ಮಂಗಳವಾರ, ನವೆಂಬರ್ 19, 2019
22 °C

ಸಿದ್ದರಾಮಯ್ಯ ದಡ್ಡ–ವಡ್ಡ: ಈಶ್ವರಪ್ಪ ಟೀಕೆ

Published:
Updated:

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದಡ್ಡ ಎಂದು ಕರೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ದಡ್ಡ–ವಡ್ಡ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.

ದಡ್ಡ ಜತೆ ‘ವಡ್ಡ’ ಪದ ಬಳಸಿದ ತಪ್ಪು ಅರಿವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅವರು, ‘ನಾನು ಒಂದು ಜನಾಂಗ ಕುರಿತು ಹೇಳಿಲ್ಲ. ಈ ಕುರಿತು ವಿವಾದ ಸೃಷ್ಟಿಸಬೇಡಿ. ವಡ್ಡ ಸಮುದಾಯದ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಶ್ರಮ ಜೀವಿಗಳು. ಸಿದ್ದರಾಮಯ್ಯ ವರ್ತನೆಗಷ್ಟೇ ನನ್ನ ಆಕ್ಷೇಪ’ ಎಂದು ಸಮಜಾಯಿಷಿ ನೀಡಿದರು.

ಸಿದ್ದರಾಮಯ್ಯ ಅವರಿಗೆ ತಲೆ ಇದ್ದಿದ್ರೆ ಅಮಿತ್‌ ಶಾ ವಿರುದ್ಧ ಹೇಳಿಕೆ ನೀಡುತ್ತಿರಲಿಲ್ಲ. ಒಂದು ದೇಶ, ಒಂದು ಭಾಷೆಯಾಗಿ ರಾಷ್ಟೀಯ ಭಾಷೆ ಹಿಂದಿ ಪರಿಗಣಿಸಬೇಕು ಎಂದು ಕರೆ ನೀಡಿದ್ದಾರೆ. ಇಂಗ್ಲಿಷ್‌ ಒಪ್ಪುವ ಭಾರತೀಯರು, ಹಿಂದಿ ಏಕೆ ಒಪ್ಪುವುದಿಲ್ಲ ಎನ್ನುವುದು ಅವರ ಭಾವನೆ ಎಂದು ಸಮರ್ಥಿಸಿಕೊಂಡರು.

ವಿಧಾನಸಭೆಗೆ ಮಧ್ಯತಂತರ ಚುನಾವಣೆ ನಡೆಯುವುದಿಲ್ಲ. ಉಳಿದ ಅವಧಿ ಬಿಜೆಪಿ ಪೂರೈಸುತ್ತದೆ. ಉಪ ಚುನಾವಣೆ ನಂತರ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್‌ಕರ್ ಸೇರಿದಂತೆ ಯಾರೇ ಅಕ್ರಮ ಆಸ್ತಿ ಗಳಿಸಿದ್ದರೂ ತನಿಖೆ ಎದುರಿಸಲೇಬೇಕು. ನ್ಯಾಯಾಲಯದ ಮೇಲೆ ನಂಬಿಕೆ ಇದ್ದವರು ಧೈರ್ಯವಾಗಿ ಇರಬಹುದಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಜಿ.ಟಿ.ದೇವೇಗೌಡ ಬಿಜೆಪಿ ಬರುತ್ತಾರೆ ಎನ್ನುವುದು ಮುಖ್ಯವಲ್ಲ, ದೇವೇಗೌಡ, ಸಿದ್ದರಾಮಯ್ಯ ಬಂದರೂ ಅಚ್ಚರಿ ಇಲ್ಲ. ಮುಳುಗುವ ಪಕ್ಷಗಳಲ್ಲಿ ಯಾರು ಇರುತ್ತಾರೆ ಎಂದು ಛೇಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಲ್ಪ ಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಇರುವ ಸೌಲಭ್ಯಗಳು ಹಿಂದುಳಿದ ವರ್ಗಗಳಿಗೆ ಇಲ್ಲ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಕೋಪಗೊಂಡ ಈಶ್ವರಪ್ಪ, ಅಲ್ಪ ಸಂಖ್ಯಾತರು ಈ ದೇಶದ ಅಳಿಯಂದಿರು. ಅವರಿಗೆ ಇರುವ ಸವಲತ್ತು ಹಿಂದುಳಿದ ವರ್ಗಗಳಿಗೂ ಸಿಗಬೇಕು. ತಕ್ಷಣ ಏನು ಸೌಲಭ್ಯ ಬೇಕಿದೆ ಎಂಬ ಪ್ರಸ್ತಾವ ಸಲ್ಲಿಸಿ ಎಂದು ತಾಕೀತು ಮಾಡಿದರು.

ಪ್ರತಿಕ್ರಿಯಿಸಿ (+)