ಯೋಗದಿಂದ ದೇಹ ಮನಸ್ಸು ಗಟ್ಟಿ: ಸಂಸದ ಕರಡಿ

ಭಾನುವಾರ, ಜೂಲೈ 21, 2019
28 °C
ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನರಿಂದ ಯೋಗ ಪ್ರದರ್ಶನ

ಯೋಗದಿಂದ ದೇಹ ಮನಸ್ಸು ಗಟ್ಟಿ: ಸಂಸದ ಕರಡಿ

Published:
Updated:
Prajavani

ಕೊಪ್ಪಳ: 'ಪ್ರಾಚೀನ ಕಾಲದಿಂದಲೂ ಬಂದಿರುವ ಈ ಯೋಗ ಇಂದು ಇಡೀ ವಿಶ್ವದ ಮನ್ನಣೆ ಪಡೆದಿದೆ. ಯೋಗದಿಂದ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಕೂಡ ಗಟ್ಟಿಗೊಳಿಸಬಹುದಾಗಿದೆ' ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 5ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಯೋಗ ದಿನಾಚರಣೆಗೆ ಕರೆ ನೀಡಿದಾಗ ವಿಶ್ವದ ಎಲ್ಲ ರಾಷ್ಟ್ರಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು. ಇದೇ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. 'ನಿಸರ್ಗ ಸ್ನೇಹಿ ಯೋಗ' ಎಂಬ ಘೋಷ ವಾಖ್ಯದೊಂದಿಗೆ ಈ ವರ್ಷ ಆಚರಣೆ ಮಾಡಲಾಗುತ್ತಿದೆ. ಜಗತ್ತಿನ ನೂರಾರು ದೇಶಗಳ ಜನತೆ ಇದಕ್ಕೆ ಕೈಜೋಡಿಸಿವೆ ಎಂದು ಹೇಳಿದರು.

'ಯೋಗವನ್ನು ಋಷಿಮನಿಗಳು ಅನುಷ್ಠಾನ ಮಾಡಿ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ. ಯೋಗದಿಂದ ದೇಹ, ಮನಸ್ಸು ಶುದ್ಧಿಯಾಗುತ್ತದೆ. ಉತ್ತಮ ಆರೋಗ್ಯ ಹೊಂದಿ ಸಶಕ್ತ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತಿದೆ. ಮಾನಸಿಕ ಸ್ಥೈರ್ಯ ಹೆಚ್ಚಾಗಿ, ಶಾಂತಿ, ಸಹನೆ ಎಲ್ಲರಲ್ಲಿ ನೆಲೆಸಲಿದೆ' ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್‌ ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ. ಸರ್ಕಾರಿ ನೌಕರರು ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದ್ದರಿಂದ ಒತ್ತಡದಿಂದ ಮುಕ್ತರಾಗಲು ಯೋಗ ಅವಶ್ಯ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಅವರು ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಶೌಚಾಯ ಸ್ಥಾಪಿಸಲಾಗಿದ್ದು, ಇವುಗಳ ಸದ್ಬಳಕೆಯಾಗಬೇಕು. ಸ್ವಚ್ಛ ಮೇವ ಜಯತೆ ಅಭಿಯಾನ ಹಮ್ಮಿಕೊಂಡಿದ್ದು, ಇದರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ, ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಉಪವಿಭಾಧಿಕಾರಿ ಸಿ.ಡಿ.ಗೀತಾ, ತಹಶೀಲ್ದಾರ್ ಜಿ.ಬಿ.ಮಜ್ಜಿಗಿ, ಜಿಲ್ಲಾ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೈ.ಜೆ. ಶಿರವಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಸವರಾಜ ಕುಂಬಾರ, ಈಶ್ವರೀಯ ವಿವಿ ಸಂಚಾಲಕಿ ಯೋಗಿನಿ ಮುಂತಾದವರು ಪಾಲ್ಗೊಂಡಿದ್ದರು.

ಯೋಗ ಗುರು ಅಶೋಕಸ್ವಾಮಿ ಹಿರೇಮಠ ಯೋಗಾಭ್ಯಾಸ ಹೇಳಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !