ಗುರುವಾರ , ನವೆಂಬರ್ 21, 2019
27 °C

ತಪ್ಪಿತಸ್ಥರಲ್ಲದಿದ್ದರೆ ನ್ಯಾಯ ಸಿಗುತ್ತದೆ: ಈಶ್ವರಪ್ಪ

Published:
Updated:

ಶಿವಮೊಗ್ಗ: ಆದಾಯ ತೆರಿಗೆ ದಾಳಿ, ಇ.ಡಿ ತನಿಖೆ ಎಲ್ಲ ಸರ್ಕಾರಗಳಲ್ಲೂ ನಡೆಯುವ ಸಾಮಾನ್ಯ ಪ್ರಕ್ರಿಯೆ. ತಪ್ಪಿತಸ್ಥರಲ್ಲದಿದ್ದರೆ ಖಂಡಿತ ಅವರಿಗೂ ನ್ಯಾಯ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಕಾಂಗ್ರೆಸ್ ಅವಧಿಯಲ್ಲಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇಂತಹ ದಾಳಿಗಳು ನಡೆದಿವೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಎಲ್ಲವೂ ಕಾನೂನಿನಂತೆ ನಡೆಯುತ್ತದೆ. ಕೋರ್ಟ್‌ ವಿಚಾರನೆ ನಡೆಸಿ, ತೀರ್ಪು ನೀಡುತ್ತದೆ. ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಏಕೆ ಬಂಧಿಸಿತು? ಇ.ಡಿ ವಿಶೇಷ ಕೋರ್ಟ್‌ ಏಕೆ ಜಾಮಿನು ನೀಡಲಿಲ್ಲ? ಅವರ ತಾಯಿ ಕಣ್ಣೀರು ಹಾಕಿದ್ದನ್ನು ನೋಡಿದೆ. ಯಾರಿಗೂ ಈ ರೀತಿ ಆಗಬಾರದು. ಯಾರೂ ಇಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಪ್ರತಿಕ್ರಿಯಿಸಿದರು.

ದೇಶದ ಆರ್ಥಿಕ ಸುಧಾರಣೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಮೋದಿ ಭಾರತ ಹಾಗೂ ವಿಶ್ವದ ಜನರ ಮನಸ್ಸು ಗೆದ್ದಿದ್ದಾರೆ. ಆರ್ಥಿಕ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದರು.

ನೆರೆ ಹಾನಿ ಪರಿಹಾರಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)