ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಪಟ್ಟು ದಾಳಿಂಬೆ ಬೆಳೆದ ಹಿರೇಪಟ್ಟ: ಬಂಪರ್ ಇಳುವರಿ ನಿರೀಕ್ಷೆ

Last Updated 22 ಜುಲೈ 2019, 19:30 IST
ಅಕ್ಷರ ಗಾತ್ರ

ಇಂಡಿ: ಹತ್ತಾರು ವರ್ಷಗಳಿಂದ ಕಬ್ಬಿನ ಬೆಳೆಯನ್ನೇ ನೆಚ್ಚಿಕೊಂಡಿದ್ದ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ರೈತ ಸೋಮಶೇಖರಯ್ಯ ಹಿರೇಪಟ್ಟ ಅವರು ಮಳೆಯ ಅಭಾವದಿಂದಾಗಿ ಈಗ ದಾಳಿಂಬೆ ಬೆಳೆಯತ್ತ ಮುಖ ಮಾಡಿದ್ದಾರೆ.

ಇವರಿಗೆ 8 ಎಕರೆ ಜಮೀನಿದೆ. ನಿೀರಿನ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದರು. ಜಮೀನಿನಲ್ಲಿದ್ದ ಕೊಳವೆ ಬಾವಿಯ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು ಒಂದು ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದು, ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಮೊದಲ ವರ್ಷದಲ್ಲೇ ಎಲ್ಲಾ ಖರ್ಚು ಕಳೆದು ₹1 ಲಕ್ಷ ಲಾಭ ಕೈಸೇರಿದೆ. ಸದ್ಯ ಒಂದು ಗಿಡದಲ್ಲಿ ಸುಮಾರು 150 ರಿಂದ 160 ಹಣ್ಣುಗಳು ಇವೆ. ಸೆಪ್ಟೆಂಬರ್ ತಿಂಗಳಲ್ಲಿ ಕಟಾವಿಗೆ ಬರುವ ದಾಳಿಂಬೆ ಬೆಳೆಯಿಂದ ಸುಮಾರು ₹5 ರಿಂದ ₹6 ಲಕ್ಷ ಆದಾಯದ ನಿರೀಕ್ಷೆ ಹೊಂದಿದ್ದಾರೆ.

‘ಕೊಳವೆಬಾವಿ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ, ಹೊಂಡದಿಂದ ಗಿಡಗಳಿಗೆ ನೀರುಣಿಸಲಾಗುತ್ತಿದೆ. ತೋಟಗಾರಿಕಾ ಇಲಾಖೆ ಹನಿ ನೀರಾವರಿ ಮತ್ತು ಕೃಷಿ ಹೊಂಡಕ್ಕಾಗಿ ಅನುದಾನ ನೀಡಿದ್ದರಿಂದ ಅನುಕೂಲವಾಗಿದೆ’ ಎಂದು ಸೋಮಶೇಖರಯ್ಯ ಹೇಳುತ್ತಾರೆ.

‘8 ಎಕರೆ ಜಮೀನಿನ ಪೈಕಿ 6 ಎಕರೆಯಲ್ಲಿ ಕಬ್ಬು ನಾಟಿ ಮಾಡಲಾಗಿತ್ತು. ನೀರಿನ ಕೊರತೆಯಿಂದಾಗಿಯಾಗಿ ₹10 ಸಾವಿರಕ್ಕೆ ಜಾನುವಾರುಗಳ ಮೇವಿಗಾಗಿ ಮಾರಾಟ ಮಾಡಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

ದಾಳಿಂಬೆ ಗಿಡಗಳಿಗೆ ತಿಪ್ಪೆ ಗೊಬ್ಬರವನ್ನು ಬಳಕೆ ಮಾಡಿದ್ದಾರೆ. ಇದಕ್ಕಾಗಿ 2 ಹಸು, 2 ಎಮ್ಮೆ ಸಾಕಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆ ಮಾಡದ್ದರಿಂದ ಗಿಡಗಳು ಚೆನ್ನಾಗಿ ಬೆಳೆದಿವೆ. ಕೃಷಿ ಇಲಾಖೆ ಸಲಹೆಯಂತೆ ಔಷಧಿ ಸಿಂಪರಣೆ ಮಾಡಲಾಗಿದೆ. ಇದೀಗ ಬೆಳೆಗೆ ಯಾವುದೇ ರೋಗವಿಲ್ಲ.

‘ಸ್ವಲ್ಪ ಜಮೀನಿನಲ್ಲಿರುವ ಬೆಳೆಯ ನಿರ್ವಹಣೆ ಸುಲಭವಾಗಿದ್ದು, ನೀರಿನ ಬಳಕೆಯೂ ಕಡಿಮೆ ಇದೆ. ದಾಳಿಂಬೆ ಬೆಳೆ ನನ್ನ ಕೈಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬೆಳೆಯ ಜತೆಯಲ್ಲಿಯೇ ಅಂತರ ಬೇಸಾಯ ಮಾಡಿ ರಾಜಗೀರ, ಕಿರಸಾಲೆ, ಮೆಂತೆ, ಹತ್ತರಕಿ ಮತ್ತು ಸಬ್ಬಸಗಿ ಪಲ್ಲೆಗಳನ್ನು ಬೆಳೆದು ಕೃಷಿ ಕಾರ್ಮಿಕರಿಗೆ ಉಚಿತವಾಗಿ ನೀಡುವುದರೊಂದಿಗೆ ತಮ್ಮ ಮನೆಗೂ ಬಳಸುತ್ತಿದ್ದಾರೆ.

*
ಕೃಷಿಯಲ್ಲಿ ಲಾಭ ಪಡೆಯಲು ಮಣ್ಣು ಪರೀಕ್ಷೆ ಮಾಡಿಸಬೇಕು. ಜಮೀನಿನಲ್ಲಿ ನೀರಿನ ಲಭ್ಯತೆಯನ್ನು ಮನಗಂಡು ಅದಕ್ಕೆ ತಕ್ಕಂತಹ ಬೆಳೆಗಳನ್ನು ಬೆಳೆಯಬೇಕು.
–ಸೋಮಶೆಖರಯ್ಯ ಹಿರೇಪಟ್ಟ, ರೈತ, ಸಾಲೋಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT