ಬುಧವಾರ, ನವೆಂಬರ್ 13, 2019
22 °C

ನದಿಯಲ್ಲಿ ಕೊಚ್ಚಿಹೋಗಿದ್ದ ಒಬ್ಬರ ಮೃತದೇಹ ಪತ್ತೆ

Published:
Updated:

ಶಿವಮೊಗ್ಗ: ಕುಮುದ್ವತಿ ನದಿಯಲ್ಲಿ ಎರಡು ತಿಂಗಳ ಹಿಂದೆ ಕೊಚ್ಚಿ ಹೋಗಿದ್ದ ಅಮರನಾಥ್ ಮೃತದೇಹ ಸೋಮವಾರ ದೊಡ್ಡಿಮಟ್ಟಿ ಬಳಿ ಪತ್ತೆಯಾಗಿದೆ.

ಭಾರಿ ಮಳೆಗೆ ಕುಂಸಿ–ಚೋರಡಿ ಮಧ್ಯೆ ತುಂಬಿ ಹರಿಯುತ್ತಿದ್ದ ನದಿ ನೋಡಲು ಆ.10ರಂದು ಹೋಗಿದ್ದರು. ಸ್ವಲ್ಪ ದಿನಗಳ ಮೊದಲು ಉದ್ಘಾಟನೆಗೊಂಡಿದ್ದ ಸಾಗರ–ಶಿವಮೊಗ್ಗ ರಸ್ತೆಯ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವೇಗವಾಗಿ ಬಂದ ಜೀಪ್‌ ಡಿಕ್ಕಿಯಾಗಿ ನಾಲ್ವರೂ ನದಿಗೆ ಬಿದ್ದಿದ್ದರು. ಅವರಲ್ಲಿ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಮರುದಿನ ರಾಮಪ್ಪ ಅವರ ಶವ ನದಿ ತೀರದಲ್ಲೇ ಪತ್ತೆಯಾಗಿತ್ತು. ಉಳಿದವರ ಪತ್ತೆಗೆ ರಾಷ್ಟ್ರೀಯ ವಿಪತ್ತು ದಳ, ಮುಳುಗು ತಜ್ಞರು ಹಲವು ವಾರಗಳು ನಡೆಸಿದ ಪ್ರಯತ್ನ ಫಲಕೊಟ್ಟಿರಲಿಲ್ಲ.

ಘಟನೆ ನಡೆದ ಸ್ಥಳದಿಂದ 6 ಕಿ.ಮೀ. ದೂರದ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸ್ಥಳೀಯರಿಗೆ ಮೃತದೇಹ ಸಿಕ್ಕಿದೆ. ಮುಖ. ಕೈಕಾಲುಗಳನ್ನು ಜಲಚರಗಳು ತಿಂದಿವೆ. ಕೈಯಲ್ಲಿದ್ದ ವಾಚು. ಧರಿಸಿದ್ದ ರೇನ್‌ಕೋಟ್, ಉಡುಪುಗಳ ಸಹಾಯದಿಂದ ಕುಟುಂಬದ ಸದಸ್ಯರು ಮೃತರನ್ನು ಪತ್ತೆ ಹಚ್ಚಿದ್ದಾರೆ. ಅಸ್ಥಿಪಂಜರಕ್ಕೆ ಬಟ್ಟೆ ತೊಡಿಸಿದ್ದ ಸ್ಥಿತಿಯಲ್ಲಿ ಮೃತದೇಹ ಇತ್ತು. ಅಂದೇ ನೀರು ಪಾಲಾಗಿದ್ದ ಚೋರಡಿ ಸಮೀಪದ ಸನ್ನಿವಾಸದ ಹರೀಶ್ ಇನ್ನೂ ಪತ್ತೆಯಾಗಿಲ್ಲ. 

‘ನದಿ ಮರಳಲ್ಲಿ ದೇಹ ಹೂತಿರಬಹುದು. ಎರಡು ದಿನಗಳ ಹಿಂದೆ ಮತ್ತೆ ಸುರಿದ ಭಾರಿ ಮಳೆಗೆ ಮೇಲೆ ಬಂದಿರಬಹುದು. ಭಾನುವಾರ ಮೀನುಗಾರರು ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರ ವಶಕ್ಕೆ ನೀಡಲಾಗುವುದು. ಶೀಘ್ರ ಪರಿಹಾರ ವಿತರಿಸಲಾಗುವುದು’ ಎಂದು ತಹಶೀಲ್ದಾರ್ ಗಿರೀಶ್ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)