ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಸಾವಿರ ಮನೆಗಳ ನಿರ್ಮಾಣಕ್ಕೆ ಚಾಲನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 5 ಅಕ್ಟೋಬರ್ 2019, 12:39 IST
ಅಕ್ಷರ ಗಾತ್ರ

ಶಿವಮೊಗ್ಗ: ಗೋವಿಂದಪುರ ಬಳಿ 3 ಸಾವಿರ ಮನೆಗಳ ನಿರ್ಮಾಣಕ್ಕೆ ತಕ್ಷಣ ಟೆಂಡರ್ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗೋವಿಂದಪುರ, ಗೋಪಿಶೆಟ್ಟಿಕೊಪ್ಪದಲ್ಲಿ ಬಹುಮಹಡಿ ಆಶ್ರಯ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಗೋವಿಂದಪುರದಲ್ಲಿ 3 ಸಾವಿರ, ಗೋಪಿಶೆಟ್ಟಿಕೊಪ್ಪದಲ್ಲಿ 1,836ಮನೆಗಳ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ₹5.85 ಲಕ್ಷಗಳಿಗೆ ಒಂದು ಮನೆ ನಿರ್ಮಿಸಲು ತಾಂತ್ರಿಕ ಅನುಮೋದನೆ ದೊರೆತಿದೆ. ಪ್ರತಿ ಫಲಾನುಭವಿಗಳಿಂದ ₹72 ಸಾವಿರದಂತೆ ಒಟ್ಟು 16 ಕೋಟಿ ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ₹29ಕೋಟಿ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಪಾಲೂ ಸಿಗುತ್ತದೆ ಎಂದರು.

ಮೊದಲ ಹಂತದಲ್ಲಿ ಗೋವಿಂದಪುರದಲ್ಲಿ 3 ಸಾವಿರ ಮನೆಗಳಿಗೆ ಟೆಂಡರ್ ಕರೆದು ಲಭ್ಯವಿರುವ ಅನುದಾನದಲ್ಲಿ ಕೆಲಸ ಆರಂಭಿಸಬೇಕು. ರಸ್ತೆ ಮತ್ತಿತರ ಮೂಲಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ನೆಲ ಹಾಗೂ ಎರಡು ಹಂತಸ್ತಿನ ಮನೆಗಳನ್ನು ನಿರ್ಮಿಸಬೇಕು. ಮೊದಲ ಹಂತದಲ್ಲಿ 4,725 ನಿವೇಶನರಹಿತ ಫಲಾನುಭವಿಗಳನ್ನು ಗುರುತಿಸಲಾಗಿದೆ. 2,250 ಫಲಾನುಭವಿಗಳು ಈಗಾಗಲೇ ತಮ್ಮ ಪಾಲಿನ ಹಣ ಪಾವತಿಸಿದ್ದಾರೆ. ಎರಡನೇ ಹಂತದಲ್ಲಿ 1,370 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪಟ್ಟಿ ಶೀಘ್ರ ಅಂತಿಮಗೊಳಿಸಬೇಕು. ಗೋವಿಂದಪುರದಲ್ಲಿ ಒಂದು ಮಾದರಿ ಮನೆ ನಿರ್ಮಿಸಲು ಈಗಾಗಲೇ ಸೂಚಿಸಲಾಗಿದೆ. ನಿರ್ಮಿತಿ ಕೇಂದ್ರ ಮಾದರಿ ಮನೆ ನಿರ್ಮಾಣ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ವಿರುಪಿನಕೊಪ್ಪ ಬಳಿ ಅಡಿಕೆ ಮಂಡಿ ಹಮಾಲರಿಗಾಗಿ ನಿರ್ಮಿಸಿರುವ ಪ್ರದೇಶದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 10 ಮನೆಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆದೇಶಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT