ಜಂಟಿ ಸದನ ಸಮಿತಿಗೆ ಪೂಜಾರಿ ಒತ್ತಾಯ

7
ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಭಾರಿ ಭ್ರಷ್ಟಾಚಾರ ಆರೋಪ

ಜಂಟಿ ಸದನ ಸಮಿತಿಗೆ ಪೂಜಾರಿ ಒತ್ತಾಯ

Published:
Updated:
Deccan Herald

ಶಿವಮೊಗ್ಗ: ರಾಜ್ಯದ ಹಲವು ಜಿಲ್ಲೆಗಳ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆಗಾಗಿ ಜಂಟಿ ಸದನ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

ಬಿಜೆಪಿ ಅಧಿಕಾರದ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಶುದ್ದ ನೀರಿನ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿತ್ತು. ನಂತರ ಬಂದ ಸರ್ಕಾರ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ವಹಿಸಿಲ್ಲ. ಇದುವರೆಗೂ ಶೇ 50ರಷ್ಟು ಕೆಲಸಗಳು ಆಗಿಲ್ಲ. ಹಲವು ಕಡೆ ಭ್ರಷ್ಟಾಚಾರ ನಡೆದಿದೆ ಎಂದು ಶನಿವಾರ ಪತ್ರುಕಾಗೋಷ್ಠಿಯಲ್ಲಿ ದೂರಿದರು.

ರಾಜ್ಯ ವಿಭಜನೆಗೆ ಅವಕಾಶ ಇಲ್ಲ:  ರಾಜ್ಯದಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿರುವುದು ದುರದೃಷ್ಟಕರ. ಈ ಎಲ್ಲ ಬೆಳವಣಿಗೆಗಳಿಗೂ ಕುಮಾರಸ್ವಾಮಿ ಸರ್ಕಾರ ಕಾರಣ. ರಾಜ್ಯ ಒಡೆಯಲು ಬಿಜೆಪಿ ಅವಕಾಶ ನೀಡುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದರೆ ಪ್ರತ್ಯೇಕತೆಯ ಕೂಗು ನಿವಾರಿಸಲು ಸಾಧ್ಯ. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಈ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು. ಹೈದರಾಬಾದ್–ಕರ್ನಾಟಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಲತಾಯಿ ಧೋರಣೆ ಸಲ್ಲದು ಎಂದರು.

ರಾಜ್ಯದಲ್ಲಿನ ಹಾಸ್ಟೆಲ್‌ಗಳು ನರಕ ಕೂಪಗಳಾಗಿವೆ. ಹಲವು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಸ್ನಾನದ ಕೊಠಡಿಗಳಿಗೆ ಬಾಗಿಲುಗಳೇ ಇಲ್ಲ. ಸೂಕ್ತ ರಕ್ಷಣೆ ಇಲ್ಲ. ಕುಡಿಯುವ ನೀರು, ಹಾಸಿಗೆ, ದಿಂಬು, ಶೌಚಾಲಯಗಳೇ ಇಲ್ಲದಂತಹ ಸ್ಥಿತಿ ಇದೆ. ಕೇಂದ್ರ ನೀಡುವ ಅನುದಾನ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯದ ಆಡಳಿತದ ನೆಲ ಕಚ್ಚಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಲತಾಯಿ ಧೋರಣೆ ಉತ್ತರ ಕರ್ನಾಟಕದ ಜನರ ಭಾವನೆ ಕೆರಳಿಸಿದೆ ಎಂದು ವಿಶ್ಲೇಷಿಸಿದರು.

ಬಳಕೆಯಾಗದ ‘ಸ್ಮಾರ್ಟ್‌ಸಿಟಿ’ ಹಣ:  ಕೇಂದ್ರದ ಬಹುನಿರೀಕ್ಷಿತ ‘ಸ್ಮಾರ್ಟ್‌ಸಿಟಿ’ ಯೋಜನೆ ಎರಡು ವರ್ಷಗಳಾದರೂ ಅನುಷ್ಠಾನ ಆರಂಭವಾಗಿಲ್ಲ. ಶಿವಮೊಗ್ಗ ಸೇರಿದಂತೆ ರಾಜ್ಯದ 7 ನಗರಗಳು ಆಯ್ಕೆಯಾಗಿವೆ. ಕೇಂದ್ರದ ಅನುದಾನ ₨ 889 ಕೋಟಿ, ರಾಜ್ಯದ ಅನುದಾನ ₨ 836 ಕೋಟಿ ಸೇರಿ ಒಟ್ಟು ₨ 1,775 ಕೋಟಿ ಬಿಡುಗಡೆಯಾಗಿದೆ. ಶೇ 3 ರಷ್ಟೂ ಕೆಲಸ ಆಗಿಲ್ಲ. ಇದುವರೆಗೂ ಖರ್ಚಾದ ಮೊತ್ತ ₨ 51.90 ಕೋಟಿ. ಕೇಂದ್ರದ ಬಹುದೊಡ್ಡ ಯೋಜನೆ ಹೀಗೆ ವ್ಯರ್ಥವಾಗುತ್ತಿದೆ ಎಂದು ದೂರಿದರು.

ಶಿವಮೊಗ್ಗ ಜಿಲ್ಲೆಯಲ್ಲಿ 43,743 ಮನೆಗಳು ನಿರ್ಮಾಣ ಆಗಬೇಕಿತ್ತು. ಆದರೆ, ಶೇ 32ರಷ್ಟು ಮನೆಗಳ ಕಾಮಗಾರಿ ಆರಂಭಿಸಲಾಗಿದೆ. 6,800 ಮನೆಗಳು ಆರಂಭವೇ ಆಗಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ 56 ಸಾವಿರ ಕೊಳವೆ ಬಾವಿ ಕೊರೆಯಲಾಗಿದೆ. ಶೇ 50ರಷ್ಟು ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹಲವು ಕಡೆ ಬಾವಿಗಳನ್ನೇ ಕೊರೆದಿಲ್ಲ. ಹೀಗಾದರೆ ರಾಜ್ಯ ಸರ್ಕಾರದಿಂದ ಬಡವರು, ರೈತರ ಪ್ರಗತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಮಾಜಿ ಶಾಸಕ ಬಿ.ವೈ. ರಾಘವೇಂದ್ರ, ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಮುಖಂಡರಾದ ಪದ್ಮನಾಭ ಭಟ್, ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಗಿರೀಶ್ ಪಟೇಲ್, ಎನ್.ಜೆ. ರಾಜಶೇಖರ್, ಬಿ.ಆರ್. ಮಧುಸೂದನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !