ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತಿಗಿಂತ ಜ್ಞಾನಾರ್ಜನೆಗೆ ಆದ್ಯತೆ ಇರಲಿ

ಗುಮಗೇರಾ: ಸಿದ್ಧರಾಮಾನಂದ ಪುರಿ ಸ್ವಾಮೀಜಿ ಕರೆ
Last Updated 24 ಏಪ್ರಿಲ್ 2019, 15:21 IST
ಅಕ್ಷರ ಗಾತ್ರ

ಕುಷ್ಟಗಿ: ಸಂಪತ್ತು ಸಂಗ್ರಹಿಸುವುದಕ್ಕಿಂತ ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕನಕಗುರುಪೀಠ ಕಲಬುರ್ಗಿ ವಿಭಾಗದ ಪೀಠಾಧಿಕಾರಿ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಮಗೇರಾ ಗ್ರಾಮದಲ್ಲಿ ಬುಧವಾರ ಕನಕದಾಸರ 531ನೇ ಜಯಂತಿ ನಿಮಿತ್ತ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಜ್ಞಾನದ ಬಲವೇ ಅಪರಿಮಿತವಾದುದು, ಜ್ಞಾನಿಗೆ ಹೆದರಿಕೆ ಇರುವುದಿಲ್ಲ. ಎಂಥಹದೇ ಸ್ಥಿತಿ ಎದುರಾದರೂ ಬದುಕುವ ಆತ್ಮಶಕ್ತಿಯನ್ನು ಪಡೆದಿರುತ್ತಾನೆ ಎಂದು ಕನಕದಾಸರ ಕೀರ್ತನೆ ಹಾಡುವ ಮೂಲಕ ಪ್ರಸ್ತಾಪಿಸಿದರು.

ಮಕ್ಕಳನ್ನು ಭವಿಷ್ಯದ ಉತ್ತಮ ನಾಗರಿಕರನ್ನಾಗಿ ಬೆಳೆಸಬೇಕು. ಅವರ ಮೇಲೆ ಒತ್ತಡ ಹಾಕಿದರೆ ಕಲಿಕಾ ಪ್ರವೃತ್ತಿಗೆ ಅಡಚಣೆಯಾಗುತ್ತದೆ ಎಂದು ಸಲಹೆ ನೀಡಿದರು.

ಹಾಲುಮತ ಸಂಸ್ಕೃತಿ ಕುರಿತು ಮಾತನಾಡಿದ ಅವರು, ನಾಗರಿಕತೆಯ ಆರಂಭದಿಂದಲೂ ಹಾಲುಮತ ಅಸ್ತಿತ್ವದಲ್ಲಿದ್ದು ಬೀರಪ್ಪನನ್ನು ಆರಾಧಿಸುವ ಈ ಸಮುದಾಯದ ಆಚರಣೆ ವಿಶಿಷ್ಟವಾಗಿದೆ. ಸಮಾಜದಲ್ಲಿ ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಸಾಂಘಿಕ ಬದುಕಿನ ಅಗತ್ಯವಿದೆ. ಹಾಗಾಗಿ ಇತರೆ ಎಲ್ಲ ಸಮುದಾಯಗಳೊಂದಿಗೆ ಸೌಹಾರ್ದತೆ ಹೊಂದುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸಿಂಧನೂರಿನ ಕರ್ನಾಟಕ ಕಾಲೇಜಿನ ಅಧ್ಯಕ್ಷ ಶಂಕರ ಗುರಿಕಾರ, ಬಡತನ ಬದುಕಿಗೆ ಶಿಸ್ತಿನ ಪಾಠವನ್ನು ಕಲಿಸುತ್ತದೆ. ಆರ್ಥಿಕವಾಗಿ ಹಿಂದುಳಿದಿರುವ ಹಾಲುಮತ ಸಮುದಾಯ ಬದುಕಿನ ನಿಜವಾದ ಅರ್ಥವನ್ನು ಅರಿತುಕೊಂಡು ನಡೆಯುತ್ತಿದೆ ಎಂದರು.

ಹಾಲುಮತ ಸಮುದಾಯದ ಮುಖಂಡ ಮಹಾಲಿಂಗಪ್ಪ ದೋಟಿಹಾಳ ಪ್ರಾಸ್ತಾವಿಕ ಮಾತನಾಡಿದರು.

ಕನಕಗುರುಪೀಠ ಬಾದಿಮನಾಳ ಶಾಖೆಯ ಶಿವಸಿದ್ಧೇಶ್ವರ ಸ್ವಾಮೀಜಿ, ಕಳಕಯ್ಯ ಗುರುವಿನ, ಭೀಮಪ್ಪಯ್ಯ ಗ್ಯಾನಪ್ಪಯ್ಯನವರ, ಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜುಮ್ಮನಗೌಡ ಪಾಟೀಲ, ತಾಲ್ಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ವೀರನಗೌಡ ಬಳೂಟಗಿ, ಶರಣಗೌಡ ಮಾಲಿಪಾಟೀಲ, ಸಂಗನಗೌಡ ಜೇನರ, ಶೇಖರಗೌಡ ಪೊಲೀಸಪಾಟೀಲ, ಭರಮಗೌಡ ಬ್ಯಾಲಿಹಾಳ, ಗುರಪ್ಪ ಕುರಿ, ಹನುಮಂತಪ್ಪ ಸಂಗನಾಳ, ಪುರಸಭೆ ಸದಸ್ಯ ಕಲ್ಲೇಶ ತಾಳದ, ವಿಜಯಕುಮಾರ ಹಿರೇಮಠ ಇತರರು ಇದ್ದರು.

ಕಿರುತೆರೆಯ ಕಲಾವಿದ ಅರ್ಜುನ ಇಟಗಿ ಸಂಗೀತ ಕಾರ್ಯಕ್ರಮ ನೀಡಿದರು.

ಇದೇ ಸಂದರ್ಭದಲ್ಲಿ ಎಂಟು ಜೋಡಿ ದಾಂಪತ್ಯ ಬದುಕಿಗೆ ಕಾಲಿರಿಸಿದರು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಸಂಗೊಳ್ಳಿ ರಾಯಣ್ಣ ವೃತ್ತದ ಫಕಕ್ಕೆ ಗೌರವ ನಮನ ಸಲ್ಲಿಸಿದರು.

ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ಇದೇ ವೇಳೆ ಶರಣೆ ಇಟಗಿ ಭೀಮಾಂಬಿಕೆ ಪುರಾಣದ ಮಹಾಮಂಗಲ ನೆರವೇರಿತು. ಕುಂಭಮೇಳದವರು, ವಿವಿಧ ಕಲಾತಂಡದವರು ಮೆರವಣಿಗೆಗೆ ಕಳೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT