ಮಂಗಳವಾರ, ಡಿಸೆಂಬರ್ 10, 2019
26 °C
ಬರ ನಿರ್ವಹಣೆ: ತುರ್ತು ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಹಾಲಪ್ಪ ಆಚಾರ ಸೂಚನೆ

ಗ್ರಾಮಗಳಲ್ಲೇ ಇದ್ದು ಕೆಲಸ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಲಬುರ್ಗಾ: ಕಾರ್ಯ ನಿರ್ವಹಿಸುತ್ತಿರುವ ಪ್ರದೇಶವನ್ನು ಬಿಟ್ಟು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸುತ್ತಾಡಿದರೆ ಪಂಚಾಯಿತಿ ಕೆಲಸ ಮಾಡುವರು ಯಾರು. ಅಲ್ಲಿಯ ಸಮಸ್ಯೆಗಳು ಇತ್ಯರ್ಥವಾಗಬೇಕಾದರೆ ಗ್ರಾಮದಲ್ಲಿದ್ದುಕೊಂಡು ಕೆಲಸ ಮಾಡಬೇಕು ಎಂದು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ಶಾಸಕ ಹಾಲಪ್ಪ ಆಚಾರ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಬರಗಾಲ ತಲೆದೋರಿದೆ.

ರೈತರು ಹಾಗೂ ಕೃಷಿ ಕಾರ್ಮಿಕರು ಕೆಲಸವಿಲ್ಲದೇ ಬೇರೆ ಬೇರೆ ಗ್ರಾಮಕ್ಕೆ ಗುಳೆ ಹೋಗುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕಾಳಜಿ ತೋರುತ್ತಿಲ್ಲ, ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ
ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸರ್ಕಾರಿ ಕೆಲಸ ಸಿಗೋವರೆಗೂ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡಿರುತ್ತೀರಿ, ಸಿಕ್ಕ ಮೇಲೆ ದಾರಿ ತಪ್ಪುತ್ತೀರಿ, ಜನರಿಗೆ ಒಳ್ಳೆಯದು ಮಾಡಬೇಕೆಂಬ ಮನಸ್ಸು ಬರೋದಿಲ್ವೆ, ಸರ್ಕಾರದಿಂದ ಸಂಬಳ ಪಡೆದು ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಕನಿಷ್ಠ ಅರಿವು ಬರದೇ ಹೋದರೆ ಶಿಕ್ಷಣವಂತಾಗಿದ್ದ ವ್ಯರ್ಥವೇ ಸರಿ ಎಂದು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವಿವಿಧ ಹಂತದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.

ಅಧಿಕಾರಿಗಳು ಮತ್ತು ಸಿಬ್ಬಂದಿ ಬೇಜವಾಬ್ದಾರಿತನದಿಂದ ತಾಲ್ಲೂಕಿನಲ್ಲಿ ಯಾವುದೇ ಕಾಮಗಾರಿಯಾಗಲಿ, ಯೋಜನೆಗಳಾಗಲಿ ಪರಿಪೂರ್ಣವಾಗಿಲ್ಲ. ಪ್ರತಿದಿನ ಸಾಕಷ್ಟು ಸಂಖ್ಯೆಯ ಜನರು ಕರೆ ಮಾಡಿ ವಿವಿಧ ಇಲಾಖೆಯಲ್ಲಿ ಕೆಲಸ ಬಾಕಿ ಉಳಿದಿರುವ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದರು.

ಪ್ರತಿದಿನ ಕಚೇರಿ ಬಂದು ಯಾವ ಕೆಲಸ ಮಾಡುತ್ತೀರಿ, ಕೆಲಸಗಳು ಬಾಕಿ ಉಳಿಯುವುದ್ಯಾಕೆ, ಕೆಲಸ ಮಾಡಲು ಅಸಮರ್ಥರಾಗಿದ್ದರೆ ಕೆಲಸ ಬಿಟ್ಟು ಮನೆಗೆ ಹೋದರೆ ಬೇರೆ ಯಾರಾದರೂ ಬರುತ್ತಾರೆ. ಜನರ ಜೀವನದಲ್ಲಿ ಚೆಲ್ಲಾಟವಾಡುವುದು ಬೇಡ, ತಾಲ್ಲೂಕಿನಲ್ಲಿ ಪಾರದರ್ಶಕವಾದ ಉತ್ತಮ ಆಡಳಿತ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಸಾಕಷ್ಟು ಜವಾಬ್ದಾರಿ ಹೊತ್ತ ಪಿಡಿಒಗಳು ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿ ಯಾವುದೇ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು. ನೀರು ಪೂರೈಕೆಯಲ್ಲಿ ವಿಶೇಷ ಕಾಳಜಿ ತೋರಬೇಕು. ಅರೆಬರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಕೆಟ್ಟಿರುವ ಶುದ್ಧ ನೀರಿನ ಘಟಕಗಳನ್ನು ಮತ್ತೆ ಶುರುಮಾಡಲು ಕ್ರಮ ಕೈಗೊಳ್ಳಬೇಕು ಇವೆ ಮೊದಲಾದ ಅಗತ್ಯ ಕ್ರಮಗಳನ್ನು ಕೈಗೊಂಡು ಬರ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕಿನ ಯಾವ ಯಾವ ಗ್ರಾಮದಲ್ಲಿ ರುದ್ರಭೂಮಿ ಇಲ್ಲ ಅಂತಹ ಗ್ರಾಮಗಳನ್ನು ಪಟ್ಟಿ ತಯಾರಿಸಬೇಕು. ಸರ್ಕಾರಿ ಜಮೀನು ಇರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.

ವಿವಿಧ ಕೆಲಸಕ್ಕೆಂದ ಕಚೇರಿಗೆ ಬರುವ ರೈತರನ್ನು ಅನಗತ್ಯವಾಗಿ ಅಲೆದಾಡಿಸುವುದಾಗಲಿ, ಸಾಮಾಜಿಕ ಭದ್ರತಾ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ತಲುಪಿಸು ವಲ್ಲಿ ವಿಳಂಬ ಮತ್ತು ಹಣ ಕೇಳುವು ದಾಗಲಿ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ರಮೇಶ ಅಳವಂಡಿ ಕರ್, ಕುಕನೂರು ತಹಶೀಲ್ದಾರ್‌ ರವಿರಾಜ ದಿಕ್ಷಿತ್, ಕೃಷಿ ಅಧಿಕಾರಿ ಹಾರೋನ್ ರಷೀದ್, ತಾಪಂ ಹನುಮಂತಗೌಡ ಪಾಟೀಲ ಇದ್ದರು.

ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

*
ಪಾರದರ್ಶಕವಾದ ಉತ್ತಮ ಆಡಳಿತ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು.
-ಹಾಲಪ್ಪ ಆಚಾರ, ಶಾಸಕ

ಪ್ರತಿಕ್ರಿಯಿಸಿ (+)