ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ರೈತನ ಯಶಸ್ವಿ ಕುರಿ ಸಾಕಾಣಿಕೆ

ರೋಣಿಹಾಳದ ಜೈಭವಾನಿ ಕುರಿ, ಕೋಳಿ ಫಾರ್ಮ್
Last Updated 5 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಕೊಲ್ಹಾರ: ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ, ವರ್ಷದ ಹಿಂದೆ ಒಂದು ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿದ ಕುರಿ ಸಾಕಾಣಿಕೆಯಿಂದ ಅಧಿಕ ಲಾಭ ಗಳಿಸಿಕೊಳ್ಳುವ ಮೂಲಕ ಯುವ ರೈತ ಸ್ವಾವಲಂಬಿ ಹಾಗೂ ನೆಮ್ಮದಿ ಬದುಕು ಕಂಡುಕೊಂಡಿದ್ದಾರೆ.

ಕೊಲ್ಹಾರ ತಾಲ್ಲೂಕಿನ ರೋಣಿಹಾಳ ಗ್ರಾಮದ ಯುವ ರೈತ ಅಮಿತ್ ಜಾಗೀರದಾರ ಓದಿದ್ದು ಪಿಯುಸಿ ಮಾತ್ರ. ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಹೊತ್ತು ಕುರಿ ಹಾಗೂ ಕೋಳಿ ಸಾಕಾಣಿಕೆಯತ್ತ ಆಸಕ್ತಿ ಬೆಳೆಸಿಕೊಂಡರು. ಕುರಿ ಸಾಕಾಣಿಕೆ ಕುರಿತು ಟಿವಿ ಹಾಗೂ ಯೂಟ್ಯೂಬ್‌ಗಳಲ್ಲಿ ಮಾಹಿತಿ ಪಡೆದರು.

ಹಿಟ್ನಳ್ಳಿಯಲ್ಲಿರುವ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ವರ್ಷಗಳ ಹಿಂದೆ ₹4 ಲಕ್ಷ ಖರ್ಚು ಮಾಡಿ ರೋಣಿಹಾಳ ಕ್ರಾಸ್ ಬಳಿ ಹೆದ್ದಾರಿಗೆ ಹೊಂದಿಕೊಂಡಿರುವ ತಮ್ಮ ನಾಲ್ಕು ಎಕರೆ ಜಮೀನಿನ ಪೈಕಿ ಒಂದು ಎಕರೆ ಪ್ರದೇಶದಲ್ಲಿ ಎರಡು ಅಂತಸ್ತಿನ ಕುರಿ ಸಾಕಾಣಿಕೆ ಘಟಕ ನಿರ್ಮಾಣ ಮಾಡಿದರು. ಸುಮಾರು ₹3 ಲಕ್ಷ ಖರ್ಚು ಮಾಡಿ ‘ಬಿಳಿ ಯಾಳಗ’ ತಳಿಯ 100 ಕುರಿ ಮರಿಗಳನ್ನು ಖರೀದಿಸಿ ಕುರಿ ಸಾಕಾಣಿಕೆ ಪ್ರಾರಂಭಿಸಿದರು.

ಜಮೀನಿನ ಕೊಳವೆ ಬಾವಿಯಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಕುರಿಗಳಿಗೆ ಬೇಕಾದ ಹಸಿ ಮೇವನ್ನು ತಮ್ಮ ಜಮೀನಿನಲ್ಲೇ ಬೆಳೆಯುತ್ತಿದ್ದಾರೆ. ಒಣ ಕಣಿಕೆ, ಹೆಡ್ ಲೂಜರ್ಸ್, ಮುಸುಕಿನ ಜೋಳದ ಕಾಳುಗಳನ್ನು ದಿನಕ್ಕೆ ಎರಡು ಬಾರಿ ಕೊಡುತ್ತಿದ್ದಾರೆ. ವೈಜ್ಞಾನಿಕವಾಗಿ ಎರಡು ಅಂತಸ್ತಿನ ಕುರಿ ಘಟಕ ನಿರ್ಮಿಸಿ, ಮೇಲಂತಸ್ತಿನಲ್ಲಿ ಕುರಿಗಳನ್ನು ಹಾಗೂ ಕೆಳಗಿನ ಅಂತಸ್ತಿನಲ್ಲಿ ಕೋಳಿಗಳನ್ನು ಸಾಕಿದ್ದಾರೆ. ಕೆಳಗೆ ಸಂಗ್ರಹವಾಗುವ ಸಾವಯವ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ.

ಬಸವನ ಬಾಗೇವಾಡಿ, ಅಮೀನಗಡ ಹಾಗೂ ಕೆರೂರು ಸಂತೆಗಳಲ್ಲಿ ಕುರಿ ಮರಿಗಳನ್ನು ಖರೀದಿ ಮಾಡಿ, ಪೌಷ್ಟಿಕ ಆಹಾರ ನೀಡಿ, ದಷ್ಟಪುಷ್ಟವಾಗಿ ಸಾಕುತ್ತಾರೆ. ₹5 ಸಾವಿರಕ್ಕೆ ಖರೀದಿಸಿದ ಕುರಿಮರಿ ವರ್ಷದ ನಂತರ ಸುಮಾರು ₹15 ಸಾವಿರದವರೆಗೂ ಮಾರಾಟವಾಗುತ್ತದೆ. ವಿಶೇಷವಾಗಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ಹೀಗೆ ಕುರಿ, ಕೋಳಿ ಸಾಕಾಣಿಕೆ ಹಾಗೂ ಗೊಬ್ಬರ ಮಾರಾಟದಿಂದ ಅಧಿಕ ಲಾಭ ಗಳಿಸಿಕೊಳ್ಳುತ್ತಿರುವ ಯುವ ರೈತ ಅಮಿತ್ ಜಾಗೀರದಾರ್ ಕೃಷಿಯಲ್ಲಿ ಬದುಕು ರೂಪಿಸಿಕೊಂಡು ಯುವಕರಿಗೆ ಮಾದರಿಯಾಗಿದ್ದಾರೆ. ಸಂಪರ್ಕ ಸಂಖ್ಯೆ: 99458 63723

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT