ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ: ಜಿಲ್ಲೆಗೆ ₹22 ಕೋಟಿ

ಆರೋಗ್ಯಯುತ ಕಲ್ಯಾಣ ಕರ್ನಾಟಕ ನಮ್ಮ ಧ್ಯೇಯ: ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ
Last Updated 1 ಜೂನ್ 2021, 4:32 IST
ಅಕ್ಷರ ಗಾತ್ರ

ಕೊಪ್ಪಳ: ‘ಆರೋಗ್ಯಯುತ ಕಲ್ಯಾಣ ಕರ್ನಾಟಕ ನಿರ್ಮಾಣ ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯಿಂದ ಆರು ಜಿಲ್ಲೆಗಳ ಪೈಕಿ ಕೊಪ್ಪಳಕ್ಕೆ ಹೆಚ್ಚು ಅನುದಾನ ನೀಡಿದ್ದೇವೆ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ಕೆ.ಕೆ.ಆರ್.ಡಿ.ಬಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೋವಿಡ್‌ಗೆ ನಿರ್ವಹಣೆಗೆ ಕಲಬುರ್ಗಿಗೆ ₹6 ಕೋಟಿ ಕೊಟ್ಟಿದ್ದೇವೆ. ಆದರೆ ಕೊಪ್ಪಳಕ್ಕೆ ₹22 ಕೋಟಿ ಕೊಟ್ಟಿದ್ದೇವೆ. ಹಾಗಾಗಿ ನಮಗೆ ಕೊಪ್ಪಳ ಬೇರೆ ಅಲ್ಲ. ಕಲಬುರ್ಗಿ ಬೇರೆ ಅಲ್ಲ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುತ್ತೇವೆ. ನೀವು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚೇಂಜ್ ಆಫ್ ವರ್ಕ್ ಸಮಸ್ಯೆಯಾಗಿದ್ದು, ಈ ಕುರಿತು ನಾವೂ ಕೂಡಾ ಸಂಬಂಧಿಸಿದವರ ಹತ್ತಿರ ಮಾತನಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. 200ಕ್ಕೂ ಹೆಚ್ಚು ಕಾಮಗಾರಿಗಳು ಮುಕ್ತಾಯಗೊಂಡಿಲ್ಲ. ಹಾಗಾಗಿ ಅವುಗಳನ್ನು ಬೇಗ ಮುಗಿಸಬೇಕು. ಈ ಮೂಲಕ ಕೊಟ್ಟಿರುವ ಅನುದಾನವನ್ನು ಮೊದಲು ಬಳಕೆ ಮಾಡಿಕೊಂಡು ಆ ನಂತರ ಹೊಸ ಅನುದಾನ ಕೇಳಿ ಎಂದು ಅವರು ತಿಳಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ,‘ಮ್ಯಾಕ್ರೋ ಯೋಜನೆಯಲ್ಲಿ ನಮ್ಮ ಜಿಲ್ಲೆಗೆ ಬಹಳ ಕಡಿಮೆ ಅನುದಾನ ನೀಡಲಾಗಿದೆ. ಕೇವಲ ₹33 ಕೋಟಿ ನೀಡಿದ್ದೀರಿ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ನೀಡಬೇಕು’ ಎಂದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ,‘ಮೈಕ್ರೋ ಯೋಜನೆಯಲ್ಲಿ ಇರುವುದನ್ನು ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗೆ ಬಳಕೆ ಮಾಡಬೇಡಿ. ನಮ್ಮ ದುಡ್ಡು ನಮ್ಮ ಬಳಿಯೇ ಇರಬೇಕು’ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ,‘ಆಮ್ಲಜನಕ ಸಂಗ್ರಹ ಸಾಮರ್ಥ್ಯ ಕಡಿಮೆ ಇದೆ. ಲಿಕ್ವಿಡ್ ಮೆಡಿಸಿನ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ವಿವಿಧ ಕಡೆಗಳಲ್ಲಿ ಪ್ಲಾಂಟ್‌ಗಳನ್ನು ಆರಂಭಿಸುತ್ತಿದ್ದೇವೆ. ಕೋವಿಡ್‌ಗೆ ಸಂಬಂಧಿಸಿದ ಮೂರು ಯಂತ್ರಘಲಿಗೆ ಟೆಂಡರ್ ಕರೆದಿದ್ದೇವೆ. ಕನಕಗಿರಿ, ಯಲಬುರ್ಗಾ, ಕಾರಟಗಿಯಲ್ಲಿ ಅವುಗಳನ್ನು ಅಳವಡಿಸಿದ್ದೇವೆ. 19 ಕೆಟಗರಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿದ್ದು, ಇವರೆಲ್ಲರಿಗೂ ಲಸಿಕೆ ನೀಡಲಾಗುತ್ತಿದೆ’ ಎಂದರು.

ಸಭೆಯಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯಿತಿ ಸಿಇಒರಘುನಂದನ್ ಮೂರ್ತಿ,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ,ಡಿಎಚ್‌ಒ ಡಾ.ಟಿ.ಲಿಂಗರಾಜು ಹಾಗೂ ಕಿಮ್ಸ್ ನಿರ್ದೇಶಕ ಡಾ.ವೈಜನಾಥ ಇಟಗಿ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT