ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ದೋಷಾರೋಪ ಪಟ್ಟಿ ಶೀಘ್ರ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಸಂಬಂಧ ತನಿಖೆ ಕೈಗೊಂಡಿರುವ ಎಸ್‌ಐಟಿ ಅಧಿಕಾರಿಗಳು, ಬಂಧಿತ ಆರೋಪಿ ಕೆ.ಟಿ.ನವೀನ್‌ಕುಮಾರ್‌ ವಿರುದ್ಧ ಇನ್ನೆರಡು ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

‘2017ರ ಸೆಪ್ಟೆಂಬರ್ 5ರಂದು ನಡೆದಿದ್ದ ಹತ್ಯೆಗೆ ನವೀನ್ ಸಂಚು ರೂಪಿಸಿದ್ದ. ಆತನ ಜತೆಗೆ ಇನ್ನು ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ. ಸದ್ಯಕ್ಕೆ ನವೀನ್ ವಿರುದ್ಧ ಸುಮಾರು 550 ಪುಟಗಳ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ನವೀನ್ ಕೆಲವು ಶಾರ್ಪ್‌ ಶೂಟರ್‌ ಜತೆ ಸಂಪರ್ಕದಲ್ಲಿದ್ದ. ಕೊಳ್ಳೇಗಾಲ ಹಾಗೂ ಸತ್ಯಮಂಗಲ ಅರಣ್ಯ ಪ್ರದೇಶಗಳಲ್ಲಿ ಅವರೊಂದಿಗೆ ಸಂಚಿನ ಬಗ್ಗೆ ಚರ್ಚೆ ಸಹ ನಡೆಸಿದ್ದ. ಈ ಬಗ್ಗೆ ಆರೋಪಿಯೇ ಹೇಳಿಕೆ ನೀಡಿದ್ದು, ಅದನ್ನು ಆರೋಪ ಪಟ್ಟಿ ಜತೆ ಲಗತ್ತಿಸಲಾಗಿದೆ’

‘ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‌, ಕೊಳ್ಳೇಗಾಲ ಅಥವಾ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಎಸೆದಿರುವ ಮಾಹಿತಿ ಇದೆ. ಅದಕ್ಕಾಗಿ ಹುಡುಕಾಟ ನಡೆದಿದೆ’ ಎಂದು ಮೂಲಗಳು ಹೇಳಿವೆ. ‘ರಾಜರಾಜೇಶ್ವರಿನಗರದಲ್ಲಿರುವ ಗೌರಿ ಲಂಕೇಶ್‌ ಅವರ ಮನೆ ಬಳಿಯೇ ನವೀನ್ ಓಡಾಡಿದ್ದ. ಕೆಲ ಸಂಘಟನೆಗಳ ಮುಖಂಡರ ಮೊಬೈಲ್‌ ಸಂಭಾಷಣೆ ಆಲಿಸಿದಾಗ ಅದು ಗೊತ್ತಾಗಿದೆ. ಈ ಎಲ್ಲ ಅಂಶಗಳ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿದ್ದೇವೆ’ ಎಂದಿವೆ.

ಜಾಮೀನು ತಪ್ಪಿಸಲು ಪಟ್ಟಿ ಸಲ್ಲಿಕೆ: ನವೀನ್‌ನನ್ನು ಬಂಧಿಸಿ ಮೂರು ತಿಂಗಳಾಗುತ್ತಿದ್ದರೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಅದೇ ಕಾರಣ ನೀಡಿ ಆರೋಪಿಗೆ ಜಾಮೀನು ಕೊಡಿಸಲು, ಆತನ ಪರ ವಕೀಲರು ತಯಾರಿ ನಡೆಸುತ್ತಿದ್ದಾರೆ. ಆ ಜಾಮೀನು ತಪ್ಪಿಸುವ ಉದ್ದೇಶದಿಂದಲೇ ಎಸ್‌ಐಟಿ, ಆರೋಪ ಪಟ್ಟಿ ಸಲ್ಲಿಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

‘ಸದ್ಯ ನವೀನ್, ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರೋಪ ಪಟ್ಟಿ ಸಲ್ಲಿಸಿದ ನಂತರ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT