ಅರ್ಪಿಸದ ‘ಬಾಗಿನ’ಕ್ಕಾಗಿ ₹ 35 ಲಕ್ಷ ಕೃಷ್ಣಾರ್ಪಣ..!

7
ಕೃಷ್ಣೆಯ ತಟದಲ್ಲೀಗ ಅಸಮಾಧಾನದ ಅಪಸ್ವರ ತಾರಕಕ್ಕೆ; ಆಡಳಿತಾರೂಢರ ವಿರುದ್ಧ ಹೆಚ್ಚಿದ ಆಕ್ರೋಶ

ಅರ್ಪಿಸದ ‘ಬಾಗಿನ’ಕ್ಕಾಗಿ ₹ 35 ಲಕ್ಷ ಕೃಷ್ಣಾರ್ಪಣ..!

Published:
Updated:
Deccan Herald

ವಿಜಯಪುರ:  ಉತ್ತರ ಕನ್ನಡಿಗರ ಪಾಲಿನ ಜೀವನದಿ ‘ಕೃಷ್ಣೆ’ಗೆ ಅಪಮಾನ... ಒಂದು ತಿಂಗಳು ತಡವಾಗಿ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದರು. ಅಂತಹುದರಲ್ಲಿ ‘ಬಾಗಿನ’ ಅರ್ಪಿಸದಿದ್ದುದು ನಿಜಕ್ಕೂ ನೋವಿನ ಸಂಗತಿ... ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗಿಗೆ ಭಾನುವಾರದ ಘಟನೆ ಇಂಬು ಕೊಟ್ಟಂತೆ...

ಪ್ರಕೃತಿಯ ಮುಂದೆ ಯಾರೂ ಏನು ಮಾಡಲಾಗಲ್ಲ ಎಂಬುದು ಎಲ್ಲರಿಗೂ ಮನದಟ್ಟಿರುವ ವಿಚಾರ. ಸಹಜವಾಗಿಯೇ ಭಾನುವಾರ ಹುಬ್ಬಳ್ಳಿ, ಆಲಮಟ್ಟಿ ಎರಡೂ ಕಡೆ ಪ್ರತಿಕೂಲ ಹವಾಮಾನವಿತ್ತು. ಹೆಲಿಕಾಫ್ಟರ್ ಹಾರಾಟ ಸಾಧ್ಯವಿಲ್ಲ ಎಂಬುದು ಮಧ್ಯಾಹ್ನವೇ ಖಚಿತಗೊಂಡಿತ್ತು.

ಹುಬ್ಬಳ್ಳಿ ಕಾರ್ಯಕ್ರಮ ಮುಗಿದೊಡನೆ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಬಂದು ಕೃಷ್ಣೆಗೆ ಗೌರವ ಸಲ್ಲಿಸಬೇಕಿತ್ತು. ತಮ್ಮಿಂದ ಇದು ಸಾಧ್ಯವಿಲ್ಲ ಎಂಬುದು ಅರಿವಾದೊಡನೆ ಕನಿಷ್ಠ ಪಕ್ಷ ಆಲಮಟ್ಟಿಯಲ್ಲೇ ಬೀಡುಬಿಟ್ಟಿದ್ದ ವಿಜಯಪುರ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ, ಶಿವಾನಂದ ಪಾಟೀಲರಿಗೆ ಬಾಗಿನ ಅರ್ಪಿಸಲು ಸೂಚಿಸಬೇಕಿತ್ತು.

ತಮಗೆ ಬಿಡುವಾದಾಗ ಪತ್ನಿ ಜತೆ ಭೇಟಿ ನೀಡಿ, ಕೃಷ್ಣೆಗೆ ಗೌರವ ಸಲ್ಲಿಸಬಹುದಿತ್ತು. ಈ ಕೆಲಸ ನಡೆಸದಿದ್ದರಿಂದ ವೃಥಾ ಜನರ ತೆರಿಗೆ ಹಣ ಕನಿಷ್ಠ ₹ 35 ಲಕ್ಷ ಕೃಷ್ಣಾರ್ಪಣವಾದಂತಾಯ್ತು...

ಎಲ್ಲಾ ಸಿದ್ಧತೆ ನಡೆದಿದ್ದವು. ಈ ಭಾಗದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕಾಗಿಯೇ ಚುನಾವಣಾ ಆಯೋಗದಿಂದ ವಿಶೇಷ ಅನುಮತಿಯನ್ನು ಪಡೆಯಲಾಗಿತ್ತು. ಆದರೂ ಇದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಕೃಷ್ಣೆಗೆ ಗೌರವ ಪೂರ್ವಕವಾಗಿ ಬಾಗಿನವೂ ಅರ್ಪಣೆಯಾಗಲಿಲ್ಲ. ಅಕ್ಷರಶಃ ಈ ಘಟನೆ ನಮ್ಮಗಳ ಮನಸ್ಸಿಗೆ ಘಾಸಿಯುಂಟು ಮಾಡಿದೆ...

ಬಾಗಿನ ಅರ್ಪಣೆಯ ಮುಂದೂಡಿಕೆ ಸುದ್ದಿ ಆಲಮಟ್ಟಿ ಜಲಾಶಯದ ಅಂಗಳದಲ್ಲಿ ನೆರೆದಿದ್ದ ಕೃಷ್ಣೆಯ ಕುಡಿಗಳ ಕಿವಿಗೆ ಬೀಳುತ್ತಿದ್ದಂತೆ ವ್ಯಕ್ತವಾದ ಪ್ರಮುಖ ಅನಿಸಿಕೆಗಳು. ಕನಿಷ್ಠ ಪಕ್ಷ ವಿಜಯಪುರ ಜಿಲ್ಲಾ ಉಸ್ತುವಾರಿ ಎಂ.ಸಿ.ಮನಗೂಳಿ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ ಆದ್ರೂ ಈ ಪ್ರಕ್ರಿಯೆ ಪೂರ್ಣಗೊಳಿಸಿ ಶೋಭೆ ತರಬೇಕಿತ್ತು ಎಂದವರೇ ಹಲವರು.

‘ಗರ್ಭವತಿಯಾದ ಹೆಣ್ಣಿಗೆ ನಡೆಸುವ ಕುಬ್ಬಸದ ಕಾರ್ಯಕ್ರಮ ನಮ್ಮ ಭಾಗದಲ್ಲಿ ಶ್ರೇಷ್ಠ. ಕೆಲವೊಮ್ಮೆ ಈ ಕುಬ್ಬಸದ ಕಾರ್ಯಕ್ರಮವನ್ನು ಕೂಸು ಹುಟ್ಟೋದು ಅನುಮಾನ ಎಂಬ ಕಾರಣಕ್ಕೆ ಏಕಾಏಕಿ ರದ್ದುಗೊಳಿಸುತ್ತಾರೆ. ಇಂದಿನ ಸಮಾರಂಭವೂ ಇದೇ ರೀತಿ ನಡೆಯಿತು. ಮೈದುಂಬಿದ್ದ ಕೃಷ್ಣೆಗೆ ಸಕಾಲಕ್ಕೆ ಗೌರವ ಕೊಡದಿದ್ದುದು ತುಂಬಾ ನೋವಿನ ಸಂಗತಿ’ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ‘ಪ್ರಜಾವಾಣಿ’ ಬಳಿ ಬೇಸರ ವ್ಯಕ್ತಪಡಿಸಿದರು.

ಸಾಂಕೇತಿಕ ಪೂಜೆಯೂ ನಡೆಯಲಿಲ್ಲ..!

‘ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕ ಅಂದರೆ, ಸದಾ ನಿರ್ಲಕ್ಷ ಎನ್ನುವುದಕ್ಕೆ ಈ ಘಟನೆ ನೈಜ ನಿದರ್ಶನ. ಕೃಷ್ಣೆಗೆ ಗೌರವ ಸಲ್ಲಿಸಿದ ಬಳಿಕ ಬೇರೆ ಕಾರ್ಯಕ್ರಮ ನಿಗದಿ ಪಡಿಸಿಕೊಂಡಿದ್ದರೇ ಏನಾಗುತ್ತಿತ್ತು’ ಎಂದು ಪ್ರಶ್ನಿಸಿದವರು ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಸಿದ್ರಾಮಪ್ಪ ರಂಜಣಗಿ.

‘ಹವಾಮಾನ ವೈಪರೀತ್ಯ ಒಪ್ಪಿಕೊಂಡಿದ್ದೇವೆ. ಆದರೆ ಕುಮಾರಸ್ವಾಮಿಗೆ ಕೃಷ್ಣೆಯ ಬಗ್ಗೆ ನೈಜ ಕಾಳಜಿ, ಪ್ರೀತಿಯಿದ್ದರೆ, ಹುಬ್ಬಳ್ಳಿಯಿಂದ ಆಲಮಟ್ಟಿಗೆ ರಸ್ತೆ ಮಾರ್ಗವಾಗಿ ಬರುತ್ತಿದ್ದರು. ಇಲ್ಲವೇ ಒಂದ್‌ ದಿನ ವಸತಿ ಇದ್ದು ಬಾಗಿನ ಅರ್ಪಿಸುತ್ತಿದ್ದರು. ದಕ್ಷಿಣದವರಿಗೆ ನಮ್ಮ ಬಗ್ಗೆ ಮೊದಲಿನಿಂದಲೂ ತಾತ್ಸಾರ ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆ’ ಎಂದು ರೈತ ಶ್ರೀಶೈಲ ಆಳಂದಿ ಅಸಮಾಧಾನ ವ್ಯಕ್ತಪಡಿಸಿದರು.

‘ಕುಮಾರಸ್ವಾಮಿ ಬರ್ತಾನಂತ ತೇರದಾಳದಿಂದ ಬಂದಿದ್ದೆ. ಆದ್ರಾ ಅವ ಬರಲಿಲ್ಲ. ಅವ್ನಾ ನೋಡಬೇಕು ಎಂಬ ಹಂಬಲವಿತ್ತು. ಅವ ಬಾರದಿದ್ದರಿಂದ ನಿರಾಸೆಯಾಯ್ತು’ ಎಂದು ತೇರದಾಳದ ಶ್ರೀಶೈಲ ಅಂಗಡಿ ಬೇಸರ ವ್ಯಕ್ತಪಡಿಸಿದರು.

‘ಬಾಗಿನ ಅರ್ಪಣೆಗಾಗಿ 10 ದಿನಗಳಿಂದ ಸಿದ್ಧತೆ ನಡೆದಿತ್ತು. ಇದಕ್ಕಾಗಿ ಕನಿಷ್ಠ 15ಕ್ಕೂ ಹೆಚ್ಚು ಅಧಿಕಾರಿಗಳು, 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದುಡಿದಿದ್ದರು. ಈ ಕಾರ್ಯಕ್ರಮಕ್ಕೆ ಕನಿಷ್ಠ ₨ 35 ಲಕ್ಷಕ್ಕೂ ಅಧಿಕ ಹಣವನ್ನು ಕೆಬಿಜೆಎನ್‌ಎಲ್‌ ವತಿಯಿಂದ ಖರ್ಚು ಮಾಡಲಾಗಿದೆ. ಬಾಗಿನದ ಬದಲಾಗಿ ಅವಳಿ ಜಿಲ್ಲೆಯ ಉಸ್ತುವಾರಿ ಸಚಿವರು, ಅಧಿಕಾರಿಗಳು ಸೇರಿ ಕೃಷ್ಣೆಗೆ ಸಾಂಕೇತಿಕ ಪೂಜೆಯನ್ನಾದರೂ ನೆರವೇರಿಸಬೇಕಿತ್ತು’ ಎಂದು ನಿಡಗುಂದಿಯ ಬಸವರಾಜ ದಂಡಿನ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !