ಸೋಮವಾರ, ಸೆಪ್ಟೆಂಬರ್ 16, 2019
27 °C
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ

ಮುಜರಾಯಿಗೇ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ

Published:
Updated:
Prajavani

ಶಿವಮೊಗ್ಗ: ಮುಜರಾಯಿ ದೇವಾಲಯಗಳ ದುರಸ್ತಿ, ಪುನರ್ ನಿರ್ಮಾಣ ದೇವಾಲಯಗಳ ಕುಶಲ ಕಾಮಗಾರಿ ಕೈಗೊಳ್ಳಲು ಮುಜರಾಯಿ ಇಲಾಖೆಯಲ್ಲೇ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅರ್ಚರಿಕರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲು ಚಿಂತನೆ ನಡೆದಿದೆ. ಮುಜರಾಯಿ ದೇವಾಲಯಗಳನ್ನು ಆದಾಯದ ಆಧಾರದಲ್ಲಿ ಎ, ಬಿ ಮತ್ತು ಸಿ ಎಂದು ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ದೇವಾಲಯಗಳ ಆದಾಯ ಪುನರ್‌ ಪರಿಶೀಲಿಸಬೇಕು. ನಂತರ ಈಗಿರುವ ಗ್ರೇಡ್ ಬದಲಾಯಿಸುವ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದ 25 ಸಾವಿರ ಮೀನುಗಾರರಿಗೆ ಮನೆ ನಿರ್ಮಿಸಿಕೊಡಲಾಗುವುದು. ಆರ್ಥಿಕ ಸಂಕಷ್ಟದಲ್ಲಿರುವ 27 ಸಾವಿರ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ತಲಾ 48 ಸಾವಿರ ಅನುದಾನ ನೀಡಲಾಗುತ್ತಿದೆ. ಈ ಮೊತ್ತ ಶೀಘ್ರ ಹೆಚ್ಚಿಸಲಾಗುವುದು. ಧಾರ್ಮಿಕ ಪರಿಷತ್‌ ಮೂಲಕ ರಾಜ್ಯದ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಹೊಸ ಕಾಯ ಕಲ್ಪ ಕಲ್ಪಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವೇಗಕ್ಕೆ ತಕ್ಕಂತೆ ಕಾರ್ಯಕರ್ತರೂ ಸ್ಪಂದಿಸಬೇಕು ಎಂದು ಕೋರಿದರು.

ಹಣಗೆರೆ ಕಟ್ಟೆ ಅಭಿವೃದ್ಧಿಗೆ ಕ್ರಮ:

ಧಾರ್ಮಿಕ ಸಮನ್ವಯ ತಾಣ ಹಣಗೆರೆ ಕಟ್ಟೆಯ ಆರಾಧನಾ ಕೇಂದ್ರದ ಸ್ವಚ್ಛತೆಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸ್ವಚ್ಛತೆಗಾಗಿ ಜಿಲ್ಲಾಡಳಿತ ಸ್ಥಳೀಯ ಪಂಚಾಯಿತಿಗೆ ಬಿಡುಗಡೆ ಮಾಡಿರುವ ಅನುದಾನದ ಬಳಕೆ ಪರಿಶೀಲಿಸಬೇಕು. ಇಲ್ಲಿ ಹುಂಡಿಗೆ ಹಣ ಹಾಕದಂತೆ ಕೆಲವರು ತಡೆಯುತ್ತಿರುವ ಕುರಿತು ಶಾಸಕ ಅರಗ ಜ್ಞಾನೇಂದ್ರ ಅವರು ಮಾಹಿತಿ ನೀಡಿದ್ದಾರೆ. ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಹಣಗೆರೆ ಕಟ್ಟೆ ಆರಾಧನಾ ಕೇಂದ್ರದ ಸುತ್ತಲಿನ 5 ಎಕರೆ ಅರಣ್ಯ ಪ್ರದೇಶ ಬಳಸಿಕೊಳ್ಳಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು. ಅರಣ್ಯ ಇಲಾಖೆಗೆ ಪರ್ಯಾಯ ಸ್ಥಳ ನೀಡಬಹುದು. ಇಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಬೇಕು. ಅಲ್ಲಿನ ಭೂತನಾಥ ಕೇಂದ್ರದಲ್ಲಿ ಅರ್ಚಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಶಾಸಕ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್‌.ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಉಪಸ್ಥಿತರಿದ್ದರು.

Post Comments (+)