ಶುಕ್ರವಾರ, ಡಿಸೆಂಬರ್ 13, 2019
26 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಸರ್ಕಾರಿ ಶಾಲಾ ಕಟ್ಟಗಳ ದುರಸ್ತಿ ಕಾರ್ಯ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಳೆಯಿಂದ ಹಾನಿಯಾದ ನಗರ ವ್ಯಾಪ್ತಿಯ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ತ್ವರಿತವಾಗಿ ಆರಂಭಿಸಬೇಕು. ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಮಕ್ಕಳ ಜೀವದ ಜತೆ ಚೆಲ್ಲಾಟವಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಸರ್ಕಾರ ಅನುದಾನ ನೀಡಿದೆ. ಸಬೂಬು ಹೇಳದೇ ತಕ್ಷಣ ಕಾಮಗಾರಿ ಆರಂಭಿಸಬೇಕು. ಜನವರಿ ಒಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಕಳಪೆ ಗುಣಮಟ್ಟ ಕಂಡುಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

84 ಶಾಲೆಗಳಲ್ಲಿ 74 ಶಾಲೆಗಳ ಕಾಮಗಾರಿ ನ.30ರ ಒಳಗೆ, ಉಳಿದ 10 ಶಾಲೆಗಳ ಕಾಮಗಾರಿ ಡಿ.15ರ ಒಳಗೆ ಆರಂಭಿಸಲು ಅನುಮತಿ ನೀಡಲಾಗುವುದು. ಡಿ.4ರಂದು ಬೆಳಿಗ್ಗೆ ಶಂಕುಸ್ಥಾಪನಾ ಕಾರ್ಯಕ್ರಮ ಆಯೋಜಿಸಲಾಗುವುದು.  47 ಶಾಲೆಗಳಲ್ಲಿ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಭರವಸೆ ನೀಡಿದರು.

ಪಾಲಿಕೆ ವ್ಯಾಪ್ತಿಯ 35 ವಾರ್ಡುಗಳಲ್ಲಿ ಅಮೃತ್‌, ಸ್ಮಾರ್ಟ್‍ಸಿಟಿ ಯೋಜನೆಗಳಲ್ಲಿ ಕೈಗೊಳ್ಳಲಾಗುವ ಉದ್ಯಾನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉದ್ಯಾನಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಗೋವಿಂದಾಪುರದಲ್ಲಿನ ಆಶ್ರಯ ಕಾಲೊನಿ ಹಾಗೂ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಲು ಡಿಸೆಂಬರ್ ಮೊದಲ ವಾರದಲ್ಲೇ  ಗುತ್ತಿಗೆದಾರರಿಗೆ ಆದೇಶ ನೀಡಬೇಕು ಈಶ್ವರಪ್ಪ ಸೂಚಿಸಿದರು.

‘ಸ್ಮಾರ್ಟ್‍ಸಿಟಿ’ ಯೋಜನೆಯಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಅವುಗಳ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಸ್ಯೆ ಇದೆ. ತಾತ್ಕಾಲಿಕ ಅವಧಿಗೆ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಸೂಚಿಸಲಾಗಿದೆ. ನಗರದ ಹಲವೆಡೆ ಕೈಗೊಂಡ ಕಾಮಗಾರಿಗಳು ಹಾಗೂ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಎಲ್ಲಾ ವಾರ್ಡುಗಳಿಗೂ ಭೇಟಿ ನೀಡಿ, ಪರಿಶೀಲಿಸಲಾಗುವುದು.  ಭೇಟಿಯ ನಂತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದರು.

ನಗರದ ವ್ಯಾಪ್ತಿಯಲ್ಲಿ ಕೈಗೊಂಡ ಯು.ಜಿ.ಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಡಿ.4ರ ಒಳಗೆ ಕನಿಷ್ಠ ಒಂದು ವಾರ್ಡ್‌ಗಾದರೂ ಪೂರ್ಣ ಪ್ರಮಾಣದಲ್ಲಿ ಸಂಪರ್ಕ ಕಲ್ಪಿಸಬೇಕು. ವಿವಿಧ ಯೋಜನೆಗಳಲ್ಲಿ ನಗರದಲ್ಲಿ ಕೈಗೊಂಡ ಕಾಮಗಾರಿಗಳು, ವಿವಿಧ ಇಲಾಖೆಗಳ ಸಮಸ್ಯೆ-ಸವಾಲುಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

ಮಳೆಯಿಂದ ಹಾನಿಗೊಳಗಾದ ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ತಲಾ ₨ 25 ಕೋಟಿ ಮಂಜೂರು ಮಾಡಿದೆ. ಈ ಕ್ಷೇತ್ರಗಳಲ್ಲಿ ಕೈಗೊಂಡ ಕಾಮಗಾರಿಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಕೆ.ಬಿ.ಅಶೋಕನಾಯ್ಕ್, ಎಸ್.ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ, ಉಪ ಮೇಯರ್ ಎಸ್‌.ಎನ್.ಚನ್ನಬಸಪ್ಪ, ಉಪ ವಿಭಾಗಧಿಕಾರಿ ಟಿ.ವಿ.ಪ್ರಕಾಶ್ಉ ಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)