ಕೃಷ್ಣಾಪುರದೊಡ್ಡಿಯಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮ

7
ರಥೋತ್ಸವದಲ್ಲಿ ಅನಿತಾ ಕುಮಾರಸ್ವಾಮಿ ಭಾಗಿ

ಕೃಷ್ಣಾಪುರದೊಡ್ಡಿಯಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮ

Published:
Updated:
Deccan Herald

ಕೈಲಾಂಚ (ರಾಮನಗರ): ಇಲ್ಲಿನ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ರುಕ್ಮಿಣಿ ಸತ್ಯಭಾಮಾ ಸಮೇತ ಕೃಷ್ಣಸ್ವಾಮಿಯ ಬ್ರಹ್ಮ ರಥೋತ್ಸವವು ಸೋಮವಾರ ಸಂಭ್ರಮದಿಂದ ನಡೆಯಿತು.

ರಥೋತ್ಸವದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ರಥೋತ್ಸವಕ್ಕೆ ಚಾಲನೆ ನೀಡಿದ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ ‘ಶ್ರೀಕೃಷ್ಣನು ರಾಮ, ನರಸಿಂಹ, ವರಾಹ ಅವತಾರ ಪಡೆದಿದ್ದರೂ ಕೃಷ್ಣನ ಅವತಾರವೇ ಸಂಪೂರ್ಣವಾದುದು. ಶ್ರೀಕೃಷ್ಣ ಎಲ್ಲರನ್ನೂ ಸರಿ ಸಮಾನವಾಗಿ ಪ್ರೀತಿಯಿಂದ ಕಾಣುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾನೆ’ ಎಂದು ತಿಳಿಸಿದರು.

‘ಪ್ರಪಂಚ ಗೆದ್ದರೂ ಮನಸ್ಸಿಗೆ ನೆಮ್ಮದಿ, ಸುಖ ಸಂತೋಷ ಇಲ್ಲದ ಮೇಲೆ ಜೀವನಕ್ಕೆ ಅರ್ಥವಿರುವುದಿಲ್ಲ. ನಿಜವಾದ ಸಂತೋಷ ಸುಖ ನೆಮ್ಮದಿ ಕಾಣಬೇಕಾದರೆ ಭಗವಂತನನ್ನು ಅರಿಯಬೇಕು. ಅವನಲ್ಲಿ ಶರಣಾಗಬೇಕು. ಶ್ರೀಕೃಷ್ಣನ ಸಂದೇಶ ಪಾಲನೆ ಮಾಡಬೇಕು’ ಎಂದು ತಿಳಿಸಿದರು.

ಮಕ್ಕಳು ಸಂಸ್ಕೃತಿಯ ಕೇಂದ್ರ ಬಿಂದು. ವಿದೇಶಿ ಸಂಸ್ಕೃತಿಗೆ ಮಾರುಹೋಗದಂತೆ ಪೋಷಕರು ಎಚ್ಚರ ವಹಿಸಬೇಕು. ಮಕ್ಕಳಲ್ಲಿ ಹೊಸತನ, ಸನಾತನ ಪರಂಪರೆಯ ಅರಿವು ಮೂಡಿಸಬೇಕು. ಅವರಲ್ಲಿ ದೇವರನ್ನು ಕಾಣಬೇಕು ಎಂದು ತಿಳಿಸಿದರು.

ಎಲ್ಲಾ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಮೂಡಿಸುವ ಕೆಲಸ ಅಗಬೇಕು. ಶಾಲಾ ಮಕ್ಕಳಿಗೆ ಭಗವದ್ಗೀತೆಯ ಸಾರವನ್ನು ತಿಳಿಸಿಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳಲ್ಲಿ ಶಾಂತಿ ನೆಲೆಸುತ್ತದೆ. ಜನರು ಯಾವುದೇ ರೀತಿಯ ಅಧರ್ಮದ ಕೆಲಸಗಳಲ್ಲಿ ತೊಡಗಿಸಿಕೊಳ್ಳದೆ ಧರ್ಮ ಸಮ್ಮತವಾದ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ಪ್ರಧಾನ ಅರ್ಚಕರಾದ ಆರ್. ನರಸಿಂಹಮೂರ್ತಿ ಮಾತನಾಡಿ, ಕೃಷ್ಣ ಎಂದರೆ ಮನುಷ್ಯತ್ವ ಬೆಳೆಯಬಹುದಾದ ಬಹುದೊಡ್ಡ ಎತ್ತರ. ಕೃಷ್ಣ ಎಂದರೆ ಮನುಷ್ಯರಾದವರು ಸಾಯುವವರೆಗೂ ಜೋಪಾನವಾಗಿ ಕಾಯ್ದುಕೊಳ್ಳಬೇಕಾದ ಮಗುವಿನ ಮನಸ್ಸಿನ ಸಾಕಾರ ರೂಪವಾಗಿದೆ ಎಂದು ತಿಳಿಸಿದರು.

ಶ್ರೀಕೃಷ್ಣ ದೇವಸ್ಥಾನವನ್ನು 2000ರಲ್ಲಿ ನಿರ್ಮಿಸಲಾಯಿತು. ಈ ಬಾರಿ ರಥವನ್ನು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು.
ಸಂಗೀತ ವಿದ್ವಾನ್‌ ಶಿವಾಜಿರಾವ್ ಮತ್ತು ತಂಡದವರಿಂದ ಕೀರ್ತನೆ ಮತ್ತು ದೇವರನಾಮ, ಜಾನಪದ ಕಲಾ ತಂಡಗಳಿಂದ ಪ್ರದರ್ಶನ, ಮಕ್ಕಳಿಗೆ ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ, ಪ್ರವಚನ, ಬಾಲಗೋಕುಲ ಮಕ್ಕಳಿಂದ ಕಾರ್ಯಕ್ರಮ, ಮಲ್ಲಿಕಾ ಹರಿನಾಥ್‌ ಅವರಿಂದ ದೇವರನಾಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕೃಷ್ಣ ಸೇವಾ ಟ್ರಸ್ಟಿನ ಪದಾಧಿಕಾರಿಗಳಾದ ಕೃಷ್ಣಪ್ಪ, ಕೆ. ಗೋಪಾಲ್, ಶಿವರಾಜು, ಶಿವರಾಮು, ಜಯಣ್ಣ, ಶಿವಮಾದು, ವಾಸುಗೌಡ, ಸತೀಶ್, ಕವಿತಾ ರಾವ್, ಕುಮಾರ್, ಮಹೇಶ್, ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !