ ಕೂಡಾ ಸಾಧ್ಯವಾಗುತ್ತಿಲ್ಲ. ಸವಳು ಭೂಮಿಯಾಗಿ ಬಿತ್ತನೆಗೆ ಅಯೋಗ್ಯ ಎನಿಸುವಷ್ಟರ ಮಟ್ಟಿಗೆ ಮಣ್ಣಿನ ಶೋಷಣೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯ ರೈತರಿಗೆ ಗೋವಿನಜೋಳ ಬದಲಿಗೆ ಬೇರೆ ಬೆಳೆ ಬೆಳೆಯುವಂತೆ ಸಲಹೆ ಮಾಡುತ್ತಲೇ ಬಂದಿದ್ದೇವೆ. ಆದರೂ ಪರ್ಯಾಯ ಬೆಳೆಯ ಬಗ್ಗೆ ಚಿಂತನೆ ನಡೆಸಿಲ್ಲ. ಒಂದು ಚಿಕ್ಕ ಕೀಟ ಬೀಜಗಳ ಮೂಲಕ ಆಮುದಾಗಿ ಸೈನಿಕ ಹುಳು ಎಂಬ ಹೆಸರಿನಲ್ಲಿ ಚಾಮರಾಜನಗರದಿಂದ ಹಿಡಿದು, ಬೀದರ್‌ವರೆಗೆ ವ್ಯಾಪಿಸಿದೆ. ಇದೇ ಹುಳು ನಮ್ಮ ಅನ್ನ ದೇವರು ಆದ ಬಿಳಿಜೋಳಕ್ಕೆ ಬಿದ್ದರೆ ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ವಿಜ್ಞಾನಿ ಡಾ.ಬದರೀಪ್ರಸಾದ. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನವೋದಯ ವಿರೂಪಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ರಾಜ್ಯ ಸಮಿತಿ ಸದಸ್ಯ ಶಂಕರಪ್ಪ ಚೌಡಿ ಮಾತ ನಾಡಿದರು.

*
ಸಾವಯವ ಕೃಷಿಗೆ ಸರ್ಕಾರ ಉತ್ತೇಜನ ನೀಡಬೇಕು. ಕೃಷಿಗೆ ಅಗತ್ಯವಾಗಿರುವ ಮಣ್ಣಿನ ಆರೋಗ್ಯದ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿ ಪಡೆದುಕೊಳ್ಳಬೇಕು
-ನವೋದಯ ವಿರುಪಣ್ಣ, ಅಧ್ಯಕ್ಷ, ಕೃಷಿಕ ಸಮಾಜ ತಾಲ್ಲೂಕು ಘಟಕ

ಪ್ರತಿಕ್ರಿಯಿಸಿ (+)